ಕರ್ನಾಟಕ

ಬೆಳ್ಳಂಬೆಳಿಗ್ಗೆ ಇಬ್ಬರು ಭ್ರಷ್ಟರ ಮನೆ ಬಾಗಿಲು ತಟ್ಟಿದ ಲೋಕಾಯುಕ್ತ

Pinterest LinkedIn Tumblr

Lokayukta_Kranataka_DC_0_0_0

ಚಿತ್ರದುರ್ಗ, ನ.29: ಇಂದು ಬೆಳ್ಳಂಬೆಳಿಗ್ಗೆ ಜಿಲ್ಲೆಯಲ್ಲಿನ ಇಬ್ಬರು ಭ್ರಷ್ಟರ ಮನೆ ಬಾಗಿಲು ತಟ್ಟಿದ ಲೋಕಾಯುಕ್ತ ಪೊಲೀಸರು ಭಾರೀ ಪ್ರಮಾಣದ ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ಚಿನ್ನ-ಬೆಳ್ಳಿಗಳನ್ನು ವಶಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಲೆಕ್ಕ ಅಧೀಕ್ಷಕ ತಿಮ್ಮಾಬೋವಿ ಅವರು ವಾಸವಿರುವ ತಿಪ್ಪಜ್ಜಿ ಸರ್ಕಲ್‌ನ ರೂಮ್, ದಾವಣಗೆರೆ, ಹರಿಹರದಲ್ಲಿನ ಮೂರು ಅಂತಸ್ತಿನ ಎರಡು ಮನೆಗಳ ಮೇಲೆ ಏಕಕಾಲಕ್ಕೆ ಇಂದು ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ದಾವಣಗೆರೆ, ಹರಿಹರದಲ್ಲಿನ ಮನೆಗಳು, ಜಿಲ್ಲೆಯ ಅನ್ನೇಹಾಳ್ ಗ್ರಾಮದಲ್ಲಿನ ಐದು ಎಕರೆ ಜಮೀನು, ಎಫ್‌ಡಿ, ವಿಮೆಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಪಾರ ಪ್ರಮಾಣದ ಚಿನ್ನ-ಬೆಳ್ಳಿ ಪತ್ತೆಯಾಗಿದೆ ಎಂದು ಹೇಳಲಾಗಿದ್ದು, ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ದಾವಣಗೆರೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ಹಾಗೂ ಚಿತ್ರದುರ್ಗದಲ್ಲಿ ಸಬ್‌ಇನ್ಸ್‌ಪೆಕ್ಟರ್ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ.

ಚಳ್ಳಕೆರೆಯಲ್ಲಿ ಡಿವೈಎಸ್ಪಿ ಕಚೇರಿಯಲ್ಲಿ ಎಎಸ್‌ಐ ಆಗಿರುವ ರೆಹಮತ್‌ವುಲ್ಲಾ ಅವರ ನಿವಾಸದ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಸ್ತುತ ಚಳ್ಳಕೆರೆಯಲ್ಲಿನ ಪೊಲೀಸ್ ಕ್ವಾಟ್ರಸ್‌ನಲ್ಲಿ ಇವರು ವಾಸವಿದ್ದು, ಆ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರು ಚಳ್ಳಕೆರೆಯಲ್ಲಿ ಮೂರು ಮನೆ, ಕೋಟಿಗೂ ಅಧಿಕ ಬೆಲೆಯ ೧೮ ನಿವೇಶನಗಳನ್ನು ಹೊಂದಿದ್ದು, ಶಾಂತಿನಗರದಲ್ಲೂ ಒಂದು ಮನೆ ಇದೆ ಎಂದು ತಿಳಿದುಬಂದಿದೆ. ದಾಳಿ ವೇಳೆ ಚಿನ್ನ-ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದಿದ್ದು, ನಿಖರ ಮೌಲ್ಯ ತಿಳಿದುಬಂದಿಲ್ಲ. ಡಿವೈಎಸ್ಪಿ ಬಾರಿಕೇರ ಅವರ ನೇತೃತ್ವದಲ್ಲಿ ರೆಹಮತ್‌ವುಲ್ಲಾ ಅವರ ಮನೆ ಮೇಲೆ ದಾಳಿ ನಡೆದಿದೆ.

Write A Comment