ಹೊಸಪೇಟೆ (ಬಳ್ಳಾರಿ ಜಿಲ್ಲೆ): ಬೇಲೆಕೇರಿ ಅಕ್ರಮ ಅದಿರು ನಾಪತ್ತೆ ಪ್ರಕರಣದಲ್ಲಿ ಬಂಧಿತರಾಗಿದ್ದ ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ಸಿಂಗ್ ಬಿಡುಗಡೆಯಾಗಿದ್ದರಿಂದ ನಾಲಿಗೆ ಕೊಯ್ದುಕೊಂಡು ಹರಕೆ ತೀರಿಸಲು ಮುಂದಾಗಿದ್ದ ಅಭಿಮಾನಿಯನ್ನು ಅವರ ಮನೆಯವರು ತಡೆದ ಘಟನೆ ನಗರದ ಹೊರ ವಲಯದ ಕಾರಿಗನೂರು ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.
ಆನಂದ್‌ಸಿಂಗ್ ಬಿಡುಗಡೆಯಾದರೆ ನಾಲಿಗೆ ಕೊಯ್ದು ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿಗೆ ನೈವೇದ್ಯ ನೀಡುವುದಾಗಿ ಮುರುಳೀಧರ್ ಎಂಬುವವರು ಹರಕೆ ಹೊತ್ತಿದ್ದರು. ಅದರಂತೆ ಕೊಪ್ಪಳ ಜಿಲ್ಲೆಯ ಹುಲಿಗಿಗೆ ಶನಿವಾರ ಹೊರಟ್ಟಿದ್ದರು.
ಆದರೆ, ಅವರ ಅತಿರೇಕಕ್ಕೆ ಕಡಿವಾಣ ಹಾಕಿದ ಮನೆಯವರು ಮನೆಯಲ್ಲಿಯೇ ಉಳಿಸಿಕೊಂಡಿದ್ದಾರೆ. ಆದರೆ, ರಾತ್ರಿ ಮನೆಯ ಪಕ್ಕದಲ್ಲಿದ್ದ ದೇವಸ್ಥಾನಕ್ಕೆ ತೆರಳಿ ನಾಲಿಗೆಯನ್ನು ಚಾಕುವಿನಿಂದ ಕೊಯ್ದುಕೊಳ್ಳಲು ಮುಂದಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಪತ್ನಿ ಶಾರದಾ ಸೇರಿದಂತೆ ಇತರರು ಚಾಕುವನ್ನು ಕಿತ್ತುಕೊಂಡಿದ್ದಾರೆ. ನಾಲಿಗೆಯನ್ನು ಕೊಯ್ದುಕೊಳ್ಳಲು ಯತ್ನಿಸಿದ್ದರಿಂದ ಗಾಯವಾಗಿ ಬಾಯಿ ರಕ್ತಸಿಕ್ತವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
‘ಮುರಳೀಧರ್ ಆರೋಗ್ಯ ಸ್ಥಿರವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ನಾಲಿಗೆಗೆ ಚಿಕಿತ್ಸೆಯೊಂದಿಗೆ ಅವರಿಗೆ ಮನೋವೈದ್ಯರಿಂದ ಸಮಾಲೋಚನೆ ನಡೆಸುವ ಅಗತ್ಯವಿದೆ’ ಎಂದು ಶಾಸಕ ಆನಂದ್ ಸಿಂಗ್‌ಪ್ರತಿಕ್ರಿಯಿಸಿದ್ದಾರೆ.
‘ಒಬ್ಬ ನಾಯಕನ ಮೇಲೆ ಅಭಿಮಾನ ಇರಬೇಕು. ಆದರೆ ಅಂಧಾಭಿಮಾನ ಇರಬಾರದು. ಇಂಥ ಅತಿರೇಕಕ್ಕೆ ಯಾರೂ ಮುಂದಾಗಬಾರದು’ ಎಂದು ಅವರು ಮನವಿ ಮಾಡಿದರು.