ಬೆಳಗಾವಿ: ಇಬ್ಬರು ಮಕ್ಕಳು ತಮ್ಮ ತಂದೆ–ತಾಯಿಯಿಂದ ದೂರವಾಗಿ ಬರೋಬ್ಬರಿ 14 ವರ್ಷಗಳು ಗತಿಸಿ ದ್ದವು. ತಮ್ಮ ಪಾಲಕರನ್ನು ಕಾಣುವ ಅವರ ಕನಸು ಕಮರಿ ಹೋಗಿತ್ತು. ಆದರೆ, ಅದೃಷ್ಟವಶಾತ್ ವಿಧಿ ಅವರ ಕೈಹಿಡಿದಿದೆ. ೧೪ ವರ್ಷಗಳ ನಂತರ ಇಬ್ಬರು ಮಕ್ಕಳು ತಮ್ಮ ತಂದೆಯ ಮಡಿಲಿಗೆ ಸೇರಿದ್ದಾರೆ. ಇಂಥ ಅಪರೂಪದ ಘಟನೆಗೆ ಕುಂದಾನಗರಿ ಸಾಕ್ಷಿಯಾಗಿದೆ.
ಏನಿದು ಘಟನೆ? ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆಯ ಮಂಜು ರಾಮಸ್ವಾಮಿ ಎಂಬುವರು ಪತ್ನಿ ಶಾರದಾ ಜತೆ ಕಾರ್ಕಳದಲ್ಲಿ ನೆಲೆಸಿದ್ದರು. ಆದರೆ, ಮಂಜು ಮಂಗಳೂರಿಗೆ ಕೂಲಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಶಾರದಾ ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ, ಮನೆ ಬಿಟ್ಟು ಹೋಗಿದ್ದರು.
ಆಗ ತಂದೆ– ತಾಯಿಯನ್ನು ಕಾಣದೇ ಗಾಬರಿಗೊಂಡ 4 ವರ್ಷದ ಸುನೀಲ್ ಹಾಗೂ 3 ವರ್ಷದ ಹಂಸಾ ಅಳಲಾರಂಭಿಸಿದರು. ಇದನ್ನು ಕಂಡ ನೆರೆ–ಹೊರೆಯವರು ಇಬ್ಬರನ್ನು ಉಡುಪಿಯ ಮಕ್ಕಳ ರಕ್ಷಣಾ ಕೇಂದ್ರಕ್ಕೆ ದಾಖಲಿಸಿದ್ದರು.
ಉಡುಪಿಯ ಮಕ್ಕಳ ರಕ್ಷಣಾ ಕೇಂದ್ರದಲ್ಲೇ ನೆಲೆಸಿದ್ದ ಹಂಸಾ, ಕಳೆದ ವರ್ಷವಷ್ಟೇ ಸವದತ್ತಿಯ ಬಾಲಮಂದಿರಕ್ಕೆ ಸ್ಥಳಾಂತರಗೊಂಡಿದ್ದಳು. ಉಡುಪಿ ಮತ್ತು ಕಾರವಾರದಲ್ಲಿ ಅಧ್ಯಯನ ನಡೆಸಿದ ಸುನೀಲ್ ಸಹ ಬೆಳಗಾವಿ ತಾಲ್ಲೂಕಿನ ಸಂತಿಬಸ್ತವಾಡದ ಸಂತ ಜೋಸೆಫ್ ಬಾಲಾಶ್ರಮಕ್ಕೆ ಸ್ಥಳಾಂತರಗೊಂಡಿದ್ದ.
ಸಹೋದರ– ಸಹೋದರಿ ಹೆತ್ತವರ ಹುಡುಕಾಟ ನಡೆಸಿದ್ದರು. ಈಚೆಗೆ ಸಹೋದರಿಯ ಪ್ರಮಾಣಪತ್ರ ತರಲು ಉಡುಪಿಗೆ ಹೋದ ಸಂದರ್ಭದಲ್ಲಿ ಸುನೀಲ್‌ಗೆ ತಂದೆಯ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಬೆನ್ನಟ್ಟಿದ ಸುನೀಲ್, ಕೊನೆಗೂ ತಂದೆಯನ್ನು ಹುಡುಕುವಲ್ಲಿ ಯಶಸ್ಸು ಕಂಡಿದ್ದಾನೆ.
ನಂತರ ಸಹೋದರಿಯನ್ನು ಮನೆಗೆ ಕರೆದುಕೊಂಡು ಹೋಗಲು ಅನುಮತಿ ಕೋರಿ ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮನವಿ ಸಲ್ಲಿಸಿದ್ದಾನೆ. ಇದಕ್ಕೆ ಸ್ಪಂದಿಸಿದ ಇಲಾಖೆ ಅಧಿಕಾರಿಗಳು, ಸಹೋದರ ನಿಂದ ಮುಚ್ಚಳಿಕೆ ಬರೆಯಿಸಿಕೊಂಡು ಹಂಸಾಳನ್ನು ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.
‘ಸವದತ್ತಿಯ ಬಾಲ ಮಂದಿರ ದಲ್ಲಿದ್ದ ಹಂಸಾಳನ್ನು ಮನೆಗೆ ಕಳುಹಿಸುವಂತೆ ಸಹೋದರ ಸುನೀಲ್ ಮೇಲಿಂದ ಮೇಲೆ ಬಂದು ಸತಾಯಿ ಸುತ್ತಿದ್ದ. ಆಗ ಮಕ್ಕಳ ಕಲ್ಯಾಣ ಸಮಿತಿ ಪಾಲಕರನ್ನು ಕರೆದುಕೊಂಡು ಬರು ವಂತೆ ಸೂಚಿಸಿತ್ತು. ಸಹೋದರ ನಿಂದ ಮುಚ್ಚಳಿಕೆ ಬರೆಯಿಸಿಕೊಂಡು ಹಂಸಾಳನ್ನು ಬಿಡುಗಡೆ ಮಾಡ ಲಾಯಿತು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಂ.ಮುನಿರಾಜು ‘ಪ್ರಜಾವಾಣಿ’ಗೆ ತಿಳಿಸಿದರು.