ಫೋಟೋ: ಅಶೋಕ್ ಬೆಳ್ಮಣ್
ದುಬೈ, ನ.16: ದುಬೈ ಕನ್ನಡಿಗ ಬಳಗದವರು ಶುಕ್ರವಾರದಂದು ದುಬೈ ಶೇಖ್ ಝಾಯಿದ್ ರಸ್ತೆಯ ಜೇಮ್ಸ್ ವೆಲ್ಲಿಂಗ್ಟನ್ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ 59ನೆ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಸಿನಿಮಾದ ಪ್ರಣಯರಾಜನೆಂದೇ ಖ್ಯಾತರಾದ ನಟ ಶ್ರೀನಾಥ್ ಭಾಗವಹಿಸಿದ್ದು, ತಮ್ಮ ಸಿನಿಮಾ ಪಯಣದ ಬಗ್ಗೆಗಿನ ನೆನಪನ್ನು ಮೆಲುಕು ಹಾಕಿದರು.
ನನಗೆ ವಯಸ್ಸಾಗಿದ್ದರೂ ನನ್ನ ನಟನೆಗೆ ವಯಸ್ಸಾಗಿಲ್ಲ. ನಾನು ಇನ್ನೂ ಚಿರಯುವಕನಂತೆಯೇ ಇದ್ದೇನೆ ಎಂಬ ಭಾವನೆ ನನ್ನಲ್ಲಿದೆ. ಸಿನಿಮಾ ಜಗತ್ತು ಇಂದು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದರೆ ಅದಕ್ಕೆ ಕಾರಣ ಕನ್ನಡಿಗರು. ಕನ್ನಡಿಗರ ಋಣ ನಾನು ಎಂದಿಗೂ ಮರೆಯಲ್ಲ. ಇನ್ನು ಮುಂದೆಯೂ ಸಿನಿಮಾದಲ್ಲಿ ನಟಿಸುವ ಮೂಲಕ ನನ್ನ ಜೀವನನ್ನು ಸಾರ್ಥಕಗೊಳಿಸುತ್ತೇನೆ ಎಂದು ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿದರು.
ಗಣ್ಯರೆಲ್ಲರೊಂದಿಗೆ ಸೇರಿಕೊಂಡು ಶ್ರೀನಾಥ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದ ಆರಂಭದಲ್ಲಿ ಚೆಂಡೆ-ತಾಳಗಳ ಮೂಲಕ ಶ್ರೀನಾಥ್ರವರನ್ನು ವೇದಿಕೆಗೆ ಅದ್ದೂರಿ ಮೆರವಣಿಗೆಯ ಮೂಲಕ ಕರೆತರಲಾಯಿತು.
ಚಿಲ್ಲಿವಿಲ್ಲಿ ಕಂಪೆನಿಯ ಸತೀಶ್ ವೆಂಕಟರಮಣ, ಎಂಕ್ವೇರ್ ಕಂಪೆನಿ ಮುಸ್ತಫಾ, ಕನ್ನಡಿಗರು ದುಬೈಯ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಸಂಘಟಕರಾದ ಉಮಾ ವಿಧ್ಯಾದರ್, ಸಾದನ್ ದಾಸ್, ಬಸವರಾಜ್ ಸಾಲಿಮಠ್, ವೀರೇಂದ್ರ ಬಾಬು, ಡಾ. ಮೋಹನ್ ಕುದೂರು, ಶಿವಕುಮಾರ್, ನಟರಾಜನ್ ಹಾಗೂ ಎಂ.ಟಿ.ಆರ್ ರೆಸ್ಟೋರೆಂಟ್ ಗಾಯತ್ರಿ ಅಮಿತ್ ಉದ್ಘಾಟನೆಯ ವೇಳೆ ವೇದಿಕೆಯಲ್ಲಿದ್ದರು.
ಪಂಡಿತ್ ಮಾರುತಿ ರಾವ್ ಇನಾಂದಾರ್ರ ಶಿಷ್ಯೆ ವಿದುಷಿ ಕಲ್ಪನಾ ಸುಮಂತ್ರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ -ಸುಗಮ ಸಂಗೀತ ಕಛೇರಿ ನಡೆಯಿತು. ಪಂಡಿತ್ ಹರಿಪ್ರಸಾದ್ ಚೌರಾಸಿಯಾರ ಶಿಷ್ಯರಾದ ಪಂಡಿತ್ ಹಿಮಾನ್ಷುನಂದರವರ ಮಧುರವಾದ ಕೊಳಲು ವಾದನ ನೆರೆದವರನ್ನು ರೋಮಾಂಚನಗೊಳಿಸಿತು. ಇವರಿಗೆ ಕೀಬೋಡ್ನಲ್ಲಿ ಮಂಗಳಾಂಬ, ತಬಲ ಗುರು ಮೂರ್ತಿಯವರು ಬಾರಿಸಿ ಸಾಥ್ ನೀಡಿದರು.
‘ಯಾವ ಮೋಹನ ಮುರಳಿ ಕರೆಯಿತೋ’ ಹಾಗೂ ಸಂತ ಶಿಶುನಾಳ ಶರೀಫರ ‘ಕೋಡಗನ ಕೋಳಿ ನುಂಗಿತ್ತಾ ನೋಡವ್ವಾ ತಂಗಿ’ ಹಾಡಿಗೆ ಚಪ್ಪಾಳೆಯ ಮೂಲಕ ಸಂಗೀತ ರಸಿಕರು ತಮ್ಮ ಪ್ರೋತ್ಸಾಹವನ್ನು ವ್ಯಕ್ತಪಡಿಸಿದರು.
ಕುಮಾರಿ ಪ್ರಜ್ಞಾ ವಸುಪಾಲ್ಳ ಸ್ವಾಗತ ನೃತ್ಯದಿಂದ ಆರಂಭಗೊಂಡು, ಕುಮಾರಿ ಮಾನ್ಯ ಸತೀಶ್ ‘ಕೃಷ್ಣಾ ನೀ ಬೇಗನೆ ಬಾರೊ’, ಸುಗ್ಗಿ ಕುಣಿತ ಹೀಗೆ ವಿವಿಧ ತಂಡಗಳಿಂದ ನಡೆದ ಮನಮೋಹಕ ನೃತ್ಯ ಪ್ರಕಾರಗಳು ನೆರೆದವರನ್ನು ಉಲ್ಲಾಸಭರಿತರನ್ನಾಗಿಸಿತು. ಬಳಿಕ ಶಿವಕುಮಾರ್, ಉದಯ್ ನಂಜಪ್ಪ, ದೀಪ ಜೊತೆಯಾಗಿ ಚಿತ್ರನಟ ಡಾ.ಶ್ರೀನಾಥ್ ಅಭಿನಯಿಸಿದ ಹಳೆಯ ಚಿತ್ರ ಗೀತೆಗಳನ್ನು ಹಾಡಿದರು. ಈ ವೇಳೆ ಡಾ.ಶ್ರೀನಾಥ್ ಹೆಜ್ಜೆ ಹಾಕಿದಾಗ ಕೆಲ ಸಭಿಕರು ವೇದಿಕೆ ಮೇಲೆ ಬಂದು ಅವರ ಜೊತೆ ಹೆಜ್ಜೆ ಹಾಕಿ ಕುಣಿದರು.
ಇದೇ ವೇಳೆ ನಟ ಡಾ.ಶ್ರೀನಾಥ್ರನ್ನು ಸನ್ಮಾನಿಸಲಾಯಿತು. ಖ್ಯಾತ ಹಾಸ್ಯಗಾರ್ತಿ ಸುಧಾ ಬರಗೂರು ತಮ್ಮ ಹಾಸ್ಯಭರಿತ ಮಾತುಗಳನ್ನು ಸಮಾರಂಭದ ಮುಂದಿಟ್ಟು ನೆರೆದವರಿಗೆ ಇನ್ನಷ್ಟು ಮನರಂಜನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ದುಬೈಯ ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ, ಪ್ರಕಾಶ್ ಪಯ್ಯರ್, ಗಣೇಶ್ ರೈ, ಕರ್ನೂರು ಮೋಹನ್ ರೈ, ಶಾರ್ಜಾ ಕರ್ನಾಟಕ ಸಂಘದ ಪದಾಧಿಕಾರಿಗಳು, ರೇಡಿಯೋ ಸ್ಪೈಸ್ ಹರ್ಮನ್ ಲೂಯಿಸ್, ಅರುಣ್ ಮುತ್ತುಗದುರ್, ಹೀರಣ್ಣ ಮುಲಿಮನಿ, ರಿಯಾಲಿಟಿ ಇಂಡಿಯಾ ಯೆಕ್ಷ್ಪೊ ಝಿಯ ಸೇಠ್ ಸಹಿತ ಹಲವರು ಪ್ರಮುಖರು ಹಾಜರಿದ್ದರು.