ಬೆಂಗಳೂರು: 2014 ಡಿಸೆಂಬರ್ 28ಕ್ಕೆ ಬೆಂಗಳೂರಿನ ಚರ್ಚ್ ರಸ್ತೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಮತ್ತು ಗುಪ್ತಚರ ಸಂಸ್ಥೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಶಂಕಿತ ಆರೋಪಿಗಳನ್ನು ಗುರುವಾರ ಭಟ್ಕಳದಲ್ಲಿ ಬಂಧಿಸಲಾಗಿದೆ.
ಬಾಂಬ್ ಸ್ಫೋಟ ನಡೆದ ಸ್ಥಳದಲ್ಲಿ ಸಿಕ್ಕಿದ ಮಾಹಿತಿಯ ಮೇರೆಗೆ ಈ ಇಬ್ಬರು ಶಂಕಿತ ವ್ಯಕ್ತಿಗಳನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಇವರನ್ನು ಬೆಂಗಳೂರಿಗೆ ಕರೆತಂದು ಸಿಸಿಬಿ ಪೊಲೀಸರ ವಶಕ್ಕೆ ಒಪ್ಪಿಸಲಾಗುವುದು.ಭಟ್ಕಳ ನಿವಾಸಿಗಳಾದ ಸದ್ದಾಂ ಮತ್ತು ಮೊಹಮ್ಮದ್ ಆಸೀಫ್ ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳ ಮನೆಯಿಂದ ಕೆಲವೊಂದು ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿದ್ದು, ಇದು ಮುಂದಿನ ತನಿಖೆಗೆ ಸಹಾಯವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಬಂಧನಕ್ಕೊಳಗಾಗಿರುವ ವ್ಯಕ್ತಿಗಳು ನಿಷೇಧಿತ ಉಗ್ರ ಸಂಘಟನೆಯಾದ ಇಂಡಿಯನ್ ಮುಜಾಹಿದ್ದೀನ್‌ಗೆ ಸೇರಿದವರೆಂದು ಶಂಕೆ ವ್ಯಕ್ತ ಪಡಿಸಲಾಗಿದೆ.