ಬೆಂಗಳೂರು: ಕನಿಷ್ಠ ವೇತನ, ಕೆಲಸದ ಭದ್ರತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಸೇವೆ ಸ್ಥಗಿತಗೊಳಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರ 8ನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದಾಗಿ ಗಣನೀಯ ಸಂಖ್ಯೆಯಲ್ಲಿ ಅಂಗನವಾಡಿಗಳು ಬಂದ್ ಆಗಿವೆ.
ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು), ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಒಕ್ಕೂಟ (ಎಐಟಿಯುಸಿ) ಸೇರಿದಂತೆ ವಿವಿಧ ಸಂಘಟನೆಗಳು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ನಡೆಸುತ್ತಿವೆ.
‘ಅಂಗನವಾಡಿ ಕಾರ್ಯಕರ್ತೆಯರಿಗೆ ₹ 15 ಸಾವಿರ ಹಾಗೂ ಸಹಾಯಕಿಯರಿಗೆ ₹ 10 ಸಾವಿರ ಕನಿಷ್ಠ ವೇತನ ನೀಡಬೇಕು, ಈಗಿರುವ ಗೌರವಧನವನ್ನು ಸೇವಾಜೇಷ್ಠತೆ ಆಧಾರದಲ್ಲಿ ಪ್ರತಿ ಹಂತದಲ್ಲೂ ₹ 500 ಹೆಚ್ಚಿಸಬೇಕು, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್) ಖಾಸಗೀಕರಣ ಮಾಡದೆ, ಪ್ರತ್ಯೇಕ ಇಲಾಖೆಯನ್ನಾಗಿ ಉಳಿಸಬೇಕು. ಈ ಬೇಡಿಕೆಗಳಿಗೆ ಸರ್ಕಾರ ಲಿಖಿತ ಭರವಸೆ ಕೊಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
‘ರಾಜ್ಯದಲ್ಲಿ ಒಟ್ಟು 62 ಸಾವಿರ ಅಂಗನವಾಡಿಗಳಿದ್ದು, 1.25 ಲಕ್ಷ ನೌಕರರಿದ್ದಾರೆ. ಸೇವೆ ಸ್ಥಗಿತಗೊಳಿಸಿ ಹೋರಾಟ ಮಾಡುವ ಬಗ್ಗೆ ಪೋಷಕರಿಗೆ ಮೊದಲೇ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ಶೇ ೫೦ರಷ್ಟು ಅಂಗನವಾಡಿಗಳು ಬಂದ್ ಆಗಿವೆ. ಇದರಿಂದ ಕೆಲಸಕ್ಕೆ ಹೋಗುವ ಪೋಷಕರಿಗೆ ಮಕ್ಕಳ ಆರೈಕೆ ಕಷ್ಟವಾಗುತ್ತಿದೆ’ ಎಂದರು. ‘ನಿತ್ಯ 8–10 ತಾಸು ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರಿಗೆ ಜನಗಣತಿ, ಚುನಾವಣೆ ಸಮೀಕ್ಷೆ, ಶೌಚಾಲಯಗಳ ಸಮೀಕ್ಷೆ, ಪಲ್ಸ್ ಪೋಲಿಯೊ ಸೇರಿದಂತೆ ಇನ್ನಿತರೆ ಹೆಚ್ಚುವರಿ ಕೆಲಸಗಳನ್ನು ವಹಿಸಲಾಗುತ್ತಿದೆ.
ಅಧಿಕಾರಿಗಳು ನೀಡುವ ಕಿರುಕುಳಗಳನ್ನು ಸಹಿಸಿಕೊಂಡು 25–30 ವರ್ಷಗಳಿಂದ ದುಡಿಯುತ್ತಿದ್ದರೂ, ಕಾರ್ಯಕರ್ತೆಯರಿಗೆ ಕೇವಲ ₹ 5,500 ಹಾಗೂ ಸಹಾಯಕರಿಗೆ ₹ 2,750 ವೇತನ ನೀಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಪ್ರಸ್ತುತ ಸಂದರ್ಭದಲ್ಲಿ ಈ ವೇತನದಿಂದ ಜೀವನ ನಡೆಸುವುದು ಹೇಗೆ’ ಎಂದು ಅಂಗನವಾಡಿ ನೌಕರರ ಹಿತರಕ್ಷಣಾ ಸಮಿತಿ ಅಧ್ಯಕ್ಷೆ ಪದ್ಮಾ ಪ್ರಶ್ನಿಸಿದರು.
ಲಿಖಿತ ಭರವಸೆಗೆ ಒಪ್ಪುತ್ತಿಲ್ಲ
‘ಪತಿ–ಮಕ್ಕಳನ್ನು ಬಿಟ್ಟು ಬಂದು ಎಂಟು ದಿನಗಳಿಂದ ಮುಷ್ಕರದಲ್ಲಿ ಕುಳಿತಿದ್ದೇವೆ. ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ. ಹೋರಾಟದ 2ನೇ ದಿನ ಸ್ಥಳಕ್ಕೆ ಬಂದಿದ್ದ ಸಚಿವೆ ಉಮಾಶ್ರೀ, ಬೇಡಿಕೆ ಈಡೇರಿಸುವುದಾಗಿ ಮೌಖಿಕ ಭರವಸೆ ನೀಡಿದ್ದರು. ಆದರೆ, ಲಿಖಿತ ಭರವಸೆಗೆ ಅವರು ಒಪ್ಪಲಿಲ್ಲ’
– ಶಾಂತಮ್ಮ, ಅಂಗನವಾಡಿ ಸಹಾಯಕಿ, ಮಾಗಡಿ
ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ
‘ಅಧಿಕಾರಿಗಳು ಕೆಲಸದಿಂದ ವಜಾಗೊಳಿಸುತ್ತಾರೆ ಎಂಬ ಭಯದಿಂದ ಕೆಲ ಕಾರ್ಯಕರ್ತೆಯರು ಮುಷ್ಕರದಲ್ಲಿ ಪಾಲ್ಗೊಂಡಿಲ್ಲ. ಸಹಾಯಕಿಯರಿಂದ ಬಲವಂತವಾಗಿ ಕೀ ಕಸಿದುಕೊಂಡು, ಸ್ತ್ರೀಶಕ್ತಿ ಸಂಘಗಳ ಮೂಲಕ ಅಂಗನವಾಡಿ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಪ್ರಕ್ರಿಯೆ ನಡೆದರೆ ವಿಷ ಕುಡಿದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’
– ನಂಜಾಮಣಿ, ಕಾರ್ಯಕರ್ತೆ