ಬೆಂಗಳೂರು: ‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಹೊರ ಗುತ್ತಿಗೆ ಸ್ವಚ್ಛತಾ ಸಿಬ್ಬಂದಿಗೆ ಕನಿಷ್ಠ ವೇತನ ಕೂಡ ನೀಡದೆ ಶೋಷಣೆ ಮಾಡಲಾಗುತ್ತಿದೆ. ಈ ಸಂಬಂಧ ಆಸ್ಪತ್ರೆ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ ತಿಳಿಸಿದರು.
ಬುಧವಾರ ಬೆಳಿಗ್ಗೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಅವರು ಸ್ವಚ್ಛತಾ ಸಿಬ್ಬಂದಿಯ ಸಮಸ್ಯೆ ಆಲಿಸಿ ನ್ಯಾಯ ಒದಗಿಸುವ ಭರವಸೆ ನೀಡಿದರು. ಬಳಿಕ ಆಸ್ಪತ್ರೆ ಅಧೀಕ್ಷಕ ಡಾ.ಟಿ. ದುರ್ಗಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಕಾರ್ಮಿಕರ ಕಾಯ್ದೆ ಪ್ರಕಾರ ದಿನಕ್ಕೆ ₨278 (ತಿಂಗಳಿಗೆ ₨8.5 ಸಾವಿರ) ವೇತನ ನೀಡಬೇಕು. ಆದರೆ, ಇಲ್ಲಿ ಕೇವಲ ₨150 (₨4.5 ಸಾವಿರ) ನೀಡುತ್ತಿದ್ದಾರೆ. ಇದು ಸ್ಪಷ್ಟವಾಗಿ ಕಾರ್ಮಿಕರ ಕಾಯ್ದೆ ಉಲ್ಲಂಘನೆ. ಭವಿಷ್ಯ ನಿಧಿ (ಪಿ.ಎಫ್) ಪಾವತಿಯಲ್ಲೂ ಮೋಸ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.
‘ಗುತ್ತಿಗೆ ವಹಿಸಿಕೊಂಡಿರುವ ಸ್ವಿಸ್ ಶಾರ್ಪ್ ಏಜೆನ್ಸಿಯಿಂದ ಸ್ವಚ್ಛತಾ ಸಿಬ್ಬಂದಿಗೆ ಮೋಸವಾಗುತ್ತಿದೆ. ಕೆಲಸ ಮಾಡುವಾಗ ಧರಿಸಲು ಸುರಕ್ಷತಾ ಪರಿಕರಗಳನ್ನೂ ನೀಡದೆ ಶೋಷಿಸಲಾಗುತ್ತಿದೆ. ಇದು ಆಸ್ಪತ್ರೆ ಅಧೀಕ್ಷಕರ ಗಮನಕ್ಕೆ ಬಂದಿಲ್ಲ ಎಂಬುದು ಅಚ್ಚರಿ. ಈ ವಂಚನೆಯಲ್ಲಿ ಆಸ್ಪತ್ರೆಯವರೂ ಶಾಮೀಲಾಗಿರುವ ಅನುಮಾನವಿದೆ’ ಎಂದರು.
‘ಕಾರ್ಮಿಕರ ಕಾಯ್ದೆ ಪ್ರಕಾರ 2014ರ ಏಪ್ರಿಲ್ ನಂತರ ದಿನಕ್ಕೆ ₨278 ವೇತನ ನೀಡಬೇಕು. ಇದರ ಪ್ರಕಾರ ಸ್ವಚ್ಛತಾ ಸಿಬ್ಬಂದಿಗೆ ಈ ವರ್ಷದ ಎಂಟು ತಿಂಗಳ ಬಾಕಿ ಹಣ ಪಾವತಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಏಜೆನ್ಸಿ ಹಾಗೂ ಆಸ್ಪತ್ರೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಅಧೀಕ್ಷಕ ಡಾ.ಟಿ. ದುರ್ಗಣ್ಣ ಪ್ರಯತ್ನಿಸಿದರು. ಅಲ್ಲದೇ, ಆಯೋಗದ ಸದಸ್ಯರ ಜೊತೆ ಏರುಧ್ವನಿಯಲ್ಲಿ ಮಾತನಾಡಿದರು. ‘ಕಾರ್ಮಿಕರ ಕಾಯ್ದೆ ಪ್ರಕಾರವೇ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಅವರು ಎಷ್ಟು ಕೊಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಒಬ್ಬರೂ ಇಷ್ಟು ದಿನ ನಮಗೆ ದೂರು ನೀಡಿಲ್ಲ’ ಎಂದು ನುಡಿದರು.
‘ಈಗ ಏಕಾಏಕಿ ವೇತನ ಹೆಚ್ಚು ಮಾಡಲು ಸಾಧ್ಯವಿಲ್ಲ. ಹಳೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಹೊಸ ಟೆಂಡರ್ ಕರೆದಿದ್ದೇವೆ. ಮುಂದೆ ನೋಡೋಣ’ ಎಂದು ಜಾರಿಕೊಳ್ಳಲು ಪ್ರಯತ್ನಿಸಿದರು. ಆಗ ನಾರಾಯಣ ಅವರು, ‘ಈ ರೀತಿ ಹೇಳಿಕೆ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ. ಆಸ್ಪತ್ರೆಯ ಅಧೀಕ್ಷಕರಾಗಿ ಕಾನೂನು ಬದ್ಧ ವೇತನ ಕೊಡಿಸುವುದು ನಿಮ್ಮ ಕರ್ತವ್ಯ’ ಎಂದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ 120 ಸ್ವಚ್ಛತಾ ಸಿಬ್ಬಂದಿಯಲ್ಲಿ ಹೆಚ್ಚಿನವರು ಮಹಿಳೆಯರು. ಕಸ ಗುಡಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು, ನೆಲ ತೊಳೆಯುವುದು ಇವರ ಕೆಲಸ. ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ.
ವೇತನಕ್ಕೆ ಕತ್ತರಿ
‘16 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸ್ಪತ್ರೆ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ನಾವು ಪದೇಪದೇ ಅನಾರೋಗ್ಯಕ್ಕೆ ಒಳಗಾಗುತ್ತಿರುತ್ತೇವೆ. ಆದರೆ, ಇವರು ಕೊಡುವ ಹಣ ಸಾಕಾಗುವುದಿಲ್ಲ. ಏನೇನೊ ನೆಪ ಹೇಳಿ ಮೂರು ದಿನಗಳ ಕೂಲಿಗೆ ಕತ್ತರಿ ಹಾಕುತ್ತಾರೆ. ಕೈಗವಸು ಕೂಡ ನೀಡುವುದಿಲ್ಲ’ ಎಂದು ಹೇಳಿದ್ದು ಯಶೋಧಮ್ಮ.
ಪಿ.ಎಫ್ ಮಾಹಿತಿ ಇಲ್ಲ
‘ಪಿ.ಎಫ್‌ಗೆಂದು ವೇತನದಲ್ಲಿ ಪ್ರತಿ ತಿಂಗಳು ₨500 ಹಿಡಿಯುತ್ತಿದ್ದಾರೆ. ಆದರೆ, ವಾರ್ಷಿಕ ವಿವರ ನೀಡುತ್ತಿಲ್ಲ. ಪಿ.ಎಫ್ ಸಂಖ್ಯೆಯನ್ನೂ ನೀಡಿಲ್ಲ. ಏಜೆನ್ಸಿಯವರು ಬದಲಾದಾಗ ನಾವು ಎಷ್ಟು ಹಣ ನೀಡಿರುತ್ತೇವೊ ಅದನ್ನೇ ವಾಪಸ್ ಕೊಡುತ್ತಾರೆ’ ಎಂದು ನಳಿನಾ ದೂರಿದರು.
ರಜೆಯಲ್ಲೂ ಕೆಲಸ
‘ನಾನು 8 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ತಿಂಗಳಿಗೆ ₨4.5 ಸಾವಿರ ಸಂಬಳ ನೀಡುತ್ತಾರೆ. ವಾರದ ರಜೆ ಹಾಗೂ ಇತರ ರಜೆ ದಿನಗಳಲ್ಲಿ ಕೂಡ ಬಂದು ಅರ್ಧ ದಿನ ಕೆಲಸ ಮಾಡಬೇಕು’ ಎಂದು ಮುನಿಯಮ್ಮ ತಮ್ಮ ಅಳಲು ತೋಡಿಕೊಂಡರು.