ಕರ್ನಾಟಕ

ಹೊಸ ಬಾಳಿಗೆ ಅಡಿಯಿಟ್ಟ 97 ಜೋಡಿ: ವಧು–ವರರಿಗೆ ಅಕ್ಷತೆ ಬದಲಿಗೆ ಹೂಮಳೆ

Pinterest LinkedIn Tumblr

pvec20nov14rjct10ep

ಹೊಳಲ್ಕೆರೆ: ವೇದಿಕೆಯ ತುಂಬಾ 97 ವರರು ಶ್ವೇತವಸ್ತ್ರಧಾರಿಗಳಾಗಿ ಕುಳಿತಿದ್ದರು. ಅವರ ಪಕ್ಕದಲ್ಲೇ ರೇಷ್ಮೆ ಸೀರೆ ಉಟ್ಟ 97 ವಧುಗಳು ಆಸೀನರಾಗಿದ್ದರು. ಇಡೀ ವೇದಿಕೆ ನವ ಜೋಡಿಗಳಿಂದ ತುಂಬಿತ್ತು. ವೇದಿಕೆಯ ಮಧ್ಯದಲ್ಲಿ ಹತ್ತಾರು ಮಠಾ­ಧೀಶರು ಕುಳಿತಿದ್ದರು. ಇವರ ಜತೆಯಲ್ಲಿ ಮುಖ್ಯ­ಮಂತ್ರಿ, ಸಚಿವರು, ಸಾಹಿತಿಗಳು ವೇದಿಕೆ ಹಂಚಿ­ಕೊಂಡಿದ್ದರು. ಪುರೋಹಿತರು ಮಂತ್ರಘೋಷ ಆರಂಭಿ­ಸುತ್ತಿದ್ದಂತೆ ಒಮ್ಮೆಲೇ ಅಷ್ಟೂ ಜೋಡಿಗಳು ತಾಳಿ ಕಟ್ಟುವ ಮೂಲಕ ಹೊಸಬಾಳಿಗೆ ಅಡಿಯಿಟ್ಟರು. ಅಲ್ಲಿದ್ದ­ವರೆಲ್ಲ ನವಜೋಡಿಗಳನ್ನು ಹರಸಿದರು…

–ಇದು ಪಟ್ಟಣದಲ್ಲಿ ಎಚ್‌. ಆಂಜನೇಯ ಸಮಾಜ ಸೇವಾ ಪ್ರತಿಷ್ಠಾನ ಬುಧವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 97ನೇ ಜನ್ಮದಿನದ ಅಂಗವಾಗಿ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಏರ್ಪಡಿಸಿದ್ದ ಸಾಮೂಹಿಕ ಮದುವೆ ಕಾರ್ಯ­ಕ್ರಮದಲ್ಲಿ ಕಂಡುಬಂದ ಚಿತ್ರಣ.

ಅಕ್ಷತೆಗೆ ಅಕ್ಕಿ ಬಳಸಲಿಲ್ಲ: ಮದುವೆಯಲ್ಲಿ ವಧು–ವರರ ತಲೆಯ ಮೇಲೆ ಅಕ್ಕಿಕಾಳು (ಅಕ್ಷತೆ) ಹಾಕಿ, ಕೈ ಮುಗಿದು ಹರಸುವುದು ಸಾಮಾನ್ಯ. ಇಲ್ಲಿ ಅಕ್ಕಿ ಬದ­ಲಾಗಿ ವಧು–ವರರ ಮೇಲೆ ಹೂ ಚೆಲ್ಲುವ ಮೂಲಕ ಹಾರೈಸ­ಲಾಯಿತು.  ಸಚಿವ ಎಚ್‌. ಆಂಜ­ನೇಯ ಅವರ ಪುತ್ರಿ ಅನು­ಪಮಾ ಮತ್ತು ಅಳಿಯ ಶಾಶ್ವತ್‌ ಮದುವೆ ಬಸವತತ್ವದ ಆಧಾರದ ಮೇಲೆ ನಡೆಯಿತು.

ಶಿವಮೂರ್ತಿ ಶರಣರು ಜೋಡಿಗಳು ಪ್ರಮಾಣ ಮಾಡಲು ಬರೆದಿರುವ ವಾಕ್ಯಗಳನ್ನು ಅನುಪಮಾ ಮತ್ತು ಶಾಶ್ವತ್‌ ಓದಿ­ದರು.
‘ಸತಿಪತಿಗಳಾದ ನಾವು ಮುಂದೆ ಆದ­ರ್ಶದ ಬದುಕು ನಡೆಸುತ್ತೇವೆ. ಒಂದೇ ಮಗು ಪಡೆಯು­ತ್ತೇವೆ. ಆ ಮಗುವಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕಲಿಸುತ್ತೇವೆ. ಸಮಾಜಕ್ಕೆ ಮಾದರಿ­ಯಾ­ಗುತ್ತೇವೆ’ ಎಂದು ಶಪಥ ಮಾಡಿದ ನಂತರ ತಾಳಿ ಕಟ್ಟಿದರು. ಸಚಿವ ಆಂಜನೇಯ ಮತ್ತು ಪತ್ನಿ ವಿಜ­ಯಮ್ಮ ಭಾವುಕರಾಗಿ ಹರಸಿದರು. ಸಾಮೂಹಿಕ ಮದುವೆ ಸಮಾರಂಭ­ದಲ್ಲಿ ಮುಸ್ಲಿಂ ಜೋಡಿಯ ಮದುವೆಯೂ ನಡೆಯಿತು. ಕುರಾನ್‌ನ ಕೆಲವು ಬೋಧನೆಗಳನ್ನು ಹೇಳಿಕೊಡುವ ಮೂಲಕ ನಿಖಾ ಮಾಡಿಸಲಾಯಿತು.

ಹಸು ಉಡುಗೊರೆ
ನವಜೋಡಿಗಳಿಗೆ ವಿತರಿಸಲು ತಮಿಳು­ನಾಡು ಮತ್ತು ತುಮಕೂರು ಭಾಗದ ಜರ್ಸಿ ಮತ್ತು ಎಚ್‌ಎಫ್‌ ತಳಿಯ 55 ಹಸುಗಳನ್ನು ತರಿಸಲಾಗಿತ್ತು.  ಲಾಟರಿ ಎತ್ತುವ ಮೂಲಕ ದಂಪತಿಗೆ ಹಸು ವಿತರಿಸಲಾಯಿತು. ಅತ್ತ ಮದುವೆ ಸಮಾರಂಭ ನಡೆಯುತ್ತಿದ್ದರೆ, ಇತ್ತ ಹಸುವೊಂದು ಮುದ್ದಾದ ಹೆಣ್ಣು ಕರುವಿಗೆ ಜನ್ಮ ನೀಡಿತು. ಸಾಮೂಹಿಕ ಮದುವೆಗೆ ರಾಜ್ಯದ ನಾನಾ ಕಡೆಗಳಿಂದ ಅತಿಥಿ­ಗಳು ಆಗಮಿಸಿದ್ದು, ಇದರಿಂದ ಪಟ್ಟ­ಣ­ದಲ್ಲಿ ಕೆಲಕಾಲ ಸಂಚಾರ ಸಮಸ್ಯೆ ಎದುರಾಯಿತು.

ಸಭಿಕರನ್ನು ನಗಿಸಿದ ಸಿ.ಎಂ: ಮುಖ್ಯಮಂತ್ರಿ ಸಿದ್ದರಾ­ಮಯ್ಯ ನವಜೋಡಿಗಳಿಗೆ ‘ಒಂದೇ ಮಗು ಮಾಡಿಕೊ­ಳ್ಳಬೇಕು’ ಎಂದು ಹೇಳುವ ಮೂಲಕ ಜನರನ್ನು ನಗಿಸಿದರು. ಉಳ್ಳವರು ಎಷ್ಟು ಬೇಕಾದರೂ ಖರ್ಚು ಮಾಡಿ ಮದುವೆ ಮಾಡಿಕೊಳ್ಳಲಿ. ಬಡವರು ಮಾತ್ರ ಸರಳವಾಗಿ ಮದುವೆ ಮಾಡಿಕೊಳ್ಳಬೇಕು.

‘ಪಕ್ಕದ ಮನೆ­ಯವಳು ಓಲೆ ಹಾಕಿ ಕೊಂಡಿದ್ದಾಳೆ ಎಂದು ಇವಳು ಕಿವಿ ಕೊಯ್ಕೊಂಡ್ಲಂತೆ’ ಎಂಬ ಗಾದೆ ಹೇಳಿದಾಗ ಮತ್ತೊಮ್ಮೆ ಜನ ಜೋರಾಗಿ ನಕ್ಕರು. ಪಕ್ಕದಲ್ಲಿ ಕುಳಿತಿದ್ದ ಸಚಿವೆ ಉಮಾಶ್ರೀ ಕಡೆಗೆ ನೋಡಿ ‘ಉಮಾಶ್ರೀ ಎಷ್ಟು ಬೇಕಾದರೂ ಬಂಗಾರ ಹಾಕಿಕೊಳ್ಳಲಿ’ ಎಂದಾಗ ಪ್ರೇಕ್ಷಕರ ಕಡೆಯಿಂದ ಮತ್ತೊಮ್ಮೆ ಜೋರು ನಗೆ ಮತ್ತು ಕರತಾಡನ ಕೇಳಿಬಂತು.

Write A Comment