ಬೆಂಗಳೂರು, ನ.20: ರಾಜ್ಯದಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸಲು ಪ್ರತಿಪಕ್ಷ ಬಿಜೆಪಿ ಯತ್ನಿಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.
ಗುರುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀರ್ಥಹಳ್ಳಿಯ ವಿದ್ಯಾರ್ಥಿನಿ ನಂದಿತಾಳ ಅಸಹಜ ಸಾವಿಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಆದರೂ, ಬಿಜೆಪಿಯವರು ಈ ಪ್ರಕರಣವನ್ನು ಮುಂದಿಟ್ಟುಕೊಂಡು ಕೋಮು ಗಲಭೆಗಳನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ನ್ಯಾಯಸಮ್ಮತವಾದ ತನಿಖೆಯಾಗಬೇಕು. ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ನಿಲುವು. ಆದರೆ, ಯಾವುದೇ ಕಾರಣಕ್ಕೂ ಮುಗ್ಧ ಅಮಾಯಕರು ಬಲಿಪಶುಗಳಾಗಬಾರದು. ಆದುದರಿಂದ, ಬಿಜೆಪಿಯವರು ತನಿಖೆ ಪೂರ್ಣಗೊಂಡು ವರದಿ ಬರುವವರೆಗೆ ಕಾಯುವುದು ಉತ್ತಮ ಎಂದು ರತ್ನಾಕರ್ ಹೇಳಿದರು.
ಸರಕಾರ, ಸಚಿವರ ವಿರುದ್ಧ ಬಿಜೆಪಿ ಮುಖಂಡರು ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ. ಜನರು ಅವರಿಗೆ ಪ್ರತಿಭಟನೆಗಳನ್ನು ಮಾಡುವ ಕೆಲಸ ನೀಡಿದ್ದಾರೆ. ಪ್ರತಿಪಕ್ಷವಾಗಿ ಅವರು ಏನು ಮಾಡಬೇಕೋ ಅದನ್ನು ಮಾಡಲಿ, ಆಡಳಿತ ಪಕ್ಷವಾಗಿ ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಅವರು ತಿಳಿಸಿದರು.
ಅತ್ಯಾಚಾರ, ದೌರ್ಜನ್ಯ ಸೇರಿದಂತೆ ಯಾವುದೇ ಅಪರಾಧ ಪ್ರಕರಣ ಸಂಭವಿಸಿದ ಕೂಡಲೇ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದರೆ, ಅಪರಾಧಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ವಿಳಂಬ ಮಾಡಿದಷ್ಟೂ ಅವರಿಗೆ ಸಾಕ್ಷಾಧಾರಗಳನ್ನು ನಾಶ ಮಾಡಲು ಅವಕಾಶ ನೀಡಿದಂತಾಗುತ್ತದೆ ಎಂದು ರತ್ನಾಕರ್ ಹೇಳಿದರು.
ಬಿಇಒ ಹಾಗೂ ಡಿಡಿಪಿಐಗಳ ವರ್ಗಾವಣೆಗೆ ಸಂಬಂಧಿಸಿದ ನೀತಿಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ, ಕಾನೂನು ಇಲಾಖೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸದನದ ಒಪ್ಪಿಗೆ ಪಡೆದು ವರ್ಗಾವಣೆ ನೀತಿಗೆ ತಿದ್ದುಪಡಿ ತರಲಾಗುವುದು ಎಂದು ಕಿಮ್ಮನೆ ರತ್ನಾಕರ್ ತಿಳಿಸಿದರು.
ವಿದ್ಯಾರ್ಥಿ ಪೊಲೀಸ್: ಗೃಹ ಇಲಾಖೆಯ ವತಿಯಿಂದ ವಿದ್ಯಾರ್ಥಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತರುವ ಕುರಿತು ಚಿಂತನೆ ನಡೆದಿದೆ. ಈಗಾಗಲೇ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗಗಳಿವೆ. ವಿದ್ಯಾರ್ಥಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತರುವ ಸಂಬಂಧ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗೃಹ ಇಲಾಖೆಗಳು ಜಂಟಿಯಾಗಿ ಚರ್ಚಿಸಿ ಕಾರ್ಯಕ್ರಮ ಜಾರಿಗೆ ತರುತ್ತೇವೆ ಎಂದು ಸಚಿವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.1ರಂದು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಸಾರಿಗೆ ವ್ಯವಸ್ಥೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳ ಘೋಷಣೆ ಮಾಡಲಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.
http://vbnewsonline.com