ಬೆಂಗಳೂರು, ಡಿ.15: ಶಂಕಿತ ಉಗ್ರ ಮೆಹದಿ ಬಂಧನಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದ ಐಸಿಸ್ ಉಗ್ರರು ನಾಳೆ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇಸ್ಲಾಮಿಕ್ ಸ್ಟೇಟ್ ಮೀಡಿಯಾ ಹೆಸರಿನ ಟ್ವೀಟರ್ ಖಾತೆಯಿಂದ ಪೊಲೀಸರ ಟ್ವೀಟರ್‌ಗೆ ಇಂದು ಸಂದೇಶವೊಂದು ರವಾನೆಯಾಗಿದೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಕಾಫಿಬಾರ್‌ನಲ್ಲಿ ಇಂದು ಉಗ್ರರು ನಾಗರಿಕರನ್ನು ಒತ್ತಾಯಾಳಾಗಿರಿಸಿಕೊಂಡಿರುವುದು ಆರಂಭವಷ್ಟೆ. ಬೆಂಗಳೂರಿನಲ್ಲೂ ಇದೇ ಘಟನೆ ಪುನರಾವರ್ತನೆಯಾಗಲಿದೆ ಎಂದು ಟ್ವೀಟ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಶಂಕಿತ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್ ಬಂಧನ, ಇಂದಿನ ಆಸ್ಟ್ರೇಲಿಯಾದಲ್ಲಿನ ಒತ್ತೆಯಾಳು ಘಟನೆ ಹಾಗೂ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬಂಧಿತನಾದ ಐಎಸ್‌ಐಎಸ್‌ನ ಸ್ಲೀಪರ್‌ಸೆಲ್ ಮಜೀದ್ ಪ್ರಕರಣಗಳ ನಡುವೆ ಇರಬಹುದಾದ ಸಂಬಂಧಗಳ ಬಗ್ಗೆಯೂ ಪೊಲೀಸರು ಗಂಭೀರವಾಗಿ ಪರಿಶೀಲನೆ ನಡೆಸಿದ್ದಾರೆ.
ಮೆಹದಿ ಬಂಧನದ ನಂತರ ಶಮಿ ವಿಟ್ನೆಸ್ ಟ್ವೀಟರ್ ಖಾತೆ ಮುಚ್ಚಲಾಗಿತ್ತಾದರೂ ಆನಂತರ ಪುನಾರರಂಭಗೊಂಡು 2ಸಾವಿರ ಜನ ಟ್ವೀಟ್ ಮಾಡಿದ್ದಾರೆ. ಸಿಸಿಬಿಯ ಡಿಸಿಪಿ ಅಭಿಷೇಕ್‌ಗೋಯೆಲ್ ಅವರು ತಮ್ಮ ಟ್ವೀಟರ್‌ನಲ್ಲಿ ಮೆಹದಿ ಬಂಧನ ಕುರಿತ ಪತ್ರಿಕಾ ಹೇಳಿಕೆಯನ್ನು ಹಾಕಿದ್ದರು. ಅದಕ್ಕೆ ಉಗ್ರರು ಪ್ರತಿಕ್ರಿಯಿಸಿ, ನಮ್ಮ ಸೋದರನನ್ನು ನಿಮ್ಮ ವಶದಲ್ಲಿರಲು ಬಿಡುವುದಿಲ್ಲ. ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಇದಕ್ಕಾಗಿ ಕಾದು ನೋಡಿ ಎಂದು ಭಾನುವಾರ ಸಂಜೆ ಸಂದೇಶ ರವಾನಿಸಿದ್ದರು. ಇಂದು ಮಧ್ಯಾಹ್ನ ಮತ್ತೆ ಅದೇ ಖಾತೆಗೆ ನಾಳೆ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ನಡೆಸಿರುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ.
ಆತಂಕ ಸೃಷ್ಟಿಸಲು ಬೆದರಿಕೆ ಟ್ವೀಟ್:
ಆತಂಕ ಸೃಷ್ಟಿಸಲು ಈ ರೀತಿ ಬೆದರಿಕೆ ಸಂದೇಶ ರವಾನಿಸಿರಬಹುದು. ಜನರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿ ನಾಳೆ ಬಾಂಬ್ ಸ್ಫೋಟಿಸುವುದಾಗಿ ಪೊಲೀಸರ ಟ್ವೀಟರ್ ಖಾತೆಗೆ ಬಂದಿರುವ ಬೆದರಿಕೆ ಟ್ವೀಟ್‌ಗೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ವೀಟರ್ ಸಂದೇಶ ಎಲ್ಲಿಂದ ಬಂದಿದೆ, ಯಾರು ಕಳುಹಿಸಿದ್ದಾರೆ ಎಂಬುದು ಪತ್ತೆಹಚ್ಚಲು ಕಷ್ಟಸಾಧ್ಯ. ಆದರೂ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಇದರ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಹೇಳಿದರು. ಇದೊಂದು ಫೇಕ್ ಖಾತೆಯಾಗಿರಲೂ ಬಹುದು. ಹಾಗೆಂದು ನಿರ್ಲಕ್ಷ್ಯ ತೋರಲು ಸಾಧ್ಯವಿಲ್ಲ. ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದೇವೆ ಎಂದು ತಿಳಿಸಿದರು. ಬಂಧಿತ ಶಂಕಿತ ಉಗ್ರ ಮೆಹದಿ ವಿಚಾರಣೆ ಮುಂದುವರೆದಿದ್ದು, ಆತ ಯಾವುದೇ ಮಹತ್ವದ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ತಮ್ಮನ್ನು ಭೇಟಿಯಾಗಲು ನೂರಾರು ಜನ ಬಂದು ಹೋಗುತ್ತಾರೆ. ಆದರೆ, ಮೆಹದಿಯ ತಂದೆ-ತಾಯಿ ಎಂದು ಹೇಳಿಕೊಂಡು ಯಾರೂ ತಮ್ಮನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.