ಮುಳಬಾಗಲು: ತಲೆಮಾರುಗಳಿಂದ ಹೊರಗೆ ನಿಂತು ಪೂಜೆ ಸಲ್ಲಿಸುತ್ತಿದ್ದ, ದೂರವೇ ಉಳಿಯುತ್ತಿದ್ದ ತಾಲ್ಲೂಕಿನ ಕಾಡೇನಹಳ್ಳಿಯ ದಲಿತರಿಗೆ ಭಾನುವಾರ ವಿಶೇಷ ದಿನವಾಗಿತ್ತು. ಏಕೆಂದರೆ, ಅವರು ಗ್ರಾಮದ ಸಪ್ತಮಾತೃಕೆ ಚೌಡೇಶ್ವರಿ ಮತ್ತು ಸೋಮೇಶ್ವರ ದೇಗುಲದ ಒಳಕ್ಕೆ ಬಂದಿದ್ದರು.
ಇದುವರೆಗೂ ಒಳಕ್ಕೆ ಬಾ ಎನ್ನದ, ಬರಬೇಡ ಎನ್ನದ ಅರ್ಚಕರು ಎಲ್ಲರಿಗೂ ನೀಡಿದಂತೆ ಮಂಗಳಾರತಿ ತಟ್ಟೆಯನ್ನು ಅವರ ಮುಂದಕ್ಕೂ ತಂದಿದ್ದರು. ಮಂಗಳಾರತಿಗೆ ಕೈ ಮುಗಿದ ದಲಿತರು ಚೌಡೇಶ್ವರಿ, ಸೋಮೇಶ್ವರ ದೇವರ ಮೂರ್ತಿಯನ್ನು ಹತ್ತಿರದಿಂದ ನೋಡಿ ಕಣ್ಣು ತುಂಬಿಕೊಂಡು ಕೈಮುಗಿದರು. ಕಾಡೇನಹಳ್ಳಿಯಷ್ಟೇ ಅಲ್ಲದೆ ಸಮೀಪದ ಪೆದ್ದೂರು, ಚಿಕ್ಕ ನಗವಾರ ಗ್ರಾಮಗಳ ದಲಿತರೂ ದೇಗುಲು ಪ್ರವೇಶಿಸಿದ್ದರು.
ಜಿಲ್ಲಾ ಕೇಂದ್ರದಿಂದ ಸುಮಾರು 45 ಕಿ.ಮೀ. ದೂರದ ಗ್ರಾಮವೊಂದರಲ್ಲಿ ಇಂಥ ಅಪರೂಪದ ಘಟನೆಗೆ ಕಾರಣವಾಗಿದ್ದು ದಲಿತರ ಗೃಹಪ್ರವೇಶ ರಾಜ್ಯ ಸಮಿತಿ. ಸಮಿತಿ ನೇತೃತ್ವವನ್ನು ವಹಿಸಿರುವ, ಮುಳಬಾಗಲು ನಿವಾಸಿ, ಕೋಲಾರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಶಿವಪ್ಪ ತಮ್ಮ ತಾಯಿಯ ತವರು ಮನೆ ಮತ್ತು ಪತ್ನಿಯ ಮನೆ ಇರುವ ಕಾಡೇನಹಳ್ಳಿಯಲ್ಲಿ ಹೀಗೆ ವಿಶೇಷ ಕಾರ್ಯಕ್ರಮ ಏರ್ಪಡಿಸಿದ್ದರು.
ಅವರಿಗೆ ಜಿಲ್ಲಾಡಳಿತದ ಸಂಪೂರ್ಣ ಬೆಂಬಲ ಸೂಚಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಅವರು ಪಾಲ್ಗೊಂಡರೆ, ಕಾಡೇನಹಳ್ಳಿಯ ಸಮೀಪದ ಹೆಬ್ಬಣಿ ಗ್ರಾಮದವರಾದ ಹೈಕೋರ್ಟ್ ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ ದಾಸ್, ಬೈರಕೂರು ಗ್ರಾಮದವರೇ ಆಗಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಪಿ.ಎನ್.ಶ್ರೀನಿವಾಸಾಚಾರಿ ಪಾಲ್ಗೊಂಡು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇವರಿಬ್ಬರೂ ಆಗಸ್ಟ್ 15ರಂದು ಎಂ.ಗೊಲ್ಲಹಳ್ಳಿಯಲ್ಲಿ ನಡೆದಿದ್ದ ದಲಿತರ ಗೃಹಪ್ರವೇಶ ಕಾರ್ಯಕ್ರಮದಲ್ಲೂ ಪಾಲ್ಗೊಂಡು ಗಮನ ಸೆಳೆದಿದ್ದರು.
ರಾಷ್ಟ್ರದೆಲ್ಲೆಡೆ ಹಬ್ಬಲಿ: ದೇಗುಲ ಪ್ರವೇಶದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ನಾಗಮೋಹನ ದಾಸ್, ಮೇಲ್ಜಾತಿಯವರ ಮನೆಗಳಿಗೆ ದಲಿತರನ್ನು ಕರೆದೊಯ್ಯುವ ಗೃಹಪ್ರವೇಶ ಕಾರ್ಯಕ್ರಮ ಎರಡನೇ ಹಂತವನ್ನು ಮುಟ್ಟಿದೆ.
ಈಗ ದಲಿತರನ್ನು ದೇಗುಲಗಳಿಗೂ ಕರೆ-ದೊಯ್ಯುವ ಪ್ರಯತ್ನ ಆರಂಭವಾಗಿ-ರು-ವುದು ಶ್ಲಾಘನೀಯ. ಇದು ಮೊದಲಿಗೆ ಇಡೀ ರಾಜ್ಯಕ್ಕೆ, ನಂತರ ರಾಷ್ಟ್ರದೆಲ್ಲೆಡೆ ಹಬ್ಬಲಿ ಎಂದು ಆಶಿಸಿದರು.
ಜಾಗೃತಿ ಯತ್ನ: ಜಿಲ್ಲೆಯ ಎಲ್ಲ ಮುಜ-ರಾಯಿ ದೇಗುಲಗಳಿಗೂ ದಲಿತರನ್ನು ಕರೆ-ತರುವ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿ-ಕಾರಿ ಡಾ.ತ್ರಿಲೋಕಚಂದ್ರ ತಿಳಿಸಿದರು.
1000 ದೇವಾಲಯ: ಮುಜರಾಯಿ ಇಲಾಖೆಗೆ ಸೇರಿದ 1336 ದೇಗುಲಗಳು ಜಿಲ್ಲೆಯಲ್ಲಿ ಇವೆ. ಆದರೆ, ಅವುಗಳ ಪೈಕಿ ಒಂದು ಸಾವಿರ ದೇಗುಲಗಳಲ್ಲಿ ದಲಿತರ ಪ್ರವೇಶ ಇನ್ನೂ ಆಗಿಲ್ಲ. ಆ ಎಲ್ಲ ದೇಗುಲಗಳಿಗೂ ದಲಿತರಿಗೆ ಪ್ರವೇಶ ಕೊಡಿಸುವುದು ಸಮಿತಿ ಮುಖ್ಯ ಉದ್ದೇಶ ಎಂದು ಜಿ.ಶಿವಪ್ಪ ತಿಳಿಸಿದರು.
ದಲಿತರ ಗೃಹಪ್ರವೇಶ ಕಾರ್ಯಕ್ರಮಗಳನ್ನು ನಡೆಸಿದ ಹಲವು ಮುಖಂಡರನ್ನು ಸನ್ಮಾನಿಸಲಾಯಿತು.