ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಪರ ವಕೀಲರಿಗೆ ಹೈಕೋರ್ಟ್ ಬುಧವಾರ ತೀವ್ರ ಛೀಮಾರಿ ಹಾಕಿತು.
ಈ ಮೊದಲು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ಪೀಠವು ವಿಚಾರಣೆಯಿಂದ ಹಿಂದೆ ಸರಿದ ಕಾರಣ ನ್ಯಾಯಮೂರ್ತಿ ಎ.ಎನ್. ವೇಣು ಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠವು ಬುಧವಾರ ವಿಚಾರಣೆ ಮುಂದುವರಿಸಿತು. ನ್ಯಾಯಪೀಠದ ತೀವ್ರ ಅಸಮಾಧಾನದ ಹಿನ್ನೆಲೆ ಯಲ್ಲಿ ಸ್ವಾಮೀಜಿ ಪರ ಹಿರಿಯ ವಕೀಲರಾದ ಕೆ.ಜಿ. ರಾಘವನ್ ಅವರು ವಕಾಲತ್ತು ವಹಿಸಿರುವ ಪಿ.ಎನ್.ಮನಮೋಹನ್ ಪರವಾಗಿ ನ್ಯಾಯಾಲಯದ ಕ್ಷಮೆ ಯಾಚಿಸಿದರು.
ತರಾಟೆ: ‘ಅತ್ಯಾಚಾರದ ದೂರನ್ನು ವಜಾ ಗೊಳಿಸುವಂತೆ ಹಾಗೂ ಪ್ರಕರಣದ ಆರೋಪಿಯಾಗಿರುವ ಸ್ವಾಮೀಜಿಯವ ರನ್ನು ದೈಹಿಕ ಪರೀಕ್ಷೆಗೆ ಒಳಪಡಿಸದಂತೆ ನಡೆಸುತ್ತಿರುವ ಕಾನೂನಿನ ಕಸರತ್ತುಗಳು ಇದೇ ರೀತಿ ನಡೆಯುತ್ತಾ ಹೋದರೆ ಸಾರ್ವಜನಿಕರು ಕೋರ್ಟಿನ ಮೇಲೆ ಇಟ್ಟಿರುವ ಭರವಸೆ ಏನಾಗಬಲ್ಲದು’ ಎಂದು ಪೀಠವು ಸ್ವಾಮೀಜಿ ಪರ ವಕೀಲರನ್ನು ತರಾಟೆಗೆ ತೆಗೆದು ಕೊಂಡಿತು.
‘ಪ್ರಕರಣದಲ್ಲಿ ವಿನಾಕಾರಣ ಕೋರ್ಟಿನ ದಿಕ್ಕು ತಪ್ಪಿಸಲಾಗುತ್ತಿದೆ. ಘಟನೆಯ ವಿವರಗಳನ್ನು ಕೋರ್ಟಿಗೆ ಮನವರಿಕೆ ಮಾಡಿಕೊಡುವಲ್ಲಿ ನಿಜಾಂಶ ಮರೆಮಾಚಲಾಗುತ್ತಿದೆ’ ಎಂದು ನ್ಯಾಯ ಮೂರ್ತಿಗಳು ಅರ್ಜಿದಾರರ ಪರ ವಕೀಲರ ಮೇಲೆ ಇನ್ನಿಲ್ಲದ ಅಸಮಾಧಾನ ವ್ಯಕ್ತಪಡಿಸಿದರು.
‘ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಬೇಕು ಎಂದು ಪ್ರತಿಪಾದಿಸುವ ಮೂಲಕ ವಿಳಂಬ ಧೋರಣೆ ಪ್ರದರ್ಶಿಸಿದ್ದೀರಿ. ಹೀಗಾಗಿ ಈಗ ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನೂ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಇದು ಸೋಜಿಗದ ವಿಚಾರ’ ಎಂದು ಪೀಠವು ಆಶ್ಚರ್ಯ ವ್ಯಕ್ತಪಡಿಸಿತು.
‘ನೀವು ಕೇವಲ ಅರ್ಜಿದಾರರ ಮೇಲಿನ ಅತೀವ ಕಾಳಜಿಯೊಂದಿಗೇ ವಾದ ಮಂಡಿಸುತ್ತಿದ್ದೀರಿ’ ಎಂದು ಹಿರಿಯ ವಕೀಲ ಕೆ.ಜಿ.ರಾಘವನ್ ಅವರನ್ನು ಕುಟುಕಿದ ಪೀಠವು, ‘ಸಮಾಜದ ಇತರರನ್ನೂ ಗಮನಿಸಿ. ನಿತ್ಯಾನಂದ ಸ್ವಾಮೀಜಿ ಪ್ರಕರಣದ ಸುಪ್ರೀಂಕೋರ್ಟ್ ತೀರ್ಪನ್ನು ಓದಿ ಕೊಂಡು ಬನ್ನಿ’ ಎಂದು ಸಲಹೆ ನೀಡಿತು.
ಕಾನೂನು ಪಾಲನೆ ಆಗಿಲ್ಲ: ಸ್ವಾಮೀಜಿ ಪರ ಹಿರಿಯ ವಕೀಲ ಕೆ.ಜಿ.ರಾಘವನ್ ಅವರು ಮಧ್ಯಾಹ್ನದ ಕಲಾಪದಲ್ಲಿ ಸುದೀರ್ಘ ಮೂರು ಗಂಟೆಗಳ ಕಾಲ ತಮ್ಮ ವಾದ ಮಂಡಿಸಿದರು. ಸುಪ್ರೀಂ ಕೋರ್ಟಿನ ಹಲವು ತೀರ್ಪುಗಳನ್ನು ಉಲ್ಲೇಖಿಸಿದರು.
‘ಪ್ರಕರಣದ ಕುರಿತಂತೆ ನಡೆಯು ತ್ತಿರುವ ಸಿಐಡಿ ತನಿಖೆಯ ಭಾಗವಾಗಿ ಸ್ವಾಮೀಜಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು ಕಾನೂನು ಬಾಹಿರ. ಈ ನೋಟಿಸಿನಲ್ಲಿ ಆರೋಪಿಯನ್ನು ವೈದ್ಯರು ಯಾವ ರೀತಿಯ ದೈಹಿಕ ಪರೀಕ್ಷೆಗೆ ಒಳಪಡಿಸುತ್ತಾರೆ ಎಂಬ ವಿವರಗಳೇ ಇಲ್ಲ. ಹೀಗಾಗಿ ಇದು ಅರ್ಜಿದಾರರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ’ ಎಂದು ಅವರು ಪ್ರತಿಪಾದಿಸಿದರು.
ಅರ್ಜಿದಾರರ ಪರವಾಗಿ ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ ಹಾಜರಿದ್ದರು.
ಪ್ರಾಸಿಕ್ಯೂಷನ್ ಪರವಾಗಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ವ ಕುಮಾರ್, ಕೇಂದ್ರ ಸರ್ಕಾರದ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಕೃಷ್ಣ ಎಸ್.ದೀಕ್ಷಿತ್, ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ, ಸರ್ಕಾರದ ವಿಶೇಷ ವಕೀಲರಾದ ಬಿ.ಟಿ.ವೆಂಕಟೇಶ್ ಹಾಜರಿದ್ದರು.
ಹೆಣ್ಣಿಗೆ ಘನತೆಯೇ ಮುಖ್ಯ…
‘ಯಾವುದೇ ಹೆಣ್ಣಿಗೆ ತನ್ನ ಘನತೆಯೇ ಮುಖ್ಯ. ಇದು ಗಂಡಸರಿಗೆ ಗೊತ್ತಾಗುವುದಿಲ್ಲ. ಸಾಂವಿಧಾನಿಕ ಹಕ್ಕು ಉಲ್ಲಂಘನೆ ಆಗಿದೆ ಎಂದು ಹೇಳುವಾಗ ಇದೇ ವೇಗದಲ್ಲಿ ಕಾನೂನುಗಳೂ ಕಾಲಕ್ಕೆ ತಕ್ಕಂತೆ ಬದಲಾಗಿರುತ್ತವೆ ಎಂಬುದನ್ನು ನಾವು ಮನಗಾಣಬೇಕು’.
-ನ್ಯಾ.ಎ.ಎನ್.ವೇಣುಗೋಪಾಲ ಗೌಡ