ಕಾರವಾರ: ಕರ್ನಾಟಕ–ಗೋವಾ ಗಡಿ ಭಾಗವಾದ ತಾಲ್ಲೂಕಿನ ಮಾಜಾಳಿಯಲ್ಲಿ ಬುಧವಾರ ‘ಮಾರ್ಕೆಪೂನವ್’ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಹರಕೆಯ ನಿಮಿತ್ತ ಗಂಡು ಮಕ್ಕಳಿಗೆ ಹೊಟ್ಟೆಯ ಭಾಗಕ್ಕೆ ಸೂಜಿ ಚುಚ್ಚಿ ದಾರ ಪೋಣಿಸುವ ಸಂಪ್ರದಾಯ ಈ ಜಾತ್ರೆಯಲ್ಲಿ ನಡೆಯಿತು.
ಪ್ರೌಢಾವಸ್ಥೆಯ ಪೂರ್ವದಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ದಾರ ಪೋಣಿಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಈ ಸಂಪ್ರದಾಯ ಹಿಂದಿನಿಂದಲೂ ರೂಢಿಯಲ್ಲಿದ್ದು, ಬುಧವಾರ ‘ದಾಡ್’ ದೇವಸ್ಥಾನದಲ್ಲಿ 30ಕ್ಕೂ ಹೆಚ್ಚು ಗಂಡು ಮಕ್ಕಳು ಅರ್ಚಕರಿಂದ ದಾರ ಪೋಣಿಸಿಕೊಂಡು ಹರಕೆ ಅರ್ಪಿಸಿದರು. ಸೂಜಿ ದಾರವನ್ನು ಮಕ್ಕಳ ಪಾಲಕರೇ ತಂದಿದ್ದರು. ಸೂಜಿ ಚುಚ್ಚುವ ವೇಳೆಯಲ್ಲಿ ಮಕ್ಕಳು ನೋವಿನಿಂದ ಚೀರುತ್ತಿದ್ದರು.
ಪ್ರತಿ ವರ್ಷ ಶುದ್ಧ ಪೂರ್ಣಿಮೆಯಂದು ಈ ಜಾತ್ರೆ ಜರುಗುತ್ತದೆ. ಹುಣ್ಣಿಮೆಗೆ ಕೊಂಕಣಿಯಲ್ಲಿ ‘ಪೂನವ್’ ಎನ್ನುತ್ತಾರೆ. ಹೀಗಾಗಿ ಈ ಜಾತ್ರೆಯನ್ನು ‘ಮಾರ್ಕೆಪೂನವ್’ ಎಂದು ಕರೆಯುತ್ತಾರೆ. ಶ್ರೀರಾಮನಾಥ ಕ್ಷೇತ್ರದ ಪರಿವಾರ ದೇವರ ಜಾತ್ರೆ ಇದಾಗಿದೆ.
ಇದೇ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಕುಲದೇವರಿಗೆ ದೀವಜ್ (ದೀಪ) ನೀಡಿ ಹರಕೆ ಅರ್ಪಿಸಿದರು. ಈ ಗ್ರಾಮದ ಹುಡುಗಿ ಅಥವಾ ಸೊಸೆಯಾಗಿ ಗ್ರಾಮಕ್ಕೆ ಕಾಲಿರಿಸಿದವಳು ತಲೆ ಮೇಲೆ ದೀಪವನ್ನಿರಿಸಿಕೊಂಡು ‘ದಾಡ್’ ದೇವಸ್ಥಾನದಿಂದ ‘ಮಾರಿಕಾ ದೇವಿ’ (ದೇವತಿ) ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲಿ ಬಂದು ಅಲ್ಲಿನ ದೇವತೆಗೆ ತಾವು ಹೊತ್ತು ತಂದ ದೀಪ ತೋರಿಸಿ ಭಕ್ತಿ ಪ್ರದರ್ಶಿಸಿದರು.
‘ಮಾರಿಕಾ ದೇವಿಗೆ ದೀಪದಿಂದ ಆರತಿ ಬೆಳಗುವುದರಿಂದ ಆಕೆ ಕುಲದೇವರ ಪ್ರೀತಿಗೆ ಪಾತ್ರಳಾಗುತ್ತಾಳೆ ಎನ್ನುವುದು ನಂಬಿಕೆ ಹಾಗೂ ದಾಡ್ ದೇವಸ್ಥಾನದಲ್ಲಿ ಗಂಡು ಮಕ್ಕಳು ಪೋಣಿಸಿಕೊಂಡ ದಾರವನ್ನು ಮಾರಿಕಾ ದೇವಿಯ ದೇವಸ್ಥಾನದಲ್ಲಿ ತೆಗೆಯಲಾಗುತ್ತದೆ. ಈ ಹರಕೆ ಅರ್ಪಿಸುವುದರಿಂದ ಗಂಡು ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ’ ಎನ್ನುತ್ತಾರೆ ಗ್ರಾಮದ ಯಶೋದಾ ಸಾವಂತ್.
ಕಾಕಡ (ಅಬ್ಬಲಿ) ಹೂವಿನಿಂದ ಅಲಂಕೃತಗೊಂಡ ಬಂಡಿಯನ್ನು ಎಳೆಯುವುದು ಈ ಜಾತ್ರೆಯ ವಿಶೇಷ. ಬಂಡಿ ಎಂದು ಕರೆಯುವ ತೇರನ್ನು ಭಕ್ತರು ದಾಡ್ ದೇವಸ್ಥಾನದಿಂದ ದೇವತಿ ದೇವಸ್ಥಾನದವರೆಗೆ ಎಳೆದರು. ಈ ಜಾತ್ರೆಗೆ ಗೋವಾ ಹಾಗೂ ಮಹಾರಾಷ್ಟ್ರದಿಂದಲೂ ಸಾವಿರಾರು ಭಕ್ತರು ಬಂದು ಪೂಜೆ ಸಲ್ಲಿಸಿದರು.