ಬೆಂಗಳೂರು: ‘ಸ್ಮಾರ್ಟ್ ಸಿಟಿ ಕೇಳುವುದಕ್ಕೂ ಮುನ್ನ ಸ್ಮಾರ್ಟ್ ನಾಯಕತ್ವ ರೂಢಿಸಿಕೊಳ್ಳಿ’ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕರೆ ನೀಡಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ನಿರ್ಮಾಣ ಒಂದು ದಿನದಲ್ಲಿ ಆಗುವ ಕೆಲಸವಲ್ಲ. ಕನಿಷ್ಠ 10–15 ವರ್ಷಗಳಾದರೂ ಬೇಕಾಗುತ್ತದೆ. ನೂರು ಸಿಟಿಗಳ ನಿರ್ಮಾಣಕ್ಕೆ ₨ 45ಸಾವಿರ ಕೋಟಿ ಹಣ ಬೇಕು. ಖಾಸಗಿ ಸಹಭಾಗಿತ್ವ ಇಲ್ಲದಿದ್ದರೆ ಸಾಧ್ಯವಾಗದು ಎಂದರು.
ಪ್ರತಿದಿನ ಸ್ವಚ್ಛಮಾಡಿ: ‘ಪ್ರತಿ ದಿನ ಸ್ವಚ್ಛ ಮಾಡಿದರೆ ಮಾತ್ರ ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗುತ್ತದೆ. ಸ್ವಚ್ಛ ಮಾಡುವುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.
ವಿಶ್ವೇಶ್ವರಯ್ಯ ಹೆಸರು: ದೆಹಲಿಯ ಮೆಟ್ರೊ ರೈಲ್ವೆ ನಿಲ್ದಾಣಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ಹೆಸರಿಡಲು ನಿರ್ಧರಿಸಲಾಗಿದೆ. ಸರ್ ಎಂ.ವಿ. ಅವರು ದೇಶವೇ ಮೆಚ್ಚುವ ಎಂಜಿನಿಯರ್ ಎಂದು ವೆಂಕಯ್ಯ ನಾಯ್ಡು ಹೇಳಿದರು.
‘ಉತ್ತಮ ಆಡಳಿತ ದಿನ’ ಸಮರ್ಥನೆ: ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ದಿನವಾದ ಡಿ.25ರಂದು ‘ಉತ್ತಮ ಆಡಳಿತ ದಿನ’ ಎಂದು ಆಚರಿಸುವುದರಲ್ಲಿ ರಾಜಕಾರಣವಿಲ್ಲ. ಯಾರಿಗೂ ನೋವು ಮಾಡುವ ಉದ್ದೇಶವಿಲ್ಲ. ಕ್ರಿಸ್ಮಸ್ ಆಚರಿಸುವುದಕ್ಕೆ ಅಡ್ಡಿಯಿಲ್ಲ. ಹಾಗೆಂದು ಹುಟ್ಟಿದ ದಿನ ಬದಲಾಯಿಸಲಾಗದು ಎಂದರು.
ಮರು ಮತಾಂತರ ಗೊಂದಲವಿಲ್ಲ
‘ಧರ್ಮದ ವಿಷಯದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ವಿಎಚ್‌ಪಿ ನಡೆಸಿದ ಮರು ಮತಾಂತರದಲ್ಲಿ ಗೊಂದಲವಿಲ್ಲ. ಮರು ಮತಾಂತರಕ್ಕೂ ಮುನ್ನ ಮತಾಂತರವಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ. ಬಲವಂತದ ಮತಾಂತರಕ್ಕೆ ನಮ್ಮ ಬೆಂಬಲವಿಲ್ಲ. ಬಿಜೆಪಿಯ ಗೆಲುವನ್ನು ಜೀರ್ಣಿಸಿಕೊಳ್ಳಲಾಗದವರು ಈ ರೀತಿ ಗೊಂದಲ ಸೃಷ್ಟಿಸುತ್ತಿದ್ದಾರೆ’.
ವಿಶೇಷ ಘಟಕ ಸ್ಥಾಪನೆ
‘ಕರ್ನಾಟಕದ ಅಹವಾಲುಗಳನ್ನು ಸ್ವೀಕರಿಸಲೆಂದೇ ನನ್ನ ಕಚೇರಿಯಲ್ಲಿ ವಿಶೇಷ ಘಟಕ ತೆರೆಯಲಾಗಿದೆ. ಅಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ. ನಿಮ್ಮ ಅಹವಾಲುಗಳನ್ನು ಪ್ರಧಾನಿಗೆ ತಲುಪಿಸುತ್ತೇನೆ. ಆದರೆ ತಾಳ್ಮೆ ಇರಲಿ. ಇಡೀ ದೇಶದ ಆರ್ಥಿಕತೆಯನ್ನು ಬದಲಾಯಿಸಬೇಕಾಗಿದೆ. ಕರ್ನಾಟಕಕ್ಕೆ ಹೆಚ್ಚು ಅನುದಾನ ನೀಡಲು ಸಿದ್ಧನಿದ್ದೇನೆ. ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಗೆ ಪ್ರಯತ್ನಿಸಲಾಗುವುದು. ರಾಜ್ಯದಲ್ಲಿ ವಿಶ್ವೇಶ್ವರಯ್ಯ ಸಂಶೋಧನಾ ಕೇಂದ್ರ ತೆರೆಯಲು ಸಂಸದರ ನಿಧಿಯಿಂದ ₨25ಲಕ್ಷ ನೀಡಲಾಗುವುದು’.
–ವೆಂಕಯ್ಯ ನಾಯ್ಡು