ಬೆಂಗಳೂರು, ಜ.7: ಮಹಿಳೆಯೊಬ್ಬರ ಸರ ಕಸಿದು ಪರಾರಿಯಾಗಿದ್ದವನನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಗುಂಡು ಹಾರಿಸಿ ಹಿಡಿದಿದ್ದಾರೆ. ಸಂಪತ್ ಪೊಲೀಸರಿಗೆ ಸಿಕ್ಕಿಬಿದ್ದಿರುವ ಸರಗಳ್ಳ. ಇಂದು ಬೆಳಗ್ಗೆ 9.30ರಲ್ಲಿ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದು ಹೋಗುವಾಗ ಶಾಂತಮ್ಮ ಎಂಬುವರ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಕಿತ್ತುಕೊಂಡಿದ್ದಾರೆ. ಶಾಂತಮ್ಮ ಅವರು ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಅರ್ಧ ಸರ ಕಳ್ಳರ ಪಾಲಾಗಿದೆ. ಶಾಂತಮ್ಮ ಅವರು ಕೂಗಿಕೊಳ್ಳುತ್ತಿದ್ದಂತೆ ಸಾರ್ವಜನಿಕರು ಹಾಗೂ ಗಸ್ತಿನಲ್ಲಿದ್ದ ಪೊಲೀಸರು ಕಳ್ಳರನ್ನು ಬೆನ್ನಟ್ಟಿದ್ದಾರೆ. ಆಗ ಸರಗಳ್ಳರು ಖಾರದ ಪುಡಿ ಎರಚಿ ಡ್ರಾಗರ್ ತೋರಿಸಿ ಬೆದರಿಸಿ ಪರಾರಿಯಾಗಿದ್ದಾರೆ.
ತಕ್ಷಣ ಗಸ್ತು ಪೊಲೀಸರು ಠಾಣೆಗೆ ಮಾಹಿತಿ ರವಾನಿಸಿದ್ದು, ವಿಜಯನಗರ ಉಪವಿಭಾಗದ ಎಲ್ಲೆಡೆಗೂ ಮಾಹಿತಿ ಹೋಗಿದೆ. ಸರಗಳ್ಳರು ಪೇಟೆ ಚೆನ್ನಪ್ಪ ಕೈಗಾರಿಕಾ ಪ್ರದೇಶದಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಕೂಡಲೇ ಪೊಲೀಸರು ಆ ಪ್ರದೇಶವನ್ನು ಸುತ್ತುವರೆದಿದ್ದು, ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆ ವೇಳೆ ಸರಗಳ್ಳರು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಗ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಒಬ್ಬ ಕಳ್ಳನ ಕಾಲಿಗೆ ಗುಂಡು ತಗುಲಿ ಆತ ಕುಸಿದು ಬಿದ್ದಿದ್ದಾನೆ. ಆತನೊಂದಿಗೆ ಇದ್ದ ಮತ್ತೊಬ್ಬ ಕಳ್ಳ ಪರಾರಿಯಾಗಿದ್ದಾನೆ.
ಗಾಯಗೊಂಡಿರುವ ಸರಗಳ್ಳನನ್ನು ವಶಕ್ಕೆ ಪಡೆದಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆತನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಸಿಕ್ಕಿಬಿದ್ದಿರುವ ಸರಗಳ್ಳನಿಗೆ ಪ್ರಾಣಾಪಾಯವಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ತಿಳಿಸಿದ್ದಾರೆ. ಗಾಯಗೊಂಡಿರುವ ಕಳ್ಳನಿಂದ ಅಗ್ರಹಾರ ದಾಸರಹಳ್ಳಿಯಲ್ಲಿ ಅಪಹರಿಸಿರುವ ಅರ್ಧ ಸರ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.