ಬೆಂಗಳೂರು: ನಗರದಲ್ಲಿ ನ.30ರಂದು ‘ಪ್ರೀತಿಯ ಮುತ್ತು’ ಮೇಳ ನಡೆಸಲು ಅನುಮತಿ ನಿರಾಕರಿಸುವ ಸಂಬಂಧ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ ಎಂದು ‘ಕಿಸ್ ಆಫ್ ಲವ್’ ಸಂಘದ ಆಯೋಜಕರು ಹೇಳಿದ್ದಾರೆ.
‘ಸಂಘದ ಸದಸ್ಯರೆಲ್ಲ ಹೆಚ್ಚುವರಿ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿದ್ದೆವು. ಆಂದೋಲನಕ್ಕೆ ಅನುಮತಿ ನಿರಾಕರಿಸಿರುವ ಕುರಿತು ಅವರು ಯಾವುದೇ ಮಾಹಿತಿ ನೀಡಿಲ್ಲ. ಈ ಬಗ್ಗೆ ಪೊಲೀಸರಿಂದ ಸಂಘಕ್ಕೂ ಯಾವುದೇ ಲಿಖಿತ ಪತ್ರ ಬಂದಿಲ್ಲ’ ಎಂದು ಸಂಘದ ಸದಸ್ಯರು ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಆಂದೋಲನದ ಕುರಿತು ಮಾಹಿತಿ ನೀಡದೆ ಇದ್ದುದರಿಂದ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗಳಿಗೆ ಪ್ರತಿಕ್ರಿಯಿಸಿರುವ ಅವರು, ‘ನಾವು ಪೊಲೀಸರಿಗೆ ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ. ಆಂದೋಲನ ನಡೆಯುವ ದಿನಾಂಕ, ಅದರ ಮಾದರಿ, ಸ್ಥಳ ಹಾಗೂ ಸಮಯವನ್ನು ತಿಳಿಸಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಸಂಘದ ಬೆಂಗಳೂರು ಘಟಕದ ಸಂಚಾಲಕ ವಿಜಯನ್ ಖಲೀಲ್, ‘ಪ್ರೀತಿಯ ಮುತ್ತು ಮೇಳ ನಡೆಯುತ್ತದೆಯೋ ಇಲ್ಲವೋ ಎಂಬುದನ್ನು ಶೀಘ್ರದಲ್ಲೇ ಮಾಧ್ಯಮದವರಿಗೆ ತಿಳಿಸುತ್ತೇವೆ’ ಎಂದು ಹೇಳಿದ್ದಾರೆ.
‘ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಆಂದೋಲನದ ರೂಪ ಹಾಗೂ ವಿಧಾನವನ್ನು ಆಯ್ಕೆ ಮಾಡುವ ಅಧಿಕಾರವಿದೆ.’ ಎಂದಿದ್ದಾರೆ.