ಶ್ರೀರಂಗಪಟ್ಟಣ: ಇದು ಮನೆ, ನಿವೇಶನ, ಉದ್ಯೋಗವಿಲ್ಲದ, ಕಡುಬಡತನದಿಂದ ಬದುಕುತ್ತಿರುವ ಕುಟುಂಬ. ಇಂತಹ ಕುಟುಂಬದಲ್ಲಿ ಮೂರೂ ಗಂಡು ಮಕ್ಕಳು. ವಿಪರ್ಯಾಸವೆಂದರೆ ಮೂವರೂ ಬುದ್ಧಿಮಾಂದ್ಯರು!
ಕೊಡಿಯಾಲ ಗ್ರಾಮದ ಇಬ್ರಾಹಿಂ– ನೂರ್ ಫಾತಿಮಾ ದಂಪತಿ ಮೂವರು ಪುತ್ರರ ಪೈಕಿ ಒಬ್ಬರಿಗೂ ಮಾತು ಬರುವು ದಿಲ್ಲ, ಕಿವಿ ಕೇಳಿಸುವುದಿಲ್ಲ; ದೃಷ್ಟಿ ಸರಿಯಿಲ್ಲ; ಕೈ, ಕಾಲುಗಳಲ್ಲಿ ಸ್ವಾಧೀನವೇ ಇಲ್ಲ. ಈ ಮಕ್ಕಳು ಅಕ್ಷರಶಃ ಜೀವಚ್ಛವದಂತೆ ಬದುಕುತ್ತಿವೆ. ದೊಡ್ಡ ಮಗ ಇಸ್ಮಾಯಿಲ್ (11) ಕುಳಿತುಕೊಳ್ಳಲಷ್ಟೇ ಶಕ್ತ. ಎರಡನೆಯವ ಮುದಾಸ್ಸಿರ್ (7) ಕೂರಲು ಆಗದ ಸ್ಥಿತಿಯಲ್ಲಿದ್ದಾನೆ. ಮೂರನೆಯವ ಒಂದೂ ವರೆ ವರ್ಷದ ಅತೀಕ್ ಉರ್ ರೆಹಮಾನ್ ಬಿದ್ದಲ್ಲೇ ಬಿದ್ದಿರುತ್ತಾನೆ.
ಹಸಿವಾದಾಗ ಕಿರ್ರ್…, ಕ್ರೀಚ್… ಎಂದು ಅರಚುವುದು ಬಿಟ್ಟರೆ ಈ ಮಕ್ಕಳ ಬಾಯಿಂದ ಒಂದೇ ಒಂದು ಶಬ್ದ ಹೊರಡುವುದಿಲ್ಲ. ಅನ್ನ, ನೀರು, ಸ್ನಾನ ತಾಯಿಯೇ ಮಾಡಿಸಬೇಕು. ನೈಸರ್ಗಿಕ ಕರೆ ಮಲಗಿದ್ದಲ್ಲೇ ಆಗುವುದರಿಂದ ಈ ಮಕ್ಕಳನ್ನು ನಿರ್ವಹಣೆ ಮಾಡುವುದು ತಾಯಿ ನೂರ್ ಫಾತಿಮಾ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸೂರಿಲ್ಲ: ಇಬ್ರಾಹಿಂ ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ದಿನಗೂಲಿ ನೌಕರ. ಕೊಡಿಯಾಲ ಗ್ರಾಮದಲ್ಲಿ ಮನೆ್ನು ಬಾಡಿಗೆ ಪಡೆದು ಪತ್ನಿ ಹಾಗೂ ಮಕ್ಕಳನ್ನು ಬಿಟ್ಟು ಹೋಗಿ ದ್ದಾರೆ. ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿದ್ದ ಈ ಕುಟುಂಬ ಅಲ್ಲಿನ ದುಬಾರಿ ಬಾಡಿಗೆ ಇತರೆ ಖರ್ಚುಗಳನ್ನು ಭರಿಸಲಾಗದೆ ಕೊಡಿಯಾಲಕ್ಕೆ ಬಂದು ನೆಲೆಸಿದೆ. ಇಂತಹ ಸಂಕಷ್ಟದ ನಡುವೆಯೂ ತಮ್ಮ ಮಕ್ಕಳು ಸಾಮಾನ್ಯ ಮಕ್ಕಳಂತೆ ಇರಬೇಕೆಂಬ ಹೆತ್ತ ಕರುಳಿನ ಸಹಜ ಆಸೆಯಿಂದ ಬೆಂಗಳೂರು, ಮೈಸೂರು, ಮಂಡ್ಯ ಇತರೆಡೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಯಾವ ಮಗುವೂ ಚಿಕಿತ್ಸೆಗೆ ಸ್ಪಂದಿಸಿಲ್ಲ.
‘ದಿನದ 24 ಗಂಟೆಯೂ ಮಕ್ಕಳನ್ನು ನೋಡಿಕೊಳ್ಳಬೇಕು. ಮೂವರಲ್ಲಿ ಒಬ್ಬನಾದರೂ ಸುಧಾರಿಸಿದರೆ ಚೂರು ನೆಮ್ಮದಿ ಯಾದರೂ ಸಿಗುತ್ತದೆ. ಸದ್ಯ ಇರಲು ಒಂದು ಸೂರು ಬೇಕು. ಎರಡು ಚಾಪೆಯಗಲ ಜಾಗ ನೀಡಿದರೆ ಗರಿ ಮನೆಯನ್ನಾ ದರೂ ಕಟ್ಟಿಕೊಂಡು ಬದುಕುತ್ತೇನೆ’ ಎನ್ನುವಾಗ ನೂರ್ ಫಾತಿಮಾ ಅವರ ಕಣ್ಣಾಲಿಗಳು ತುಂಬಿ ಬರುತ್ತವೆ.
ನೆರವಾಗುವವರು ಮೊ: 89711 85783 ಸಂಪರ್ಕಿ ಸ ಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೊಡಿಯಾಲ ಶಾಖೆ (ಮಂಡ್ಯ ಜಿಲ್ಲೆ) ಖಾತೆ ಸಂಖ್ಯೆ: 338994 38990.