ಕರ್ನಾಟಕ

ಸೈಟ್‌: ಆರೋಪ ನಿರಾಕರಿಸಿದ ಸುದರ್ಶನ್‌

Pinterest LinkedIn Tumblr

 

v.r.sudarshan

ಬೆಂಗಳೂರು: ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹೆಸರನ್ನು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಸರಕಾರ ಶಿಫಾರಸು ಮಾಡಿದ ನಂತರ ಅವರ ವಿರುದ್ಧ ಒಂದಲ್ಲಾ ಒಂದು ಆರೋಪ ಕೇಳಿಬಂದಿದ್ದು, ಇದೀಗ ಸುಳ್ಳು ಪ್ರಮಾಣ ಪತ್ರ ನೀಡಿ ‘ಜಿ’ ಕೆಟಗರಿ ಸೈಟ್ ಪಡೆದ ಹೊಸ ಆರೋಪ ಮಾಡಲಾಗಿದೆ.

ಪತ್ನಿ ಹೆಸರಿನಲ್ಲಿ ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿವೇಶನ ಪಡೆದು ಮನೆ ಕಟ್ಟಿದ್ದರೂ ಬೆಂಗಳೂರಿನಲ್ಲಿ ಸ್ವಂತ ಮನೆ ಇಲ್ಲ ಎಂದು ಪ್ರಮಾಣಪತ್ರ ನೀಡಿ ‘ಜಿ’ ಕೆಟಗರಿ ಸೈಟ್ ಪಡೆದಿದ್ದಾರೆ ಎಂದು ಸುದ್ದಿವಾಹಿನಿಯೊಂದು ಗುರುವಾರ ವರದಿ ಬಿತ್ತರಿಸಿತ್ತು. ಇದಾದ ಕೆಲವು ಗಂಟೆಗಳಲ್ಲೇ ತುರ್ತು ಸುದ್ದಿಗೋಷ್ಠಿ ನಡೆಸಿದ ಸುದರ್ಶನ್, ”ಬಿಡಿಎ ನಿವೇಶನ ಪಡೆದಿರುವ ವಿಚಾರದಲ್ಲಿ ಯಾವುದೇ ನಿಯಮ ಉಲ್ಲಂಘಿಸಿಲ್ಲ ,” ಎಂದು ಸ್ಪಷ್ಟಪಡಿಸಿದರು.

”ನನ್ನ ರಾಜಕೀಯ ಏಳಿಗೆ ಸಹಿಸದ ಕೆಲ ಸ್ವಜಾತಿ ಮುಖಂಡರು, ಸ್ವಗ್ರಾಮದ ವ್ಯಕ್ತಿಗಳು ಹಾಗೂ ಸರಕಾರದ ಕೆಲ ಅಧಿಕಾರಿಗಳು ಪಿತೂರಿ ನಡೆಸಿದ್ದಾರೆ. ತಪ್ಪು ಮಾಡದ ಕಾರಣ ಇಂಥದ್ದಕ್ಕೆ ಹೆದರುವ ಅಗತ್ಯ ಇಲ್ಲವಾದರೂ, ತೇಜೋವಧೆ ಮಾಡುವವರಿಗೆ ದೇವರು ಒಳ್ಳೆಯದು ಮಾಡಲಿ. ಸೈಟನ್ನು ನಿಯಮ ಉಲ್ಲಂಘಿಸಿ ಪಡೆದಿದ್ದಲ್ಲಿ ಯಾವುದೇ ರೀತಿಯ ತನಿಖೆಗೆ ನಾನು ಸಿದ್ಧನಿರುವೆ,” ಎಂದು ಸವಾಲು ಹಾಕಿದರು.

ಮೊದಲು ಸ್ವಗ್ರಾಮ ವೇಮಗಲ್‌ನಲ್ಲಿ ಹತ್ತು ಗುಂಟೆ ಸರಕಾರಿ ಜಮೀನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ದೂರಲಾಗಿತ್ತು. ನಂತರ ಶಿಕ್ಷಣ ಟ್ರಸ್ಟ್‌ನಲ್ಲಿ ಕುಟುಂಬ ಸದಸ್ಯರು ಇದ್ದಾರೆ ಎಂಬ ಕಾರಣಕ್ಕೆ ಹತ್ತು ಎಕರೆ ಕೆರೆ ಜಮೀನನ್ನು ಮಂಜೂರು ಮಾಡಿಸಿದ್ದರು ಎಂಬ ಆರೋಪಿಸಲಾಗಿತ್ತು. ಈಗ ಸೈಟ್ ಇದ್ದರೂ ಬಿಡಿಎ ಜಿ ಕೆಟಗರಿ ನಿವೇಶನ ಪಡೆದು ಕಾನೂನು ಉಲ್ಲಂಘಿಸಿದ್ದಾರೆ ಎಂಬ ಮತ್ತೊಂದು ಆರೋಪ ಕೇಳಿಬಂದಿದೆ.

ಸುದ್ದಿಗೋಷ್ಠಿಯಲ್ಲಿ ಸುದರ್ಶನ್ ಹೇಳಿದಿಷ್ಟು
”1996-97ರಲ್ಲಿ ಪತ್ನಿಗೆ ವಿಲ್ ಮೂಲಕ ಅವರ ತವರು ಮನೆಯವರು ಸೈಟ್ ನೀಡಿದ್ದು, 2010ರ ಬಳಿಕ ವಾಸದ ಮನೆ ನಿರ್ಮಿಸಲಾಗಿದೆ. ಇದಕ್ಕೆ ಅಗತ್ಯ ದಾಖಲೆಗಳು ಇವೆ. ಈ ಸೈಟ್ ಯಲಹಂಕ ಹೋಬಳಿ ಕೊಡಿಗೇಹಳ್ಳಿಯಲ್ಲಿ ಎನ್‌ಟಿಐ ಸೊಸೈಟಿ ನಿರ್ಮಿಸಿರುವ ಬಡಾವಣೆಗೆ ಸೇರಿದೆ. ಹಿಂದಿನ ಬ್ಯಾಟರಾಯನಪುರ ನಗರಸಭೆ ವ್ಯಾಪ್ತಿಯಲ್ಲಿದ್ದ ಕಾರಣ ಆಗ ಪಾಲಿಕೆಗೆ ಒಳಪಟ್ಟಿರಲಿಲ್ಲ. 2006ರಲ್ಲಿ ಬಿಬಿಎಂಪಿ ರಚನೆಯಾದ ನಂತರ ಕೊಡಿಗೇಹಳ್ಳಿ ವ್ಯಾಪ್ತಿ ಪಾಲಿಕೆ ಸೇರಿದ್ದರಿಂದ ಎರಡು ಸೈಟ್ ಪಡೆಯಲಾಗಿದೆ ಎಂದು ಬಿಂಬಿಸಲಾಗಿದೆ,”ಎಂದರು.

”ಬಿಡಿಎನಿಂದ 2001ರಲ್ಲಿ ಇತರೆ ಶಾಸಕರಿಗೆ ನೀಡಿದಂತೆ ತನಗೂ ಜಿ ಕೆಟಗರಿ ಅಡಿ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ 50/80 ವಿಸ್ತೀರ್ಣದ ಸೈಟ್ ಹಂಚಿಕೆ ಆಗಿದೆ. ಈ ಸೈಟ್ ಅನ್ನು ವಾಣಿಜ್ಯ ಉದ್ದೇಶಕ್ಕಾಗಿ ಬದಲಾಯಿಸಿಕೊಳ್ಳಲು ಸರಕಾರದ ಆದೇಶ 2002ರ ಡಿ.10ರಂದೇ ದೊರೆತಿದೆ. ಇದಕ್ಕೆ ನಿಗದಿ ಮಾಡಿದ್ದ ಹಣ ಪಾವತಿಸಿಯೇ ತನ್ನ ಹೆಸರಿಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಹಾಗಾಗಿ ಜಿ ಕೆಟಗರಿ ಸೈಟ್‌ಗೂ ಪತ್ನಿ ಹೊಂದಿದ್ದ ನಿವೇಶನಕ್ಕೂ ಯಾವುದೇ ಸಂಬಂಧ ಇಲ್ಲ ,”ಎಂದು ಹೇಳಿದರು.

”ಕೆಲವರು ಸೈಟ್ ವಿಚಾರದಲ್ಲಿ ಪೂರ್ಣ ಸತ್ಯ ತಿಳಿಯದೆ ಆರೋಪ ಮಾಡುತ್ತಿದ್ದಾರೆ. ಅಂಥವರು ದಾಖಲೆ ಪರಿಶೀಲಿಸಿ ಮಾತನಾಡಬೇಕೆ ಹೊರತು ತೇಜೋವಧೆ ಮಾಡುವ ಮಟ್ಟಕ್ಕೆ ಇಳಿಯಬಾರದು. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಮಗನ ಶಿಕ್ಷಣಕ್ಕಾಗಿ ಬ್ಯಾಂಕ್‌ನಲ್ಲಿ ಸಾಲ ಮಾಡಿರುವೆ. ರಾಜಕೀಯ ಜೀವನದಲ್ಲಿ ಸುದೀರ್ಘ ಕಾಲ ಹಾದಿ ಸವೆಸಿದ್ದು, ಕದ್ದು ಮುಚ್ಚಿ ವ್ಯವಹಾರ ಮಾಡಿಲ್ಲ. ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದ ಆಯ್ಕೆ ಕುರಿತು ಸರಕಾರ ಹಾಗೂ ರಾಜ್ಯಪಾಲರ ವಿವೇಚನೆಗೆ ಬದ್ಧನಾಗಿರುವೆ,” ಎಂದು ಸುದರ್ಶನ್ ವಿವರಿಸಿದರು.

ಸುದರ್ಶನ್ ನೇಮಕ: ಸಿಎಂ ಸಮರ್ಥನೆ
ಹೊಸದಿಲ್ಲಿ: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ವಿ.ಆರ್. ಸುದರ್ಶನ್ ನೇಮಕವನ್ನು ಮುಖ್ಯಮಂತ್ರಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲದಿದ್ದರೂ ಬಿಜೆಪಿ ಕ್ಷುಲ್ಲಕ ಕಾರಣಗಳನ್ನು ಮುಂದೆ ಮಾಡಿ ಸುದರ್ಶನ್ ಅವರ ಚಾರಿತ್ರ್ಯವಧೆಯಲ್ಲಿ ತೊಡಗಿದೆ ಎಂದು ಸುದ್ದಿಗಾರರಿಗೆ ಹೇಳಿದರು.

”ನೇಮಕದಲ್ಲಿ ಯಾವುದೇ ವಿವಾದ ಇಲ್ಲ. ಪ್ರಾಮಾಣಿಕರು, ಸಚ್ಚಾರಿತ್ರ್ಯ ಉಳ್ಳವರನ್ನು ನೇಮಕ ಮಾಡಬೇಕು, ಮಾಡಿದ್ದೇವೆ. ನಾವು ನೇಮಕ ಮಾಡಿರುವ ಯಾರ ಮೇಲೆ ಕ್ರಿಮಿನಲ್ ಕೇಸುಗಳಿವೆ ತೋರಿಸಲಿ. ರಾಜಕಾರಣಿಗಳನ್ನು ಮಾಡಲಾಗಿದೆ ಎಂಬ ದೂರಿನಲ್ಲೂ ಹುರುಳಿಲ್ಲ. ಈ ಹಿಂದೆ ಚೆನ್ನಿಗರಾಮಯ್ಯ, ಬಿ.ಎಲ್.ಗೌಡ, ದೊಡ್ಡೇಗೌಡ, ದುಗ್ಗಪ್ಪ, ಡಾ.ಕೃಷ್ಣ ಅವರನ್ನು ನೇಮಕ ಮಾಡಲಾಗಿತ್ತು. ಅವರೆಲ್ಲ ರಾಜಕಾರಣಿಗಳಾಗಿರಲಿಲ್ಲವೇನು? ಮಂಗಳಾ ಶ್ರೀಧರ್ ಅವರನ್ನು ಮತ್ತು ನಾಗರಾಜ ಎಂಬ ಆರೆಸ್ಸೆಸ್ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೇಮಕ ಮಾಡಿದ್ದು ಇದೇ ಬಿಜೆಪಿಯಲ್ಲವೇ,” ಎಂದು ಅವರು ಪ್ರಶ್ನಿಸಿದರು.

Write A Comment