ಬೆಳಗಾವಿ, ನ.20: ಕಿರಿಯ ಎಂಜಿನಿಯರ್ ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಇಲ್ಲಿನ ಹೆಸ್ಕಾಂನ ಮೂವರು ಎಂಜಿನಿಯರ್‌ಗಳನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶುಕರಾಂ ಮಜಗಿ, ಕಟ್ಕಳಕಿ ಸೇರಿದಂತೆ ಮೂವರು ಎಂಜಿನಿಯರ್‌ಗಳು ಬಂಧಿತರಾಗಿದ್ದಾರೆ. ಗ್ರಾಮಾಂತರ ಹೆಸ್ಕಾಂನಲ್ಲಿ ಕಿರಿಯ ಎಂಜಿನಿಯರ್ ಆಗಿರುವ ಮೈಸೂರು ಮೂಲದ ಯುವತಿಯನ್ನು ಮೂವರು ಎಂಜಿನಿಯರ್‌ಗಳು ನ.13ರಂದು ಮನೆಯೊಂದರಲ್ಲಿ ಕೂಡಿ ಹಾಕಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯನ್ನು ಯಾರ ಬಳಿಯೂ ಹೇಳದಂತೆ ಬೆದರಿಕೆ ಹಾಕಿದ್ದೇ ಅಲ್ಲದೆ ಪ್ರಮೋಷನ್‌ಗೆ ವ್ಯವಸ್ಥೆ ಮಾಡಿಸುತ್ತೇವೆ. ವಿಷಯ ಯಾರಿಗಾದರೂ ತಿಳಿಸಿದರೆ ಇಲ್ಲಿಂದ ವರ್ಗಾವಣೆಯಾಗಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದೆ. ಆರೋಪಿಗಳು ಪ್ರಭಾವಿಗಳಾಗಿದ್ದು, ರಾಜಕೀಯ ಮುಖಂಡರ ಬೆಂಬಲ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಈ ಸಂಬಂಧ ದೌರ್ಜನ್ಯಕ್ಕೊಳಗಾದ ಎಂಜಿನಿಯರ್ ಯುವತಿ ಮೇಲಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ನೊಂದ ಯುವತಿ ನಿನ್ನೆ ಮಾಳಮಾರುತಿ ಠಾಣೆಗೆ ಮೂವರು ಎಂಜಿನಿಯರ್‌ಗಳ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿತರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ಹಿಂದೆ ೨೦೧೦ರಲ್ಲಿ ಶುಕಾರಾಂ ಮಜಗಿ ಅವರು ಕಿರಿಯ ಮಹಿಳಾ ಎಂಜಿನಿಯರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎನ್ನಲಾಗಿದೆ. ಆಗಲೂ ಸಹ ಪ್ರಕರಣ ದಾಖಲಾಗಿದ್ದರೂ ರಾಜಕೀಯ ಪ್ರಭಾವ ಬಳಸಿ ಅದನ್ನು ಮುಚ್ಚಿಹಾಕಲಾಗಿತ್ತು ಎಂದು ತಿಳಿದುಬಂದಿದೆ.