ಕೋಲಾರ: ಸುಮಾರು 15 ವರ್ಷಗಳಿಂದ ಕಾಲಿಗೆ ಕಟ್ಟಿದ್ದ ಸರಪಳಿಯಿಂದ ಬಾಬು ಅವರಿಗೆ ಸದ್ಯ ಮುಕ್ತಿ ಸಿಕ್ಕಿದೆ. ಆದರೆ, ಅವರ ತಾಯಿ ಲಕ್ಷ್ಮಮ್ಮ ಅವರಿಗೆ ಇದರಿಂದ ಸಮಾಧಾನ ಆಗಿಲ್ಲ. ಅವರ ನೋವು ಮತ್ತಷ್ಟು ಹೆಚ್ಚಾಗಿದೆ.
ಮುಳಬಾಗಿಲು ತಾಲ್ಲೂಕಿನ ಹೊನಗಾಳಹಳ್ಳಿಯ ಲಕ್ಷ್ಮಮ್ಮ ಅವರ ಮಗ ಬಾಬು ಮತ್ತು ಮಗಳು ಕುಟ್ಟಿ ಹುಟ್ಟಿನಿಂದ ಬುದ್ಧಿಮಾಂದ್ಯರು. 37 ವರ್ಷದ ಬಾಬುಗೆ ಮಾತು ಬರುವುದಿಲ್ಲ. 35 ವರ್ಷದ ಕುಟ್ಟಿ ತೊದಲುತ್ತಾರೆ. ಆಕೆ ಏನು ಮಾತನಾಡುತ್ತಾಳೆ ಎಂಬುದು ಅರ್ಥವಾಗುವುದಿಲ್ಲ.
ಕುಟ್ಟಿ ಊರೆಲ್ಲ ಸುತ್ತಾಡಿಕೊಂಡು ಯಾರದಾದರೂ ಮನೆಯಲ್ಲಿ ಊಟ ಮಾಡುತ್ತಾಳೆ. ಆಕೆ ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ಬಾಬು ಆ ರೀತಿ ಅಲ್ಲ. ಬೇರೆಯವರ ಮನೆಗಳಿಗೆ ಹೋಗಿ ವಸ್ತುಗಳನ್ನು ಕದಿಯುವುದು, ಇನ್ನೊಬ್ಬರಿಗೆ ತೊಂದರೆ ಕೊಡುವುದು ಮಾಡುತ್ತಿದ್ದ. ಇದರಿಂದ ರೋಸಿ ಹೋದ ಗ್ರಾಮಸ್ಥರು ಲಕ್ಷ್ಮಮ್ಮ ಬಳಿ ನಿತ್ಯ ದೂರು ತರುತ್ತಿದ್ದರು. ಅನ್ಯ ಮಾರ್ಗವಿಲ್ಲದೆ ಲಕ್ಷ್ಮ್ಮಮ್ಮ ಅವರು ಬಾಬು ಕಾಲಿಗೆ ಸರಪಳಿ ಹಾಕಿ 15 ವರ್ಷಗಳಿಂದ ಮನೆಯಲ್ಲಿಯೇ ಕೂಡಿಹಾಕಿದ್ದರು.
ಈ ವಿಷಯ ಜಿಲ್ಲಾಡಳಿತ, ಆರೋಗ್ಯ ಸಚಿವ ಯು.ಟಿ.ಖಾದರ್ ಗಮನಕ್ಕೆ ಬರುತ್ತಿದ್ದಂತೆಯೇ ಬಾಬು ಅವರನ್ನು ಬಂಧನದಿಂದ ಬಿಡಿಸಿ ಶನಿವಾರ ರಾತ್ರಿ (ನ. 22ಂದು) ಕೋಲಾರದ ನರಸಿಂಹರಾಜ ಆಸ್ಪತ್ರೆಗೆ ಸೇರಿಸಲಾಗಿದೆ. ಕುಟ್ಟಿ ಹಾಗೂ ಲಕ್ಷ್ಮಮ್ಮ ಅವರೂ ಆಸ್ಪತ್ರೆಯಲ್ಲೇ ಇದ್ದಾರೆ.
‘ಆಸ್ಪತ್ರೆ ಬದಲು ಮನೆಯಲ್ಲಿ ಇದ್ದರೆ ಚೆನ್ನಾಗಿತ್ತು. ಇಲ್ಲಿ ತುಂಬಾ ಕಷ್ಟ. ಮೂರು ದಿನಗಳಿಂದ ನಿದ್ದೆ ಮಾಡಲು ಬಿಟ್ಟಿಲ್ಲ. ಅವನೂ ಊಟ ಮಾಡಿಲ್ಲ. ಮೂರು ವರ್ಷದ ಮಗು ಇದ್ದಾಗ ಎಲ್ಲ ಕಡೆ ತೋರಿಸಿದ್ದೇವೆ. ವಾಸಿ ಆಗುವುದಿಲ್ಲ ಎಂದು ವೈದ್ಯರು ತಿಳಿಸಿದರು. ಹಾಗಾಗಿ ಸುಮ್ಮನಾಗಿದ್ದೇವೆ’ ಎನ್ನುತ್ತಾರೆ ಲಕ್ಷ್ಮಮ್ಮ.
‘ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗುತ್ತೀರಾ? ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಶಿವಣ್ಣ ಕೇಳಿದರು. ನಾವು ಎಲ್ಲೂ ಹೋಗುವುದಿಲ್ಲ. ಮನೆಗೆ ಹೋಗಬೇಕು ಎಂದು ತಿಳಿಸಿದ್ದೇವೆ. ನಾವು ಬಡವರು. ಮನೆ ಇಲ್ಲ. ಜಮೀನು ಇಲ್ಲ. ಗಂಡ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಜೀವನ ನಡೆಸುವುದು ಕಷ್ಟಕರವಾಗಿದೆ. ನಾನು ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ. ನಮಗೆ ಮನೆ ಕಟ್ಟಿಸಿಕೊಟ್ಟರೆ ಮಕ್ಕಳ ವಾಸಕ್ಕೆ ಅನುಕೂಲವಾಗುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಲಕ್ಷ್ಮಮ್ಮ ಅವರಿಗೆ ಐದು ಜನ ಮಕ್ಕಳು. ಇಬ್ಬರು ಬುದ್ಧಿಮಾಂದ್ಯಕ್ಕೆ ಒಳಗಾಗಿದ್ದು, ಉಳಿದ ಮೂವರು ಹೆಣ್ಣು ಮಕ್ಕಳು ಚೆನ್ನಾಗಿದ್ದಾರೆ. ಅವರಿಗೆಲ್ಲ ಮದುವೆಯಾಗಿದ್ದು, ಬುದ್ಧಿಮಾಂದ್ಯರನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲ ಎನ್ನುತ್ತಾರೆ ಗ್ರಾಮದ ಆಶಾ ಕಾರ್ಯರ್ತೆ ಎಚ್.ವಿ.ಸುಧಾಮಣಿ.
ಲಕ್ಷ್ಮಮ್ಮ ಅವರಿಗೆ 80 ವರ್ಷ ವಯಸ್ಸಾಗಿದೆ. ಆಕೆಯ ಗಂಡ ಚಿನ್ನಪ್ಪಬೋವಿಗೂ ವಯಸ್ಸಾಗಿದ್ದು, ಅನಾರೋಗ್ಯದಿಂದಾಗಿ ಓಡಾಡಲು ಆಗುವುದಿಲ್ಲ. ನಾಲ್ಕೂ ಜನ ಸಣ್ಣ ಹೆಂಚಿನ ಮನೆಯಲ್ಲಿ ವಾಸ ಮಾಡುತ್ತಾರೆ.
ವಂಶಪಾರಂಪರ್ಯವಾಗಿ ಬುದ್ಧಿಮಾಂದ್ಯ ಕಾಯಿಲೆ ಬಂದಿದೆ. ಲಕ್ಷ್ಮಮ್ಮ ಅವರ ಬಾವನ ಮಗನಿಗೂ ಇದೇ ರೀತಿ ಇತ್ತು. ಬಾಬು ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದ. ಮೈಮೇಲಿನ ಬಟ್ಟೆಗಳನ್ನು ಕಿತ್ತು ಎಸೆಯುತ್ತಾನೆ. ಬೇರೆಯವರಿಗೆ ತೊಂದರೆ ಕೊಡುತ್ತಾನೆ ಎಂಬ ಕಾರಣಕ್ಕೆ ತಾಯಿ ಲಕ್ಷ್ಮಮ್ಮ ಮನೆಯಲ್ಲಿ ಕೂಡಿ ಹಾಕಿದ್ದರು ಎನ್ನುತ್ತಾರೆ ಸುಧಾರಾಣಿ.
ಬುದ್ಧಿಮಾಂದ್ಯ ಮಕ್ಕಳು ಹಾಗೂ ಅವರ ತಂದೆ– ತಾಯಿಗೆ ತಲಾ ರೂ 500 ಮಾಸಾಶನ ಬರುತ್ತದೆ. ಆ ಹಣದಲ್ಲೇ ಜೀವನ ನಡೆಸುತ್ತಿದ್ದಾರೆ. ‘ಮಕ್ಕಳ ಕಾಯಿಲೆ ವಾಸಿ ಆಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ಲಕ್ಷ್ಮಮ್ಮ, ಆಸ್ಪತ್ರೆಯಲ್ಲಿ ಇದ್ದು ಪ್ರಯೋಜನವಿಲ್ಲ. ಸರ್ಕಾರ ಆರ್ಥಿಕವಾಗಿ ನೆರವು ನೀಡಿ ಮನೆಗೆ ಕಳುಹಿಸಿಕೊಟ್ಟರೆ ಸಾಕು’ ಎಂದು ವಿವರಿಸಿದರು