ಕರ್ನಾಟಕ

ಅಂತ್ಯಕ್ರಿಯೆಗೂ ಅಡ್ವಾನ್ಸ್ ಬುಕಿಂಗ್!

Pinterest LinkedIn Tumblr

fire

ಬೆಂಗಳೂರು: ಮುಂಗಡ ಹಣ ಪಾವತಿಸಿ ತಮ್ಮ ಅಂತ್ಯ­ಕ್ರಿಯೆ, ಉತ್ತರಕ್ರಿಯೆಗೆ ವಿಲ್‌  ಬರೆದುಕೊಡುವ ಪದ್ಧತಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಚಾಲ್ತಿಗೆ ಬಂದಿದೆ.

ಹೀಗೆ ವಿಲ್‌ ಬರೆದುಕೊಟ್ಟ 9 ಮಂದಿಯ ಅಂತ್ಯ­ಕ್ರಿಯೆ ಮತ್ತು ಅಪರ ಕರ್ಮಗಳನ್ನು ಶ್ರೀರಂಗಪಟ್ಟಣದ ಖ್ಯಾತ ಜ್ಯೋತಿಷಿ ಭಾನುಪ್ರಕಾಶಶರ್ಮ ಈಗಾಗಲೇ ನಡೆಸಿಕೊಟ್ಟಿದ್ದಾರೆ. ಇನ್ನೂ 18 ಮಂದಿ, ತಾವು ನಿಧನ­ರಾದ ನಂತರ ತಮ್ಮ ಅಂತ್ಯ ಸಂಸ್ಕಾರ ನಡೆ­ಸುವಂತೆ ಶರ್ಮಾ ಅವರಿಗೆ ವಿಲ್‌ ಬರೆದುಕೊಟ್ಟಿದ್ದಾರೆ.

ಭಾನುಪ್ರಕಾಶ ಶರ್ಮ ಅವರು 30 ವರ್ಷಗಳಿಂದ ಶ್ರೀರಂಗಪಟ್ಟಣದಲ್ಲಿ ಅಪರ ಕರ್ಮ, ಕರ್ಮಾಂಗಗಳು, ಪೌರೋಹಿತ್ಯ ಕಲಿಸುವ ಪಾಠಶಾಲೆ ನಡೆಸುತ್ತಿದ್ದಾರೆ. ಜ್ಯೋತಿಷಿಯಾಗಿಯೂ ಹೆಸರು ಗಳಿಸಿದ್ದಾರೆ.

‘ಹೀಗೆ ವಿಲ್‌ ಬರೆದುಕೊಟ್ಟವರಲ್ಲಿ ಬಹುತೇಕರು ಶ್ರೀಮಂತರು. ಇವರಿಗೆಲ್ಲ ಮಕ್ಕಳೂ ಇದ್ದಾರೆ. ಪರಿ­­ಸ್ಥಿತಿ ಒತ್ತ­ಡಕ್ಕೆ ಸಿಲುಕಿ ಈಗ ಒಂಟಿಯಾಗಿ­ದ್ದ­ರಿಂದ ತಾವು ಅನಾಥ ಶವವಾಗುವುದು ಬೇಡ, ತಮ್ಮ ಮೃತ­­ದೇಹಕ್ಕೆ ಶಾಸ್ತ್ರಪ್ರಕಾರ ಅಂತ್ಯ­ಸಂಸ್ಕಾರ ದೊರೆ­ಯ­­ಬೇಕು ಎನ್ನುವ ಉದ್ದೇಶದಿಂದ ವಿಲ್‌ ಬರೆ­ದು­­­ಕೊಟ್ಟಿ­ದ್ದಾರೆ’ ಎಂದು ಶರ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹಳ ಜನರ ಮಕ್ಕಳು ವಿದೇಶಗಳಲ್ಲಿದ್ದಾರೆ ಅಥವಾ ದೇಶದ ಬೇರೆ ಬೇರೆ ಭಾಗಗಳಲ್ಲಿದ್ದಾರೆ. ಹುಟ್ಟೂರಿನಲ್ಲಿ ವಯಸ್ಸಾದ ತಂದೆ ತಾಯಿಗಳು ಮಾತ್ರ ಇದ್ದಾರೆ. ಅವರಿಗೆ ಹಣಕಾಸಿನ ತೊಂದರೆ ಇಲ್ಲ. ಆದರೆ ತಾವು ಮೃತಪಟ್ಟರೆ ತಮ್ಮ ಅಂತ್ಯ ಸಂಸ್ಕಾರ ಸೂಕ್ತವಾಗಿ ನಡೆಯುವ ಬಗ್ಗೆ ಅನುಮಾನ­ಗಳಿವೆ. ಹಾಗಾಗಿ ಹಿರಿಯರೇ ಬಂದು ನನ್ನಲ್ಲಿ ಮನವಿ ಮಾಡಿಕೊಂಡು ಅಂತ್ಯಕ್ರಿಯೆ ನಡೆಸಿಕೊಡುವಂತೆ ಕೋರಿ­­ದ್ದಾರೆ. ವಿಲ್‌ ಬರೆದು ತಮ್ಮ ದೇಹವನ್ನು ನನಗೆ ದಾನ ಮಾಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಮಕ್ಕಳೂ ಕೂಡ ತಮ್ಮ ತಂದೆ ತಾಯಿಗಳ ಅಂತ್ಯಕ್ರಿಯೆ ನಡೆಸು­ವಂತೆ ಮನವಿ ಮಾಡಿದ್ದಾರೆ’ ಎಂದರು.

ಜನರದೇ ಬೇಡಿಕೆ: ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಹರಿಯುತ್ತಿರುವುದರಿಂದ ಹಾಗೂ ಇದೊಂದು ಪುಣ್ಯ­ಕ್ಷೇತ್ರವೆಂದು ಬಿಂಬಿತವಾಗಿರುವುದರಿಂದ ಇಲ್ಲೇ ತಮ್ಮ ಅಂತ್ಯ ಸಂಸ್ಕಾರವಾಗಬೇಕು ಎಂದು ಹಲವರು ಬಯಸುತ್ತಾರೆ‘ ಇದು ನಾನು ಆರಂಭಿಸಿದ ಯೋಜನೆ ಅಲ್ಲ. ಜನರೇ ಬಂದು ತಮ್ಮ ಅಂತ್ಯಕ್ರಿಯೆ ನಡೆಸಿಕೊಡುವಂತೆ ಮನವಿ ಮಾಡಿಕೊಂಡಿದ್ದರಿಂದ ಒಪ್ಪಿಗೆ ಸೂಚಿಸಿದ್ದೇನೆ. ಈ ವಿಷಯ ಗೊತ್ತಾಗಿ 18 ಮಂದಿ ವಿಲ್‌ ಬರೆದುಕೊಟ್ಟಿದ್ದಾರೆ’ ಎಂದು ಅವರು  ತಿಳಿಸಿದರು.

‘ಅಂತ್ಯ ಸಂಸ್ಕಾರ ಮತ್ತು ಉತ್ತರ ಕ್ರಿಯೆಗಳನ್ನು ಶಾಸ್ತ್ರೋಕ್ತವಾಗಿ ನಡೆಸುವಂತೆ ರೂ. 35 ಸಾವಿರದಿಂದ ರೂ. 5 ಲಕ್ಷದವರೆಗೂ ಹಣ ನೀಡಿದವರಿದ್ದಾರೆ. ಈ ಹಣವನ್ನು ಪ್ರತ್ಯೇಕ­ವಾಗಿ ತೆಗೆದಿಟ್ಟು ಅದೇ ಉದ್ದೇಶಕ್ಕೆ ಬಳಸಲಾಗುತ್ತಿದೆ’ ಎಂದು ಅವರು ಹೇಳಿದರು.

ಹೀಗೆ ಅಂತ್ಯಸಂಸ್ಕಾರಕ್ಕಾಗಿ ದೇಹ ದಾನ ಮಾಡುವವರಿಗೆ ಯಾವುದಾದರೂ ಆಸ್ಪತ್ರೆಗೆ ದೇಹ ದಾನ ಮಾಡುವಂತೆ ಸಲಹೆ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರೆ ‘ಇದು ನಂಬಿಕೆಯ ವಿಷಯ. ದೇಹಕ್ಕೆ ಅಂತ್ಯ ಸಂಸ್ಕಾರ ಆಗಲೇ ಬೇಕು ಎಂದು ಬಯಸುವವರಿಗೆ ನಿಮ್ಮ ದೇಹವನ್ನು ಆಸ್ಪತ್ರೆಗಳಿಗೆ ದಾನ ಮಾಡಿ ಎಂದು ನಾನು ಸಲಹೆ ಕೊಡಲು ಸಾಧ್ಯವಿಲ್ಲ. ಆದರೆ ಯಾರಾದರೂ ದೇಹವನ್ನು ದಾನ ಮಾಡಿ ನನ್ನ ಬಳಿ ಬಂದು ಅಂತ್ಯಸಂಸ್ಕಾರ ಮಾಡಬೇಕು ಎಂದು ಹೇಳಿದರೆ ಅದಕ್ಕೆ ಶಾಸ್ತ್ರಗಳಲ್ಲಿ ಅವಕಾಶ­ವಿದೆ. ರಕ್ತ ಚಂದನದ ಮೂರ್ತಿ ಮಾಡಿ ಸಂಸ್ಕಾರ ಮಾಡಬಹುದು’ ಎಂದರು.

ವೃದ್ಧಾಶ್ರಮಗಳಲ್ಲೂ ಸೌಲಭ್ಯ: ಅಂತ್ಯ ಸಂಸ್ಕಾರ ಮತ್ತು ಉತ್ತರಾದಿ ಕ್ರಿಯೆಗಳ ಸೌಲಭ್ಯಗಳು ಈಗ ಕೆಲವು ವೃದ್ಧಾಶ್ರಮಗಳಲ್ಲಿಯೂ ಲಭ್ಯವಾಗುತ್ತಿವೆ. ವೃದ್ಧರನ್ನು ಸೇರಿಸಿಕೊಳ್ಳುವಾಗಲೇ ಇದಕ್ಕೆ ಪ್ರತ್ಯೇಕ ಶುಲ್ಕ ಪಡೆಯಲಾಗುತ್ತಿದೆ.

ಹಣ ವಾಪಸು ಪಡೆದರು!
ವ್ಯಕ್ತಿಯೊಬ್ಬರು ತನ್ನ ಅಂತ್ಯಸಂಸ್ಕಾರ ನಡೆಸು­ವಂತೆ ಭಾನುಪ್ರಕಾಶ ಶರ್ಮ ಅವರಲ್ಲಿ ರೂ. 35 ಸಾವಿರ ನೀಡಿ ವಿಲ್‌ ಬರೆದುಕೊಟ್ಟಿದ್ದರು. ಈ ಹಣ ಬ್ಯಾಂಕಿನಲ್ಲಿಟ್ಟಿ­ದ್ದ­ರಿಂದ ದ್ವಿಗುಣವೂ ಆಗಿತ್ತು. ಆದರೆ ಒಂದು ದಿನ ಬಂದ ಆ ವ್ಯಕ್ತಿ, ‘ನನ್ನ ಮಗನಿಗೆ ಎಂಜಿನಿ­ಯರಿಂಗ್‌ ಸೀಟು ಸಿಕ್ಕಿದೆ. ಹಣಕಾಸಿನ ತೊಂದರೆ ಇರು­ವುದರಿಂದ ದಯಮಾಡಿ ಅಂತ್ಯಸಂಸ್ಕಾರಕ್ಕೆ ಇಟ್ಟ ಹಣವನ್ನು ವಾಪಸು ಕೊಡಿ’ ಎಂದು ಹಣ ವಾಪಸು ಪಡೆದು­ಕೊಂಡು ಹೋದರು ಎಂದೂ ಶರ್ಮ ಹೇಳಿದರು.

‘5 ಗಂಡು ಮಕ್ಕಳ ತಂದೆಯೊಬ್ಬರು ಅಂತ್ಯಕ್ರಿಯೆ ಬಗ್ಗೆ ವಿಲ್‌ ಬರೆದುಕೊಟ್ಟಿದ್ದರು. ಅವರು ನಿಧನರಾದ ಸುದ್ದಿ ತಿಳಿದು ಮೃತ ದೇಹ ಪಡೆಯಲು ಹೋದಾಗ ಮಕ್ಕಳು ತಾವೇ ಅಂತ್ಯಕ್ರಿಯೆ ಮಾಡುವುದಾಗಿ ತಿಳಿಸಿದರು. ಆಗ ಅವರ ಎದುರಿನಲ್ಲಿಯೇ ವಿಲ್‌ ಹರಿದು ಹಾಕಿ ಮಕ್ಕಳಿಗೆ ಅಂತ್ಯಸಂಸ್ಕಾರ ನಡೆಸಲು ಅವಕಾಶ ಕಲ್ಪಿಸಿದ್ದಾಗಿಯೂ ಅವರು ತಿಳಿಸಿದರು.

Write A Comment