ಕರ್ನಾಟಕ

ಬಂಗಲೆಗೆ ನುಗ್ಗಿ ಉಸಿರುಗಟ್ಟಿಸಿ ಕೃತ್ಯ: ವಾಯುಪಡೆ ನಿವೃತ್ತ ಅಧಿಕಾರಿ ಕೊಲೆ

Pinterest LinkedIn Tumblr

OFFICER

ಬೆಂಗಳೂರು: ನಗರದ ಹೊರ ವಲಯದ ಹುಸ್ಕೂರುಗೇಟ್‌ ಬಳಿಯ ಬಂಗಲೆಗೆ ನುಗ್ಗಿದ ದುಷ್ಕರ್ಮಿಗಳು ನಿವೃತ್ತ ಏರ್‌ ಕಮೋಡರ್‌ ಪರ್ವೇಜ್‌ ಕೊಕರ್‌ (70) ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಪಂಜಾಬ್‌ ಮೂಲದ ಪರ್ವೇಜ್‌ ಅವರು ಪತ್ನಿ ಪ್ರಮೀಳಾ ಜತೆ ಹುಸ್ಕೂರು­ಗೇಟ್‌ ಬಳಿಯ ಬಂಗಲೆಯಲ್ಲಿ ವಾಸವಾಗಿದ್ದರು.
ಪ್ರಮೀಳಾ ದಂಪತಿ ರಾತ್ರಿ ಪ್ರತ್ಯೇಕ ಕೊಠಡಿಗಳಲ್ಲಿ ಮಲಗಿದ್ದರು. ಈ ವೇಳೆ ದುಷ್ಕರ್ಮಿಗಳು ಬಂಗಲೆಯ ಹಿಂಬಾ­ಗಿಲು ಮುರಿದು ಒಳನುಗ್ಗಿದ್ದಾರೆ. ನಂತರ ಪರ್ವೇಜ್‌ ಕೊಠಡಿಯೊಳಗೆ ಹೋಗಿ ಬಟ್ಟೆಯಿಂದ ಅವರ ಕೈ ಕಾಲು ಕಟ್ಟಿ, ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯ ಎಸಗಿದ ಬಳಿಕ ಆರೋಪಿಗಳು ಹೊರಗಿನಿಂದ ಪರ್ವೇಜ್‌ ಮತ್ತು ಪ್ರಮೀಳಾ ಅವರ ಕೊಠಡಿಯ ಬಾಗಿಲ ಚಿಲಕ ಹಾಕಿ ಪರಾರಿಯಾಗಿದ್ದಾರೆ. ಸೋಮವಾರ ಬೆಳಿಗ್ಗೆ ಪ್ರಮೀಳಾ ಎಚ್ಚರಗೊಂಡಾಗ ಹೊರ­ಗಿ­ನಿಂದ ಕೊಠಡಿಯ ಚಿಲಕ ಹಾಕಿರುವುದು ಗೊತ್ತಾ­ಗಿದೆ. ನಂತರ ಅವರು ಬಂಗ­ಲೆಯ ಭದ್ರತಾ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಭದ್ರತಾ ಸಿಬ್ಬಂದಿ ಸ್ವಲ್ಪ ಸಮ ಯದಲ್ಲೇ ಬಂಗಲೆ ಯೊಳಗೆ ಬಂದು ಚಿಲಕ ತೆಗೆದಿದ್ದಾರೆ. ನಂತರ ಪ್ರಮೀಳಾ ಮತ್ತು ಭದ್ರತಾ ಸಿಬ್ಬಂದಿ, ಪರ್ವೇಜ್‌ ಅವರ ಕೊಠಡಿಯ ಚಿಲಕ ತೆಗೆದು ಒಳ ಹೋದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ದುಷ್ಕರ್ಮಿಗಳು ಪರ್ವೇಜ್‌ ಅವರ ಕೊಠಡಿಯ ಅಲ್ಮೇರಾದಲ್ಲಿದ್ದ ಕೆಲ ದಾಖಲೆಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಹಣ, ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು ಆ ಅಲ್ಮೇರಾದಲ್ಲೇ ಇವೆ.

ದಂಪತಿ ಸುಮಾರು 12 ವರ್ಷಗಳ ಹಿಂದೆ ಹುಸ್ಕೂರುಗೇಟ್‌ ಬಳಿ ಜಮೀನು ಖರೀದಿಸಿದ್ದರು. ಆ ಜಮೀನಿನಲ್ಲಿ ಕಾಫಿ ಬೆಳೆದಿದ್ದ ಅವರು ಅಲ್ಲಿಯೇ ಬಂಗಲೆ ನಿರ್ಮಿಸಿಕೊಂಡಿದ್ದರು. ಪರ್ವೇಜ್‌ ಅವರು ದೇಶಿ ನಿರ್ಮಿತ ‘ತೇಜಸ್‌’ ಹಗುರ ಯುದ್ಧ ವಿಮಾನದ ಯೋಜನಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅಲ್ಲದೇ, ವಾಯು­ಪಡೆಯಲ್ಲಿ ಏರ್‌ ಕಮೋಡರ್‌ ಆಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ನಗರದಲ್ಲಿ­ರುವ ಜಪಾನ್‌ ಮೂಲದ ಖಾಸಗಿ ಕಂಪೆನಿಯೊಂದಕ್ಕೆ ಮುಖ್ಯ ಸಲಹೆಗಾರ­ರಾಗಿದ್ದರು.  ದಂಪತಿಯ ಇಬ್ಬರು ಪುತ್ರಿಯರು ಮದುವೆಯಾಗಿ ದೆಹಲಿ­ಯಲ್ಲಿ ನೆಲೆಸಿದ್ದಾರೆ. ಘಟನೆ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಣಕ್ಕಾಗಿ ಕೊಲೆ ಸಾಧ್ಯತೆ ಕಡಿಮೆ
‘ಕೊಲೆಗೆ ಕಾರಣ ಗೊತ್ತಾಗಿಲ್ಲ. ಹಣ ಅಥವಾ ಚಿನ್ನಾಭರಣಕ್ಕಾಗಿ ಈ ಕೊಲೆ ನಡೆದಿರುವ ಸಂಭವ ಕಡಿಮೆ. ಪ್ರಕರಣದ ತನಿಖೆಗೆ ಎಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ’
–ರಮೇಶ್‌ ಬಾನೋತ್‌, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Write A Comment