ಕರ್ನಾಟಕ

ಉಗ್ರರ ವಿಧ್ವಂಸಕ ಕೃತ್ಯ ಸಹಿಸಲಾಗದು: ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲ ಎಚ್ಚರಿಕೆ

Pinterest LinkedIn Tumblr

va

ಬೆಂಗಳೂರು: ಉಗ್ರರ ವಿಧ್ವಂಸಕ ಕೃತ್ಯಗಳು ರಾಜ್ಯದಲ್ಲಿ ಆತಂಕ ಮೂಡಿಸಿದ್ದು, ಇದನ್ನು ಸಹಿಸಲಾಗದು. ಉಗ್ರರನ್ನು ಸದೆಬಡಿದು ಶಾಂತಿ ಸ್ಥಾಪನೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯಪಾಲ ವಜುಭಾಯಿ ವಾಲ ಅವರು ಕುಕೃತ್ಯ ಎಸಗುವವರಿಗೆ ಎಚ್ಚರಿಕೆ ನೀಡಿದರು.

ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸೋಮವಾರ 66ನೇ ಗಣರಾಜ್ಯೊತ್ಸವದ ಧ್ವಜಾರೋಹಣ ನೆರವೇರಿಸಿದ ಅವರು, ಭದ್ರತಾ ಪಡೆಯ ಭೂ ಸೇನೆ, ವಾಯು ಪಡೆ, ಪೊಲೀಸ್ ಇಲಾಖೆ, ಎನ್ ಸಿಸಿ, ಸೇವಾದಳ, ಸ್ಕೌಟ್ ಮತ್ತು ಗೈಡ್ ಹಾಗೂ ವಿವಿಧ ಶಾಲಾ ಮಕ್ಕಳ ತಂಡಗಳ ಪಥ ಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿ, ನಾಡಿನ ಜನರಿಗೆ ಶುಭಾಶಯ ಕೋರಿ ಮಾತನಾಡಿದರು.

ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಈಚೆಗೆ ಉಗ್ರರು ಬಾಂಬ್ ಸ್ಫೋಟಿಸಿ ಒಬ್ಬ ಮಹಿಳೆಯನ್ನು ಬಲಿ ಪಡೆದ ಕುಕೃತ್ಯವನ್ನು ಹತ್ತಿಕ್ಕುವ ಕಠಿಣ ಸಂದೇಶವನ್ನು ರಾಜ್ಯಪಾಲರು ರವಾನಿಸಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಭಾರತೀಯರು ಮಂಗಳ ಗ್ರಹದ ಅಂಗಳ ತಲುಪಿದ್ದೇವೆ. ಇದು ನಮ್ಮೆಲ್ಲರ ಹೆಮ್ಮೆ. ಬೆಂಗಳೂರಿನಲ್ಲಿ ಇಸ್ರೋ, ಎಚ್ ಎಎಲ್, ಬಿಇಎಲ್ ಇತ್ಯಾದಿ ಸಂಸ್ಥೆಗಳು ವಿಶ್ವವಿಖ್ಯಾತಿ ಗಳಿಸುವುದರ ಜತೆಗೆ, ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಪ್ರಥಮ ಪ್ರಯತ್ನದಲ್ಲೇ ಮಂಗಳ ಯೋಜನೆಯನ್ನು ಸಫಲಗೊಳಿಸಿ ವಿಶ್ವದಲ್ಲೇ ಭಾರತಕ್ಕೆ ಮಹತ್ವದ ಸ್ಥಾನ ತಂದುಕೊಟ್ಟಿದೆ ಎಂದು ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು.

ದೇಶದ ಬೆಳವಣಿಗೆಗಾಗಿ ಕರ್ನಾಟಕದ ಬೆಳವಣಿಗೆ ಎಂಬ ಮಂತ್ರವನ್ನು ಸಾರ್ಥಕಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದ ಅವರು, ಯುವ ಜನರಲ್ಲಿ ಸಂಸ್ಕೃತಿ, ರಾಷ್ಟ್ರ ಪ್ರಜ್ಞೆಯ ಸಂಸ್ಕಾರ ನೀಡುವ ಮೂಲಕ ರಾಷ್ಟ್ರ ಮತ್ತೊಮ್ಮೆ ‘ಚಿನ್ನದ ಹಕ್ಕಿ’ಯಾಗಿ ವಿಶ್ವದ ಗಮನ ಸೆಳೆಯುವಂತಾಗಲಿ ಎಂದು ಆಶಿಸಿದರು.

‘ಒಬ್ಬ ಮನುಷ್ಯನಿಗೆ ಅನ್ನ ನೀಡಿ ಒಂದು ದಿನದ ಮಟ್ಟಿಗೆ ಅವನ ಹೊಟ್ಟೆ ತುಂಬಿಸಬಹುದು, ಬದಲಿಗೆ ಅವನಿಗೆ ಅನ್ನ ಗಳಿಸುವುದನ್ನು ಕಲಿಸುವುದು ಲೇಸು’ ಎಂಬ ಸ್ವಾಮಿ ವಿವೇಕಾನಂದ ಅವರ ವಾಣಿಯನ್ನು ಉಲ್ಲೇಖಿಸಿ, ನಾಡಿನ ಹೊರಾಟಗಾರರನ್ನು ಸ್ಮರಿಸಿದ ವಜುಬಾಯಿ ವಾಲ ಅವರು, ಬಡತನ ನಿವಾರಣೆ, ಸಮಾನತೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ಸಾಕಾರಗೊಳಿಸಲು 1950ರ ಜನವರಿ 26ರಂದು ರಾಷ್ಟ್ರ ಅಳವಡಿಸಿಕೊಂಡಿರುವ ಸಂವಿಧಾನದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದು ಪರೇಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

Write A Comment