ಗಂಗಾವತಿ, ನ.23: ನಗರದ ಸಮೀಪದ ಸಂಗಾಪೂರ ಸುತ್ತಲಿನ ಗ್ರಾಮಗಳ ಜನ ಜಾನುವಾರಿಗೆ ಕೆಲವು ದಿನಗಳಿಂದ ತೊಂದರೆ ಕೊಡುತ್ತಿದ್ದ ಚಿರತೆಯೊಂದು ಇಂದು ಬೆಳಗ್ಗಿನ ಜಾವ ಅರಣ್ಯ ಇಲಾಖೆಯ ಇಟ್ಟಿದ್ದ ಬೋನಿಗೆ ಬಿದ್ದ ಘಟನೆ ನಡೆದಿದೆ.
ತಾಲೂಕಿನ ಸಂಗಾಪೂರ ಗೂಗಿಬಂಡಿ ಕ್ಯಾಂಪ್ ಹಾಗೂ ವಿಪ್ರಪ್ರದೇಶ ಜನರಿಗೆ ಮತ್ತು ಜಾನುವಾರುಗಳಿಗೆ ತೊಂದರೆ ಕೊಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೂಗಿಬಂಡಿ ಹಾಗೂ ಸಂಗಾಪೂರ ಗ್ರಾಮದ ಕುರಿ, ಮೇಕೆ ನಾಯಿಗಳನ್ನು ಹಿಡಿದು ತಿನ್ನುತ್ತಿದ್ದ ಚಿರತೆಯಿಂದಾಗಿ ಜನರು ಭಯಭೀತರಾಗಿದ್ದರು. ಈ ಹಿಂದೆ ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗೆ ಅರಣ್ಯ ಇಲಾಖೆಯವರು ಸಂಗಾಪೂರ ವಿಪ್ರದೇಶದಲ್ಲಿ ಬೋನನ್ನು ಇಟ್ಟು ಚಿರತೆಯನ್ನು ಹಿಡಿಯಲು ಯೋಜಿಸಿದ್ದರು. ಇಂದು ಬೆಳಗ್ಗಿನ ಜಾವ ಚಿರತೆ ಬೋನಿಗೆ ಬಿದ್ದಿದೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಗುರುವಿನಗೌಡ, ಸಿಬ್ಬಂದಿಗಳಾದ ಮಾರುತಿ, ನಾಗರಾಜ ಭೇಟಿ ನೀಡಿದ್ದಾರೆ.
ಕರ್ನಾಟಕ