ಬೆಳಗಾವಿ, ಡಿ.20: ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಅಧಿಪತ್ಯ ಸಾಧಿಸುವ ಮಾದರಿಯಲ್ಲಿಯೇ ಸರಿಯಾದ ನಿರ್ವಹಣೆ ಇಲ್ಲದ, ಉತ್ತರಾಧಿಕಾರಿ ವಿವಾದ ಹೊಂದಿರುವ ಮಠಗಳು ಹಾಗೂ ದೇವಸ್ಥಾನಗಳನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳುವ ವಿವಾದಿತ ಕಾಯ್ದೆಯನ್ನು ರಾಜ್ಯ ಸರ್ಕಾರ ಇಂದು ವಿಧಾನಸಭೆಯಲ್ಲಿ ಮಂಡಿಸಿದೆ.
ಬಿಜೆಪಿ ಕಳಂಕಿತ ಸಚಿವರ ಕುರಿತು ಚರ್ಚೆಗೆ ಪಟ್ಟು ಹಿಡಿದು ವಿಧಾನಸಭೆಯಲ್ಲಿ ಧರಣಿ ನಡೆಸುತ್ತಿದ್ದ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ಅಧಿನಿಯಮ 2014ನ್ನು ಮಂಡಿಸಿದರು.
ಮಂಡಿಸಲಾದ ವಿಧೇಯಕದಲ್ಲಿ ಹಿಂದಿನ 1997ರ ಕಾಯ್ದೆಯ 33ಕ್ಕೆ ತಿದ್ದುಪಡಿ ತರಲಾಗಿದೆ. ವಿಧೇಯಕ ವಿಧಾನಮಂಡಲದಲ್ಲಿ ಅಂಗೀಕಾರ ಪಡೆದ ತಕ್ಷಣದಿಂದಲೇ ಜಾರಿಗೆ ಬರಲಿದೆ.
ಹೊಸ ನಿಯಮದಂತೆ ಯಾವುದೇ ಮಠಕ್ಕೆ ಉತ್ತರಾಧಿಕಾರಿ ಇಲ್ಲದಿದ್ದಾಗ, ಹಿಂದೆ ನೇಮಕವಾದ ಉತ್ತರಾಧಿಕಾರಿ ದೈಹಿಕ, ಮಾನಸಿಕ ಅಶಕ್ತತೆಯಿಂದ ಬಳಲುತ್ತಿದ್ದರೆ, ಉತ್ತರಾಧಿಕಾರಿ ವಿವಾದ ಬಗೆ ಹರಿಯದೆ ಇದ್ದರೆ, ಮಠಾಧಿಪತಿ ಮರಣ ಹೊಂದಿದ ನಂತರ ವಿವಾದ ಉಂಟಾದರೆ ಅಥವಾ ಮಠಾಧಿಪತಿಯೇ ಸ್ವಯಂ ಪ್ರೇರಿತವಾಗಿ ಸರ್ಕಾರಕ್ಕೆ ಮಠದ ಆಡಳಿತವನ್ನು ಬಿಟ್ಟುಕೊಡಲು ಬಯಸಿದರೆ ಅಂತಹ ಸಂದರ್ಭದಲ್ಲಿ ಸರ್ಕಾರ ಮಠದ ಆಸ್ತಿ ಹಾಗೂ ಸ್ವತ್ತನ್ನು ಸ್ವಾಧೀನ ಪಡಿಸಿಕೊಳ್ಳಬಹುದು ಎಂದು ವಿವರಿಸಲಾಗಿದೆ.
ಮಠದಿಂದ ಬರುವ ಆದಾಯವನ್ನು ಮಠದ ಸಿಬ್ಬಂದಿಗಳ ವೇತನ, ಧಾರ್ಮಿಕ ಸಂಪ್ರದಾಯಗಳ ಪಾಲನೆ ಮತ್ತು ಧರ್ಮ ಪ್ರಚಾರಕ್ಕೆ ಬಳಸಬಹುದು ಎಂದು ಉಲ್ಲೇಖಿಸಲಾಗಿದೆ. ಸರಿಯಾದ ನಿರ್ವಹಣೆ ಇಲ್ಲದ ಮಠದ ಬಗ್ಗೆ ಧಾರ್ಮಿಕ ಹಾಗೂ ಮುಜರಾಯಿ ಇಲಾಖೆ ಆಯುಕ್ತರು ನಿರ್ದಿಷ್ಟ ಪಡಿಸಿದ ಅಧಿಕಾರಿ ವರದಿ ನೀಡಿದ ನಂತರವೂ ಮಠ ಅಥವಾ ದೇವಸ್ಥಾನವನ್ನು ಸ್ವಾಧೀನಕ್ಕೆ ಪಡೆಯಬಹುದಾಗಿದೆ. ಮಠಕ್ಕೆ ಸಂಬಂಧಿಸಿದ ಸ್ವತ್ತು ಮತ್ತು ದೇವಾಲಯಗಳನ್ನು ವಶಪಡಿಸಿಕೊಂಡ ನಂತರ ಆಡಳಿತಾಧಿಕಾರಿಯನ್ನು ನೇಮಿಸಿ ನಿರ್ವಹಣೆಯನ್ನು ಮುಂದುವರೆಸಲಿದೆ.
ಸೂಕ್ತ ನಿರ್ವಹಣೆ ಇಲ್ಲದ ಮಠಗಳಿಗೆ ಒಂದು ತಿಂಗಳ ಮೊದಲು ನೋಟಿಸ್ ನೀಡಲಾಗುವುದು. ನೋಟಿಸ್ ನೀಡಿದ 45 ದಿನದೊಳಗೆ ಮಠಕ್ಕೆ ಸಂಬಂಧಿಸಿದವರು ಸರ್ಕಾರಕ್ಕೆ ಉತ್ತರ ಕೊಡಬೇಕು. ಇಲ್ಲದಿದ್ದರೆ ಮಠವನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳುವ ಅಂಶ ಕಾಯ್ದೆಯಲ್ಲಿದೆ. ಈವರೆಗೂ ಉತ್ತರಾಧಿಕಾರಿ ಸೇರಿದಂತೆ ಯಾವುದೇ ವಿವಾದಗಳಿದ್ದರೂ ಸರ್ಕಾರ ಮಠಗಳ ತಂಟೆಗೆ ಹೋಗುವಂತಿರಲಿಲ್ಲ. ರಾಜ್ಯದಲ್ಲಿ ಹಲವಾರು ಮಠಗಳಲ್ಲಿ ಅವ್ಯವಹಾರ, ಅನಾಚಾರ ನಡೆದ ಆರೋಪ ಕೇಳಿ ಬಂದಾಗಲೂ ಸರ್ಕಾರ ಮೂಕ ಪ್ರೇಕ್ಷಕನಂತಿತ್ತು. ಖಾಸಗಿ ದೇವಾಲಯಗಳಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಾಗಲೂ ಕಠಿಣ ಕ್ರಮ ಜರುಗಿಸಲು ಸಾಧ್ಯವಾಗಿರಲಿಲ್ಲ. ಹಿಂದೆ ಉಪ್ಪಿನಂಗಡಿಯ ಶ್ರೀ ಸಹಸ್ರ ಲಿಂಗೇಶ್ವರಸ್ವಾಮಿ ದೇವಸ್ಥಾನವನ್ನು ಸ್ವಾಧೀನ ಪಡಿಸಿಕೊಂಡಾಗ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಾಗಿತ್ತು. 1977 ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮದ ಅಧಿಕಾರವನ್ನು ದೇವಸ್ಥಾನ ಸಮಿತಿ ನ್ಯಾಯಾಲಯದಲ್ಲಿ ಪ್ರಶ್ನಿಸಿತು. ಹೀಗಾಗಿ ಹೈಕೋರ್ಟ್ ಸೂಚನೆಯಡಿ ಕಾಯ್ದೆಗೆ ತಿದ್ದುಪಡಿ ತಂದಿರುವುದಾಗಿ ಸರ್ಕಾರ ತಿಳಿಸಿದೆ.
ಈ ಕಾಯ್ದೆಯ ಮೂಲಕ ಸರ್ಕಾರ ಮಠಗಳ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದೆ ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತ ಪಡಿಸಿದರು. ವಿಧೇಯಕ ಇನ್ನ್ನು ಮಂಡನೆಯಾಗಿದೆ ಚರ್ಚೆಯ ವೇಳೆ ನಿಮ್ಮ ಅಭಿಪ್ರಾಯ ಹೇಳಿ ಎಂದು ಸಭಾಧ್ಯಕ್ಷರು ಪ್ರತಿಪಕ್ಷದ ನಾಯಕರನ್ನು ಸಮಾಧಾನ ಪಡಿಸಿದರು.