ನರಗುಂದ (ಗದಗ ಜಿಲ್ಲೆ): ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಂಶೋಧನೆ ಮಾಡಿರುವ ಸೂಕ್ಷ್ಮ ಜೀವಾಣುಗಳನ್ನು (ಕಲ್ಚರ್) ತಿಪ್ಪೆಗಳಿಗೆ ಸೇರಿಸಿ ಸತ್ವಭರಿತ ಕಾಂಪೋಸ್ಟ್ ಗೊಬ್ಬರವನ್ನಾಗಿಸುವ ‘ತಿಪ್ಪೆ ಸಂಸ್ಕರಣೆ ಆಂದೋಲನ’ಕ್ಕೆ ಜಿಲ್ಲೆಯಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ತಾಲ್ಲೂಕಿನ ಕಣಕಿಕೊಪ್ಪ ಗ್ರಾಮದಲ್ಲಿ ಶನಿವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ತಿಪ್ಪೆಗೆ ಸೂಕ್ಷ್ಮ ಜೀವಾಣು ಸಿಂಪಡಿಸಿ ಚಾಲನೆ ನೀಡಿದರು.
ಜಿಲ್ಲೆಯ ನರಗುಂದ ತಾಲ್ಲೂಕಿನ 30, ರೋಣ ಹಾಗೂ ಗದಗ ತಾಲ್ಲೂಕಿನ ತಲಾ ಹತ್ತು ಗ್ರಾಮಗಳು ಸೇರಿದಂತೆ ಒಟ್ಟು 50 ಹಳ್ಳಿಗಳಲ್ಲಿ ಏಕಕಾಲಕ್ಕೆ ತಿಪ್ಪೆ ಸಂಸ್ಕರಣೆ ಕೈಗೊಳ್ಳಲು ಕೃಷಿ ವಿಶ್ವವಿದ್ಯಾಲಯ ಐದು ಟನ್ ಸೂಕ್ಷ್ಮ ಜೀವಾಣುಗಳನ್ನು ಉಚಿತವಾಗಿ ನೀಡಿದೆ.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾ-ಡಿದ ಸಚಿವ ಪಾಟೀಲ, ದೇಶದಲ್ಲಿಯೇ ಪ್ರಥಮ ಬಾರಿಗೆ ನರಗುಂದ ತಾಲ್ಲೂಕಿನಲ್ಲಿ ತಿಪ್ಪೆ ಸಂಸ್ಕರಣೆ ಆಂದೋಲನ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ರೈತರಿಗೆ ಆದಾಯ ಬರುವುದರ ಜತೆಗೆ ಉತ್ತಮ ಗೊಬ್ಬರ ದೊರೆಯುತ್ತದೆ. ಜತೆಗೆ ನಿರ್ಮಲ ಗ್ರಾಮವಾಗಲಿದೆ. ಸರಿಯಾದ ರೀತಿಯಲ್ಲಿ ರೈತರು ಇದನ್ನು ಬಳಸಿಕೊಂಡರೆ ಹಳ್ಳಿಗಳ ಚಿತ್ರಣವೇ ಬದಲಾಗಲಿದೆ.
ತಿಪ್ಪೆ ಸಂಸ್ಕರಣೆ ಮಾಡಲು ಒಂದು ಕಕೆ.ಜಿ ಸೂಕ್ಷ್ಮ ಜೀವಾಣುವನ್ನು ನೀರಿನಲ್ಲಿ ಸೆಗಣಿಯೊಂದಿಗೆ ಬೆರಸಿದ ದ್ರಾವಣವನ್ನು ಘನತ್ಯಾಜ್ಯದ ಮೇಲೆ ಹಾಕಬೇಕು. ಘನತ್ಯಾಜ್ಯದ ರಾಶಿಗಳಿಗೆ ಬ್ಯಾಕ್ಟೀರಿಯಾಗಳನ್ನು ಸೇರಿಸುವ ಮೂಲಕ ಅದನ್ನು ಗೊಬ್ಬರವನ್ನಾಗಿ ಪರಿವರ್ತನೆ ಮಾಡಲಾಗುವುದು. ಒಂದು ಕೆ.ಜಿ. ಸೂಕ್ಷ್ಮ ಜೀವಾಣುವಿಗೆ ₨ 60 ಪಾವತಿಸಬೇಕು. ಸೂಕ್ಷ್ಮ ಜೀವಾಣು ಖರೀದಿಸಲು ರೈತರಿಗೆ ತೊಂದರೆಯಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ತಾಲ್ಲೂಕಿನ ಬೆಳ್ಳಿರಿಯಲ್ಲಿ 140 ಎಕರೆ ಕೃಷಿ ಫಾರ್ಮ್‌ನಲ್ಲಿ ಕೃಷಿ ಪಾಲಿಟೆಕ್ನಿಕ್ ಆರಂಭಿಸಬೇಕೆಂಬ ಶಾಸಕ ಬಿ.ಆರ್.ಯಾವಗಲ್ ಮನವಿಗೆ ಸ್ಪಂದಿಸಿದ ಸಚಿವರು, ಮುಖ್ಯಮಂತ್ರಿ ಜತೆ ಚರ್ಚಿಸಿ ಪ್ರಸಕ್ತ ವರ್ಷದಿಂದಲೇ ಕಾಲೇಜು ಆರಂಭಿಸಲು ಒತ್ತಾಯಿಸ ಲಾಗುವುದು ಎಂದು ತಿಳಿಸಿದರು. ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ಪಿ.ಬಿರಾದರ ಮಾತನಾಡಿದರು.
ತಿಪ್ಪೆ ಸಂಸ್ಕರಣಾ ವಿಧಾನ
ಪ್ರತಿ 2 ಟನ್ ತಿಪ್ಪೆ ಸಂಸ್ಕರಣಕ್ಕೆ ಒಂದು ಕೆ.ಜಿ ಸೂಕ್ಷ್ಮಜೀವಾಣುವನ್ನು 15 ಲೀಟರ್ ನೀರಿನಲ್ಲಿ 3–4 ಕೆ.ಜಿಯಷ್ಟು ಸೆಗಣಿಯೊಂದಿಗೆ ಕಲಿಸಿ ದ್ರಾವಣವನ್ನು ತಿಪ್ಪೆ ಮೇಲೆ ಸಿಂಪಡಿಸಬೇಕು. ತಿಪ್ಪೆಯಲ್ಲಿ ಶೇಕಡಾ 60ರಷ್ಟು ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಪ್ರತಿ 10–15 ದಿನಕ್ಕೊಮ್ಮೆ ಒಂದು ಬಕೆಟ್‌ನಷ್ಟು ನೀರನ್ನು ಸಿಂಪಡಿಸಬೇಕು. ಈ ರೀತಿ ಮಾಡುವುದರಿಂದ ತಿಪ್ಪೆಯು 60 ರಿಂದ 90 ದಿನಗಳಲ್ಲಿ ಸತ್ವಭರಿತ ಕಾಂಪೋಸ್ಟ್ ಗೊಬ್ಬರವಾಗಿ ರೂಪುಗೊಳ್ಳುತ್ತದೆ.