ಬೆಂಗಳೂರು: ಕೆಲಸಕ್ಕೆ ಹೋಗಲು ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಕಿಡಿಗೇಡಿಯನ್ನು ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ಬನಶಂಕರಿ ಸಮೀಪದ ಕದಿರೇನ ಹಳ್ಳಿ ರಿಂಗ್ ರಸ್ತೆ ಬಸ್ ನಿಲ್ದಾಣದ ಬಳಿ ನಡೆದಿದೆ.
ಬಿಪಿಒ ಉದ್ಯೋಗಿಯಾಗಿರುವ ಯುವತಿ ರಾತ್ರಿ 10.30ಕ್ಕೆ ಕ್ಯಾಬ್‌ಗಾಗಿ ಕಾಯುತ್ತಿದ್ದಳು. ರಾತ್ರಿಯಾಗಿದ್ದ ಕಾರಣ ಜತೆಗೆ ಆಕೆಯ ತಂದೆಯೂ ಆಗಮಿಸಿದ್ದರು. ಈ ವೇಳೆ ಮೂವರು ಕಿಡಿಗೇಡಿಗಳು ಮದ್ಯದ ನಶೆಯಲ್ಲಿ ಬಸ್ ನಿಲ್ದಾಣದ ಬಳಿ ಬಂದಿದ್ದಾರೆ. ಈ ಪೈಕಿ ಸತೀಶ್ ಎಂಬಾತ ಹಿಂದಿನಿಂದ ಬಂದು ಯುವತಿಯನ್ನು ಹಿಡಿದುಕೊಂಡು ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಆಗ ಯುವತಿ ಕಿರುಚಿಕೊಂಡಿದ್ದು, ಜತೆಯಲ್ಲಿದ್ದ ತಂದೆ ಆತನನ್ನು ಹಿಡಿದುಕೊಂಡಿದ್ದಾರೆ. ಆಗ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಕಿಡಿಗೇಡಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಸತೀಶನಿಗೆ ಪೆಟ್ಟು ಬೀಳುತ್ತಿದ್ದಂತೆ ಜತೆಗಿದ್ದ ಇಬ್ಬರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬನಶಂಕರಿ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ಸತೀಶ್ ನೀಡಿದ ಮಾಹಿತಿ ಮೇರೆಗೆ ಕಾರ್ತಿಕ್ ಹಾಗೂ ಮಣಿ ಎಂಬ ಇತರ ಇಬ್ಬರು ಕಿಡಿಗೇಡಿಗಳನ್ನು ಬಂಧಿಸಿದ್ದಾರೆ. ಮೂವರೂ ಭುವನೇಶ್ವರಿ ನಗರ ನಿವಾಸಿಗಳಾಗಿದ್ದು, ಸಣ್ಣಪುಟ್ಟ ಕೂಲಿ ಕೆಲಸ ಮಾಡಿಕೊಂಡು ಓಡಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.