ಬೆಂಗಳೂರು, ನ.7: ಶಾಲಾ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ಕಿರುಕುಳ ಆರೋಪ ಪ್ರಕರಣದಿಂದ ರೊಚ್ಚಿಗೆದ್ದ ಪೋಷಕರು ಶಾಲೆಗೆ ನುಗ್ಗಿ ದಾಂಧಲೆ ನಡೆಸಿ ಬೆಂಕಿ ಹಚ್ಚಿ ಪೀಠೋಪಕರಣಗಳನ್ನು ಭಸ್ಮ ಮಾಡಿ ದೈಹಿಕ ಶಿಕ್ಷಕನನ್ನು ಹಿಗ್ಗಾಮುಗ್ಗಾ ಥಳಿಸಿ ದಾಂಧಲೆ ನಡೆಸಿದ ಘಟನೆ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಸಿಡಿಸಿದ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೈಹಿಕ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ನೂರಾರು ಪೋಷಕರು ಶಾಲೆಯೊಂದರ ಮುಂದೆ ಪ್ರತಿಭಟನೆ ನಡೆಸಿ ಕಲ್ಲು ತೂರಿ ಬೆಂಕಿ ಹಚ್ಚಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಸಿಡಿಸಿದ ಘಟನೆ ನಗರದಲ್ಲಿಂದು ಜರುಗಿದೆ. ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕ ಏಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 500ಕ್ಕೂ ಹೆಚ್ಚು ಪೋಷಕರು ಶಾಲೆ ಮುಂದೆ ಜಮಾಯಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ಯುವಾಗ ಉದ್ರಿಕ್ತಗೊಂಡಿದ್ದ ಪೋಷಕರು ಆತನನ್ನು ಎಳೆದಾಡಿ ಥಳಿಸಿ ತಮ್ಮ ವಶಕ್ಕೆ ನೀಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪೋಷಕರ ನಡುವೆ ವಾಗ್ವಾದ ನಡೆದಿದ್ದು, ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಆಕ್ರೋಶಿತ ಪೋಷಕರು ಕಲ್ಲು ತೂರಾಟ ನಡೆಸಿದ್ದು, ಆವರಣದಲ್ಲಿ ನಿಂತಿದ್ದ ವಾಹನಗಳಿಗೆ, ಶಾಲೆಯಲ್ಲಿನ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿದ್ದಾರೆ. ಪೋಷಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದರೂ ಪ್ರಯೋಜನವಾಗದ ಕಾರಣ ಉದ್ರಿಕ್ತರನ್ನು ಚದುರಿಸಲು ಲಾಠಿಚಾರ್ಜ್ ನಡೆಸಿ ಅಶ್ರುವಾಯು ಸಿಡಿಸಿದ್ದಾರೆ. ಸ್ಥಳಕ್ಕೆ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ಕರೆಸಿಕೊಂಡಿದ್ದು, ಪ್ರಸ್ತುತ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ದಾವಿಸಿದ್ದು, ಪರಿಸ್ಥಿತಿ ಅವಲೋಕಿಸಿ ಹತೋಟಿಗೆ ತಂದಿದ್ದಾರೆ. ಈ ಹಿಂದೆ ಜಾಲಹಳ್ಳಿ, ವರ್ತೂರು, ಇಂದಿರಾನಗರದಲ್ಲಿನ ಶಾಲೆಗಳಲ್ಲೂ ಪುಟ್ಟ ಮಕ್ಕಳ ಮೇಲೆ ಶಾಲಾ ಶಿಕ್ಷಕ, ಬೋಧಕೇತರ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ ಪ್ರಕರಣಗಳು ನಡೆದಿದ್ದವು. ಶಾಲಾ ಬಾಲಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಪೋಷಕರಲ್ಲಿ ಆತಂಕ ಉಂಟುಮಾಡಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ ಹಲವಾರು ಪ್ರಕರಣಗಳು ನಡೆದಿದ್ದು, ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರೆ, ಪೊಲೀಸರನ್ನು ಪ್ರಕರಣಗಳು ಪೇಚಿಗೀಡುಮಾಡಿವೆ.
ಶಾಲೆಯಲ್ಲಿ ನಡೆಯುವ ಇಂತಹ ದುಷ್ಕೃತ್ಯಗಳನ್ನು ನಿಯಂತ್ರಿಸಲು ಹತ್ತು-ಹಲವು ಕ್ರಮಗಳನ್ನು ಕೈಗೊಂಡರೂ ಘಟನೆಗಳು ಮರುಕಳಿಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಶಿಕ್ಷಕರಿಂದಲೇ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತಿರುವುದು ದುರಂತವೇ ಸರಿ. ಇಂದು ಕೂಡ ಅಂತಹ ಒಂದು ಘಟನೆ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪೋಷಕರನ್ನು ರೊಚ್ಚಿಗೆಬ್ಬಿಸಿದೆ.