ಚಿಕ್ಕಮಗಳೂರು, ಡಿ.8: ಇತ್ತ ಪಶ್ಚಿಮ ಘಟ್ಟದಲ್ಲಿ ಕಳೆದ ಹಲವು ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ನಕ್ಸಲ್ ಚಳುವಳಿಯ ನಾಯಕರಿಬ್ಬರು ಶಸ್ತ್ರಾಸ್ತ್ರ ಕೆಳಗಿಟ್ಟು ಇಂದು ಸರ್ಕಾರಕ್ಕೆ ಶರಣಾಗತರಾಗಿದ್ದಾರೆ. ಆದರೆ ಅತ್ತ ಕರ್ನಾಟಕ-ಕೇರಳ ಗಡಿಯ ಹೆಗ್ಗಡದೇವನಕೋಟೆ ಪ್ರದೇಶದಲ್ಲಿ ಕೆಂಪು ಉಗ್ರರು ಪೊಲೀಸರೊಂದಿಗೆ ಗುಂಡಿನ ಚಕಮಕಿ ನಡೆಸಿ ಆತಂಕ ಮೂಡಿಸಿದ್ದಾರೆ.
ಮಲೆನಾಡಿನ ಕಾಫಿನಗರ ಚಿಕ್ಕಮಗಳೂರಿನಲ್ಲಿ ಶೃಂಗೇರಿ ತಾಲ್ಲೂಕಿನ ಸಿರಿಮನೆ ನಾಗರಾಜ್ ಹಾಗೂ ಬಯಲುಸೀಮೆ ಚಿತ್ರದುರ್ಗದ ನೂರ್ ಜುಲ್ಫಿಕಾರ್ ಅಲಿಯಾಸ್ ನೂರ್ ಶ್ರೀಧರ್ ಇಬ್ಬರೂ ಇಂದು ಜಿಲ್ಲಾಧಿಕಾರಿ ಬಿ.ಇ.ಎಸ್.ಶೇಖರಪ್ಪ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಆರ್.ಚೇತನ್ ಅವರ ಸಮ್ಮುಖದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯೆ , ಪತ್ರಕರ್ತೆ ಗೌರಿ ಲಂಕೇಶ್, ನಗರಿ ಬಾಬಯ್ಯ, ಶಿವಸುಂದರ್, ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್ ಸೇರಿದಂತೆ ಹಲವು ರಾಜಕೀಯ ನಾಯಕರ ಸಮ್ಮುಖದಲ್ಲಿ ತಮ್ಮ ಹಿಂಸಾತ್ಮಕ ಹೋರಾಟಕ್ಕೆ ಮಂಗಳ ಹಾಡಿ ಸಮಾಜದ ಮುಖ್ಯವಾಹಿನಿಗೆ ಪಾದಾರ್ಪಣೆ ಮಾಡಿದರು.
ನಂತರ ಮಾತನಾಡಿದ ಇಬ್ಬರು ಹೋರಾಟಗಾರರು ತಮಗೂ ಕಾಡಿನ ಜೀವನ ಸಾಕಾಗಿದ್ದು , ಈ ಮೊದಲಿನ ಸಶಸ್ತ್ರ ಹೋರಾಟದ ಕಾನೂನು ಬಾಹಿರ ಬದುಕಿಗೆ ತಾವು ವಿದಾಯ ಹೇಳಿ ಹೊಸ ಬದುಕಿನತ್ತ ಹೆಜ್ಜೆ ಹಾಕುವ ಧ್ಯೇಯ ನಮ್ಮದಾಗಿದೆ ಎಂದು ಹೇಳಿದರು.
ಈ ಸಂದರ್ಭ ಸಿರಿಮನೆ ನಾಗರಾಜು ಅವರು ತಮ್ಮ ಮಡದಿ ಹಾಗೂ ಮುದ್ದಿನ ಮಗಳನ್ನು ತಬ್ಬಿಕೊಂಡು ಕಣ್ಣೀರಿಟ್ಟ ದೃಶ್ಯ ಮನ ಕರಗುವಂತಿತ್ತು. ಇದಕ್ಕೂ ಮುನ್ನ ಇಲ್ಲಿನ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಇಬ್ಬರು ನಕ್ಸಲ್ ನಾಯಕರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಖ್ಯ ದ್ವಾರದ ಬಳಿ ಬಂದಾಗ ಕೆಲವರು ಇಬ್ಬರಿಗೂ ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಮತ್ತು ಕೇರಳ ಅಂತರರಾಜ್ಯ ಗಡಿ ಬಾವಲಿ ಸೀಮಾ ರೇಖೆಯಿಂದ 50 ಮೀಟರ್ ಒಳಗೆ ಕೇರಳದ ನೆಲದಲ್ಲಿ ಭಾನುವಾರ ರಾತ್ರಿ ಇದಕ್ಕಿದ್ದಂತೆ ಸುಮಾರು 20 ಮಂದಿಯಿದ್ದ ಶಸ್ತ್ರ ಸಜ್ಜಿತ ತಂಡವೊಂದು ಪ್ರತ್ಯಕ್ಷವಾಗಿ ಪೊಲೀಸರೊಂದಿಗೆ ಗುಂಡಿನ ಚಕಮಕಿ ನಡೆಸಿದೆ.
ಈ ಇಬ್ಬರು ಕಟ್ಟಾ ನಕ್ಸಲರ ಶರಣಾಗತಿಗಾಗಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ, ಖ್ಯಾತ ಸಾಹಿತಿ ದೇವನೂರು ಮಹಾದೇವ, ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯೆ, ಪತ್ರಕರ್ತೆ ಗೌರಿ ಲಂಕೇಶ್, ಶಿವಸುಂದರ್, ನಗರಿ ಬಾಬಯ್ಯ ಅವರು ಮಧ್ಯಸ್ಥಿಕೆ ವಹಿಸಿದ್ದರು.
ಈ ಇಬ್ಬರು ನಕ್ಸಲ್‌ವಾದಿಗಳ ಶರಣಾಗತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ನಗರದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸ್ವತಃ ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು, ಭದ್ರತೆ ಉಸ್ತುವಾರಿ ನೋಡಿಕೊಂಡರು. ಇಂದು ಬೆಳಗ್ಗೆಯೇ ಸಂಧಾನಕಾರರಾದ ಎಚ್.ಎಸ್.ದೊರೆಸ್ವಾಮಿ, ಗೌರಿಲಂಕೇಶ್ ಮತ್ತಿತರರು ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರಿಂದ ಅಲ್ಲಿಯೂ ಪೊಲೀಸ್ ಪಹರೆ ಏರ್ಪಡಿಸಲಾಗಿತ್ತು.
ಸಿರಿಮನೆ ನಾಗರಾಜ್ ಹಾಗೂ ನೂರ್‌ಜುಲ್ಫಿಕಾರ್ ವಿರುದ್ಧ ಈಗಾಗಲೇ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿಯೂ ಹಲವು ಕ್ರಿಮಿನಲ್ ಕೇಸ್‌ಗಳು ದಾಖಲಾಗಿವೆ.
ಹೆಗ್ಗಡದೇವನಕೋಟೆ ವರದಿ
ಹೆಗ್ಗಡದೆವನಕೋಟೆಯ ಬೀಚನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಕ್ಸಲೀಯರ ತಂಡವೊಂದು, ಪೊಲೀಸರು ಹಾಗೂ ನಕ್ಸಲ್ ನಿಗ್ರಹ ದಳದ(ಎಎನ್‌ಎಫ್)ಸಿಬ್ಬಂದಿಯೊಂದಿಗೆ ಗುಂಡಿನ ದಾಳಿ ನಡೆಸಿದೆ. ಕೇರಳದ ವೇಲುಕೊಂಡ ಠಾಣೆ ಪೊಲೀಸರು ಕರ್ನಾಟಕ ಪೊಲೀಸರೊಂದಿಗೆ ಕೈ ಜೋಡಿಸಿದ್ದು, ನಕ್ಸಲೀಯರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಈ ಹಿಂದೆ ಕಾಡುಗಳ್ಳ ವೀರಪ್ಪನ್‌ಗೆ ಆಶ್ರಯ ತಾಣವಾಗಿದ್ದ ದಟ್ಟ ಅರಣ್ಯ ಪ್ರದೇಶದಲ್ಲಿ ಈಗ ಕೆಂಪು ಉಗ್ರರು ಠಿಕಾಣಿ ಹೂಡಿದ್ದು , ಉಭಯ ರಾಜ್ಯಗಳ ಗಡಿಭಾಗದ ಜನತೆ ಆತಂಕದಿಂದ ದಿನ ಕಳೆಯುವಂತಾಗಿದೆ. ಎರಡೂ ರಾಜ್ಯಗಳ ಹಿರಿಯ ಪೊಲೀಸ್ ಅಧಿಕಾರಿಗಳು ಇಂದು ಸಭೆ ಸೇರಿ ನಕ್ಸಲೀಯರ ಬೇಟೆಗೆ ತಂತ್ರಗಾರಿಕೆ ರೂಪಿಸಿದ್ದಾರೆ.
ಕೇರಳಕ್ಕೆ ಸೇರಿದ ತಿರುನೇಲಿ, ಕಾಟಿಕೊಳ, ಬೇಗೂರು ಪ್ರದೇಶಗಳು ಸೇರಿದಂತೆ ಸುತ್ತಮುತ್ತಲಿನ ದಟ್ಟಾರಣ್ಯ ಈ ನಕ್ಸಲ್ ಚಟುವಟಿಕೆಗಳಿಗೆ ವರದಾನವಾಗಿ ಪರಿಣಮಿಸಿದೆ. ನಕ್ಸಲೀಯರ ಉಪಟಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದು ಈಗ ರಾಷ್ಟ್ರ ಮಟ್ಟದಲ್ಲಿಯೂ ಸುದ್ದಿಯಾಗಿದ್ದು, ಬಾವಲಿ ಚೆಕ್‌ಪೋಸ್ಟ್, ಮಾನಂದವಾಡಿ ಚೆಕ್‌ಪೋಸ್ಟ್ ಹಾಗೂ ಅರಣ್ಯ ಇಲಾಖೆಗೆ ಸೇರಿದ ಹಲವು ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಪೊಲೀಸ್ ಕಾವಲು ಹಾಕಲಾಗಿದೆ. ಆಯಾ ಕಟ್ಟಿನ ಸ್ಥಳಗಳಲ್ಲಿ ನಕ್ಸಲ್ ನಿಗ್ರಹ ಪಡೆ, ಪೊಲೀಸ್ ಹಾಗೂ ಅರೆಸೇನಾ ತುಕಡಿಗಳು ಸಿದ್ಧವಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟು ಉಸ್ತುವಾರಿ ವಹಿಸಿದ್ದಾರೆ.
ಉಡುಪಿ ವರದಿ:
ಈ ಮಧ್ಯೆ ಉಡುಪಿ ಜಿಲ್ಲೆಯ ಹೆಬ್ರಿ, ಕಬ್ಬಿನಾಲೆಯಲ್ಲಿ ನಕ್ಸಲರು ಕರಪತ್ರ, ಬ್ಯಾನರ್ ಹಾಕಿರುವುದು ಬೆಳಕಿಗೆ ಬಂದಿದೆ. ಕಸ್ತೂರಿ ರಂಗನ್ ವರದಿ ಜಾರಿಗೆ ಈ ಕರಪತ್ರಗಳಲ್ಲಿ ವಿರೋಧ ವ್ಯಕ್ತಪಡಿಸಿರುವ ನಕ್ಸಲರು, ವರದಿ ವಿರುದ್ಧದ ಹೋರಾಟದಲ್ಲಿ ತಾವು ರೈತರಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು, ನಕ್ಸಲ್ ನಿಗ್ರಹ ದಳ ಮತ್ತು ಪೊಲೀಸ್ ಸಿಬ್ಬಂದಿ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ನಕ್ಸಲರ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ ಎಂದು ತಿಳಿಸಿದರು.
ಕರಪತ್ರ ಮತ್ತು ಬ್ಯಾನರ್‌ಗಳ ಕುರಿತಂತೆ ತನಿಖೆ ಮುಂದುವರೆಸಲಾಗುತ್ತಿದೆ. ನಕ್ಸಲೀಯರ ಬಗ್ಗೆ ಸ್ಥಳೀಯರಿಂದ ವಿವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನಕ್ಸಲೀಯರ ತಂಡದಲ್ಲಿ ಎಷ್ಟು ಮಂದಿ ಇದ್ದರು, ಮಹಿಳೆಯರು ಏನಾದರೂ ಇದ್ದಾರೆಯೇ? ಅವರು ಯಾವ ಭಾಷೆ ಮಾತನಾಡುತ್ತಿದ್ದರು ಮುಂತಾದ ವಿವರ ಮಾಹಿತಿಗಳನ್ನು ಕಲೆಹಾಕಲಾಗುತ್ತಿದ್ದು, ಈ ಭಾಗದಲ್ಲಿ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಹೆಬ್ರಿ ಸುತ್ತಮುತ್ತ ನಕ್ಸಲ್ ಚಳುವಳಿ ಕಾರ್ಯಕರ್ತರು ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ನಕ್ಸಲ್ ಚಳುವಳಿಯ ನಾಯಕರಿಬ್ಬರು ಪೊಲೀಸರಿಗೆ ಶರಣಾಗಿರುವುದು ಉಳಿದ ಮಾವೋ ಉಗ್ರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರಾಜೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.