ಕರ್ನಾಟಕ

ಮೊಬೈಲ್ ಟವರ್‌ ಏರಿ ಮಹಿಳೆ ಆತ್ಮಹತ್ಯೆ ಬೆದರಿಕೆ; ಬಲವಂತವಾಗಿ ಕೆಳಗಿಳಿಸುವಲ್ಲಿ ಪೊಲೀಸರು ಯಶಸ್ವಿ

Pinterest LinkedIn Tumblr

hub

ಹುಬ್ಬಳ್ಳಿ: ನಗರದ ಹೋಟೆಲ್‌ ಕಟ್ಟಡ­ವೊಂದರ ಮೇಲಿನ ಮೊಬೈಲ್ ಟವರ್‌ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿ­ಸಿದ ಮಹಿಳೆಯೊಬ್ಬಳು ಸುಮಾರು ಮೂರು ಗಂಟೆ ಕಾಲ ಪೊಲೀ­ಸರನ್ನು, ಸಾರ್ವಜನಿಕರನ್ನು ತುದಿ­ಗಾಲಲ್ಲಿ ನಿಲ್ಲಿಸಿದ ಘಟನೆ ಭಾನುವಾರ ನಡೆಯಿತು.

ಮಗಳ ಕಣ್ಣಿನ ಶಸ್ತ್ರಚಿಕಿತ್ಸೆಗೆ ದೇಣಿಗೆ ಸಂಗ್ರಹಿಸುತ್ತಿರುವುದಾಗಿ ಹೇಳಿಕೊಂಡಿ­ರುವ ಸಪ್ನಾ ಹಿಲೆರಾ ಪರೇರಾ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮುಂಬೈಯಿಂದ ಚೆನ್ನೈಗೆ ಪಾದಯಾತ್ರೆ ಹೊರಟಿದ್ದಾಳೆ. ಭಾನು­ವಾರ ಮುಂಜಾನೆ 11 ಗಂಟೆಗೆ ಗೋಕುಲ್‌ ರಸ್ತೆಯಲ್ಲಿರುವ ಅಕ್ಷಯ ಹೋಟೆಲ್‌ ಕಟ್ಟಡದ ಮೇಲಿರುವ ಮೊಬೈಲ್‌ ಟವರ್‌ ಏರಿದ ಸಪ್ನಾಳನ್ನು ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಲವಂತವಾಗಿ ಕೆಳಗಿಳಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ಸಪ್ನಾಳ ಗಮನ ಬೇರೆಡೆಗಿರು­ವು­ದನ್ನು ಗಮನಿಸಿದ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಸರಸರನೆ ಟವರ್‌ ಏರಿ, ಇತರರ ನೆರವಿನಿಂದ ಆಕೆಯನ್ನು ಹಿಡಿದು ಕೆಳಗಿಳಿಸಿದರು. ಕಟ್ಟಡದ ಮೇಲಿರುವ ಟವರನ್ನು 10 ಅಡಿ ಎತ್ತರದವರೆಗೆ ಏರಿ ನಿಂತ ಸಪ್ನಾ, ಮಗಳ ಚಿಕಿತ್ಸೆಗೆ ಜನರು ದೇಣಿಗೆ ನೀಡು­ತ್ತಿ­ದ್ದಾರೆ ಎಂದು ಅಲ್ಲಿಂದಲೇ ಸಾವಿರ ರೂಪಾಯಿಯ ನೋಟುಗಳನ್ನು ತೋರಿ­ಸು­ತ್ತಿದ್ದಳು. ‘ಸರ್ಕಾರ ಸಹಾಯ ನೀಡ­ಬೇಕು. ಬೆಳಗಾವಿಯಲ್ಲಿರುವ ಮುಖ್ಯ­ಮಂತ್ರಿ ಸ್ಥಳಕ್ಕೆ ಬಂದರೆ ಮಾತ್ರ ಕೆಳಗಿಳಿ­ಯು­ತ್ತೇನೆ. ಇಲ್ಲದಿದ್ದರೆ ಕೆಳಗೆ ಹಾರಿ ಆತ್ಮ­ಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಪಟ್ಟು ಹಿಡಿದು ಕಿರುಚುತ್ತಿದ್ದಳು.

ಕೆಲವೊಮ್ಮೆ ಕೈ ಮುಗಿದು ಕಣ್ಣೀರಿಡು­ತ್ತಿದ್ದಳು. ಮನವೊಲಿಸಿ ಕೆಳಗಿಳಿಸಲು ಟವರ್‌ ಸಮೀಪಕ್ಕೆ ಹೋದ ಪೊಲೀ­ಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಅವಾಚ್ಯವಾಗಿ ನಿಂದಿ­ಸು­ತ್ತಿದ್ದ ಆಕೆ, ಯಾರಾದರೂ ಟವರ್‌ ಬಳಿ ಸುಳಿದಾಡಿದರೆ ಎರಡೂ ಕೈಗಳನ್ನು ಬಿಟ್ಟು, ಕೆಳಗೆ ಹಾರುವುದಾಗಿ ಬೆದರಿಸುತ್ತಿದ್ದಳು.

ಡಿಸಿಪಿ ಹನುಂತರಾಯ, ಎಸಿಪಿ ಎ.ಆರ್. ಬಡಿಗೇರ, ಗೋಕುಲ ಠಾಣೆ ಇನ್‌ಸ್ಪೆಕ್ಟರ್‌ ಪ್ರಭು ಗೌಡ ಮತ್ತಿತರ ಪೊಲೀಸ್‌ ಅಧಿಕಾರಿಗಳು, ಆಕೆಯ ಮನವೊಲಿಸಲು ಪ್ರಯತ್ನಿಸಿ­ದರೂ ಆಕೆ ಕೆಳಗಿಳಿಯಲು ನಿರಾಕರಿ­ಸಿದಳು. ಕೊನೆಗೆ ಗೃಹ ರಕ್ಷಕ ಆರ್‌.ಎಚ್‌. ಕಲ್ಯಾಣ್ ಎಂಬು­ವವರು ಟವರ್‌ ಮೇಲೇರಿ ಆಕೆ­ಯನ್ನು ಹಿಡಿದು ಕೆಳಗಿಳಿಸುವಲ್ಲಿ ಯಶಸ್ವಿಯಾದರು.

ದೇಣಿಗೆ ಸಂಗ್ರಹಿಸಲು ಚೆನ್ನೈವರೆಗೆ ಹೋಗು­ವುದಾಗಿ ಹೇಳಿಕೊಂಡು ಹೊರ­ಟಿದ್ದ ಸಪ್ನಾ, ಗುರುವಾರ ಸಂಜೆ ಧಾರ­ವಾಡ ತಲುಪಿದ್ದಳು. ‘17 ವರ್ಷದ ನನ್ನ ಮಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡ­ಬೇಕಾ­ಗಿದ್ದು, ಮುಂಬೈಯಲ್ಲಿ ಯಾರೂ ನೆರವು ನೀಡುತ್ತ್ತಿಲ್ಲ. ನನ್ನ ಬಳಿ ಅಷ್ಟು ಹಣ ಇಲ್ಲ’ ಎಂದು ಹೇಳುತ್ತಿದ್ದಳು.

Write A Comment