ಬೆಂಗಳೂರು: ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ‘ತಮ್ಮ ಮೇಲಿನ ಪ್ರಕರಣವನ್ನು ರದ್ದುಪಡಿಸಬೇಕು’ ಎಂದು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಭೈರಾರೆಡ್ಡಿ ಮತ್ತು ನ್ಯಾಯಮೂರ್ತಿ ಎನ್. ಆನಂದ್ ಅವರಿದ್ದ ವಿಭಾಗೀಯ ಪೀಠ, ‘ಪ್ರಕರಣದ ರದ್ದತಿ ಕೋರಿ ಏಕಸದಸ್ಯ ಪೀಠದಲ್ಲಿ ಸೆಕ್ಷನ್ ೪೮೨ರಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡ ನಿಟ್ಟಿನಲ್ಲಿ ಸಂವಿಧಾನದ ೨೨೬/೨೨೭ನೇ ಪರಿಚ್ಛೇದದ ಅಡಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಆದರೆ, ೧೯೬೧ರ ಕರ್ನಾಟಕ ಹೈಕೋರ್ಟ್ ನಿಯಮಗಳ ಪ್ರಕಾರ ಕ್ರಿಮಿನಲ್ ಪ್ರಕರಣಗಳಲ್ಲಿ ಒಂದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಹಾಗಾಗಿ ಅರ್ಜಿಯನ್ನು ವಜಾಗೊಳಿಸಿದ ಏಕಸದಸ್ಯ ಪೀಠದ ಆದೇಶ ಸರಿಯಿದೆ. ಆದ್ದರಿಂದ ಈ ಮೇಲ್ಮನವಿ ಪರಿಗಣನೆಗೆ ಯೋಗ್ಯವಾಗಿಲ್ಲ’ ಎಂದು ವಿವರಣೆ ನೀಡಿದೆ.
ಸ್ವಾಮೀಜಿ ಪರ ವಾದ ಮಂಡಿಸಿದ ವಕೀಲ ಬಿ.ವಿ.ಆಚಾರ್ಯ ಅವರು, ‘ಇದು ಕೇವಲ ಮಠ ಮತ್ತು ಸ್ವಾಮೀಜಿಯ ಘನತೆಗೆ ಧಕ್ಕೆ ತರುವ ಸಲುವಾಗಿ ದಾಖಲಿಸಿರುವ ಎಫ್‌ಐಆರ್’ ಎಂದು ಪುನರುಚ್ಚರಿಸಿದರು.
ಆದರೆ, ‘ತನಿಖೆ ನಡೆಸುವ ಸಂದರ್ಭದಲ್ಲಿ ತನಿಖಾಧಿಕಾರಿಗಳಿಗೆ ಈ ಪ್ರಕರಣ ದುರುದ್ದೇಶಪೂರಿತ, ವ್ಯಕ್ತಿಯ ಘನತೆಗೆ ಧಕ್ಕೆ ತರುವ ಉದ್ದೇಶವಿದೆ ಎಂದು ತಿಳಿದು ಬಂದರೆ ಅಂಥವರಿಗೆ ಶಿಕ್ಷೆ ವಿಧಿಸಬೇಕು ಎಂದು ಏಕ ಸದಸ್ಯಪೀಠ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಪ್ರಕರಣ ತನಿಖಾ ಹಂತದಲ್ಲಿರುವಾಗ ಅಂತಹ ತೀರ್ಮಾನಕ್ಕೆ ಬರಲಾಗದು. ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ಪ್ರಶ್ನಿಸಲು ಕಾನೂನಿನಲ್ಲಿ ಅವಕಾಶವಿದೆ’ ಎಂದು ಪೀಠ ಹೇಳಿದೆ.
ದಂಡಕ್ಕೆ ಯೋಗ್ಯ ಪ್ರಕರಣ
‘ಹೊಸ ಪ್ರಕರಣಗಳು ದಾಖಲಾಗುತ್ತಿದ್ದಂತೆ ಪ್ರಕರಣಗಳನ್ನು ರದ್ದುಪಡಿಸಬೇಕು ಎಂಬ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ವಿಚಾರಣಾ ವ್ಯಾಪ್ತಿಗೆ ಸಂಬಂಧಿಸಿದಂತೆ ಕೋರ್ಟ್‌ಗೆ ಸಂದಿಗ್ಧತೆ ಉಂಟಾಗುತ್ತದೆ. ವಿಚಾರಣೆಗೆ ಈ ಪ್ರಕರಣ ಸೂಕ್ತ ಹೇಗೆ ಎಂದು ಬಲವಾದ ಅಂಶಗಳನ್ನು ನೀಡುವುದಕ್ಕೆ ಕೋರ್ಟಿನ ಕಾಲಹರಣವಾಗುತ್ತಿದೆ. ಇದರಿಂದಾಗಿ ಮಿಕ್ಕ ಅನೇಕ ಪ್ರಕರಣಗಳ ತನಿಖೆ ತಡವಾಗಿ ಜನರಿಗೆ ತೊಂದರೆಯಾಗುತ್ತಿದೆ. ಇದು ಅಂಥದ್ದೇ ಪ್ರಕರಣ.
ಈ ಪ್ರಕರಣದ ವಿಚಾರಣೆಯಿಂದ ನ್ಯಾಯಾಲಯದ ಸಾಕಷ್ಟು ಸಮಯ ವ್ಯರ್ಥವಾಗಿದೆ. ಆದ್ದರಿಂದ ಇದು ದುಬಾರಿ ದಂಡ ವಿಧಿಸಲು ಯೋಗ್ಯ ಪ್ರಕರಣ. ಆದರೆ, ಅರ್ಜಿದಾರರು ಸ್ವಾಮೀಜಿಯಾಗಿದ್ದು, ಅವರಿಗೆ ತಮ್ಮದೇ ಆದ ಸ್ವಂತ ಆಸ್ತಿಯಿರುವುದಿಲ್ಲ ಎಂಬುದು ನಮ್ಮ ನಂಬಿಕೆ. ಹಾಗಿರುವಾಗ ದಂಡ ಹಾಕಿದರೆ ಧಾರ್ಮಿಕ ಕೈಂಕರ್ಯಕ್ಕೆ ಮೀಸಲಿಟ್ಟ ಹಣ ವ್ಯಯವಾಗುತ್ತದೆ. ಆದ್ದರಿಂದ ದಂಡ ವಿಧಿಸುತ್ತಿಲ್ಲ’ ಎಂದು ಪೀಠ ತಿಳಿಸಿದೆ.