ಬೆಳಗಾವಿ: ‘ಲೇಖಕನಿಗೆ ಪ್ರಶಸ್ತಿಗಳಿಗಿಂತ ತಿರಸ್ಕಾರಗಳೇ ಜೀವದ್ರವ್ಯ ಇದ್ದಂತೆ. ತಿರಸ್ಕಾರ ಮತ್ತು ಟೀಕೆ– ಟಿಪ್ಪಣಿಗಳು ಲೇಖಕನ ಬರವಣಿಗೆ ಶೈಲಿಯನ್ನು ಜಾಗೃತಗೊಳಿಸುತ್ತವೆ’ ಎಂದು ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.
ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಆಶ್ರಯದಲ್ಲಿ ಭಾನುವಾರ ನಡೆದ ಯುವ ಸಾಹಿತ್ಯ ಪುರಸ್ಕಾರ ಸಮಾರಂಭದಲ್ಲಿ ಎಂಟು ಜನ ಯುವ ಲೇಖಕರಿಗೆ ಪುರಸ್ಕಾರ ನೀಡಿ ಅವರು ಮಾತನಾಡಿದರು. ‘ಸುಲಭವಾಗಿ ಸಿಗುವ ಪ್ರಶಸ್ತಿಗಳು ತುಂಬಾ ಅಪಾಯಕಾರಿ. ಇವು ಲೇಖಕನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಪ್ರಶಸ್ತಿಗಳಿಗಿಂತ ಟೀಕೆಗಳೇ ಉತ್ತಮ. ಟೀಕೆಗಳು ಲೇಖಕನಲ್ಲಿ ಆತ್ಮವಿಶ್ವಾಸ, ಛಲ ಮೂಡಿಸುವುದರ ಜೊತೆಗೆ ಸದೃಢವನ್ನಾಗಿಸುತ್ತವೆ. ಹೀಗಾಗಿ ಯುವ ಲೇಖಕರು ಟೀಕೆಗಳ ತಿರಸ್ಕಾರಗಳಿಂದ ಕುಗ್ಗದೇ, ಆತ್ಮವಿಶ್ವಾಸದಿಂದ ಮುನ್ನಡೆಯಬೇಕು’ ಎಂದರು.
‘ಲೇಖಕನಿಗೆ ಬರವಣಿಗೆ ಶೈಲಿಗಿಂತ ಅತ್ಯುತ್ತಮ ಶಬ್ದ ಭಂಡಾರ ಅಗತ್ಯ. ಲೇಖಕ ಒಮ್ಮೆ ಶಬ್ದಕೋಶದ ಮೇಲೆ ಹಿಡಿತ ಸಾಧಿಸಿದರೆ, ಶಾಶ್ವತವಾಗಿ ಸಾಹಿತ್ಯ ನೆಲೆ ಕಂಡುಕೊಳ್ಳಬಹುದು. ಹೀಗಾಗಿಯೇ ಕವಿ ಗೋಪಾಲಕೃಷ್ಣ ಅಡಿಗರು ಶಬ್ದಕೋಶ ಇಟ್ಟುಕೊಂಡು, ಕೃತಿಗಳನ್ನು ಓದುತ್ತಿದ್ದರು. ಈ ದಿಸೆಯಲ್ಲಿ ಯುವ ಲೇಖಕರು ಗಮನ ಹರಿಸಬೇಕು’ ಎಂದರು.
ಸುನಿಲ್ ರಾವ್, ಶ್ರೀನಿವಾಸ ದೊಡ್ಡಮನಿ, ಶ್ರೀದೇವಿ ಕೆರೆಮನೆ, ಪ್ರಕಾಶ ಗಿರಿಮಲ್ಲನವರ, ಹುಲಿಕುಂಟೆ ಮೂರ್ತಿ, ಇಂದ್ರಕುಮಾರ ಎಚ್.ವಿ., ಕಾತ್ಯಾಯಿನಿ ಕುಂಜಿಬೆಟ್ಟು ಹಾಗೂ ಮೌನೇಶ ಬಡಿಗೇರ ಅವರ ಕೃತಿಗಳಿಗೆ ಯುವ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು. ಈ ಪುರಸ್ಕಾರವು ತಲಾ ₨ 10 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಎಂ. ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು.