ಬೆಂಗಳೂರು: ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿಐಡಿ ಅಧಿಕಾರಿಗಳು ಆಯೋಜಿಸಿದ್ದ ವೈದ್ಯಕೀಯ ಪರೀಕ್ಷೆಗೆ ರಾಘವೇಶ್ವರ ಭಾರತೀ ಶ್ರೀಗಳು ಗೈರು ಹಾಜರಾಗಿದ್ದಾರೆ.
ರಾಮಕಥಾ ಕಲಾವಿದೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ಅನುಮತಿ ನೀಡಿತ್ತು. ಈ ಹಿನ್ನಲೆಯಲ್ಲಿ ಸಿಐಡಿ ಅಧಿಕಾರಿಗಳು ರಾಘವೇಶ್ವರ ಭಾರತೀ ಶ್ರೀಗಳಿಗೆ ನಿನ್ನೆಯೇ ನೋಟಿಸ್ ನೀಡಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚಿಸಿದ್ದರು. ಅಲ್ಲದೆ ಇಂದು ಬೆಳಗ್ಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ಸಕಲ ಸಿದ್ಧತೆಯನ್ನು ಮಾಡಲಾಗಿತ್ತು.
ಆದರೆ ಪರೀಕ್ಷೆಗೆ ರಾಘವೇಶ್ವರ ಶ್ರೀಗಳು ಮಾತ್ರ ಹಾಜರಾಗಲೇ ಇಲ್ಲ. ನಿನ್ನೆ ಸಿಐಡಿ ಅಧಿಕಾರಿಗಳ ನೋಟಿಸ್ ತಲುಪುತಿದ್ದಂತೆಯೇ ಪರೀಕ್ಷೆಗೆ ಶ್ರೀಗಳು ಒಂದು ವಾರದ ಗಡುವಿಗಾಗಿ ಮನವಿ ಮಾಡಿದ್ದರು. ಆದರೆ ಶ್ರೀಗಳ ಮನವಿಯನ್ನು ತಿರಸ್ಕರಿಸಿದ್ದ ಅಧಿಕಾರಿಗಳು, ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಶ್ರೀಗಳು ಇಂದು ಪರೀಕ್ಷೆಗೆ ಹಾಜರಾಗಲಿಲ್ಲ.
ಈ ಹಿನ್ನಲೆಯಲ್ಲಿ ಮತ್ತೆ ಕೋರ್ಟ್ ಮೊರೆ ಹೋಗಲು ನಿರ್ಧರಿಸಿರುವ ಸಿಐಡಿ ಅಧಿಕಾರಿಗಳು, ರಾಘವೇಶ್ವರ ಶ್ರೀಗಳು ಜಾಮೀನು ನೀಡಿಕೆಯಲ್ಲಿನ ಷರತ್ತುಗಳನ್ನು ಉಲ್ಲಂಘಿಸಿದ್ದು, ತನಿಖೆಗೆ ಶ್ರೀಗಳು ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.