ಬೆಂಗಳೂರು: ಹೀಟರ್‌ನಿಂದ ನೀರು ಕಾಯಿಸುತ್ತಿದ್ದ ವೇಳೆ ಬಕೆಟ್‌ಗೆ ಹೊತ್ತಿಕೊಂಡ ಬೆಂಕಿಯು ಇಡೀ ಮನೆಯನ್ನು ವ್ಯಾಪಿಸಿ ಇಬ್ಬರು ಮಕ್ಕಳು ಸಜೀವ ದಹನವಾಗಿರುವ ಧಾರುಣ ಘಟನೆ ಆಡುಗೋಡಿ ಸಮೀಪದ ಲಕ್ಷ್ಮಣರಾವ್ನಗರ 36ನೇ ಅಡ್ಡರಸ್ತೆಯಲ್ಲಿ ಸೋಮವಾರ ನಡೆದಿದೆ.
ತಮಿಳುನಾಡು ಮೂಲದ ಮಂಜುನಾಥ್–ಸತ್ಯ ದಂಪತಿಯ ಮಕ್ಕಳಾದ ನವೀನ್ (6) ಹಾಗೂ ಕನಿಷ್ಕಾ ರಾಣಿ (3) ಮೃತಪಟ್ಟವರು.
ಇಡಬ್ಲ್ಯೂಎಸ್ (ಆರ್ಥಿಕವಾಗಿ ಹಿಂದುಳಿದ ವರ್ಗದವರು) ವಸತಿ ಸಮುಚ್ಚಯದ 3ನೇ ಮಹಡಿಯಲ್ಲಿ ಈ ಕುಟುಂಬ ನೆಲೆಸಿತ್ತು. ಸಂಜೆ 5.30ರ ಸುಮಾರಿಗೆ ಮಕ್ಕಳು ಮಂಚದ ಮೇಲೆ ಮಲಗಿದ್ದರು. ಮಕ್ಕಳಿಗೆ ಸ್ನಾನ ಮಾಡಿಸಲು ಬಕೆಟ್‌ನಲ್ಲಿ ನೀರು ತುಂಬಿ ಹೀಟರ್ ಹಾಕಿದ್ದ ಸತ್ಯ, ಅದನ್ನು ಆ ಮಂಚದ ಕೆಳಗೇ ಇಟ್ಟು ನೀರು ತರಲು ನೆಲ ಅಂತಸ್ತಿಗೆ ಬಂದಿದ್ದರು.
ಈ ವೇಳೆ ನೆರೆಮನೆಯ ಮಹಿಳೆಯರ ಜತೆ ಮಾತನಾಡುತ್ತಾ ನಿಂತ ಸತ್ಯ, ಹೀಟರ್ ಹಾಕಿರುವುದನ್ನು ಮರೆತಿದ್ದರು. ಅರ್ಧ ತಾಸಿನ ನಂತರ ಅವರ ಮನೆಯಿಂದ ದಟ್ಟ ಹೊಗೆ ಹೊರಬರಲಾರಂಭಿಸಿತು. ಅದನ್ನು ಕಂಡ ಸತ್ಯ, ಚೀರಿಕೊಂಡು ಮನೆಯತ್ತ ಓಡಿದರು. ಈ ವೇಳೆಗಾಗಲೇ ಬೆಂಕಿ ಇಡೀ ಮನೆಯನ್ನು ವ್ಯಾಪಿಸಿತ್ತು.
ಕೂಡಲೇ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಸ್ಥಳೀಯರು, ಮನೆ ಒಳಗೆ ಹೋಗದಂತೆ ಸತ್ಯ ಅವರನ್ನು ತಡೆದರು. ಒಂದು ವಾಹನದಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, 20 ನಿಮಿಷಗಳಲ್ಲಿ ಇಡೀ ಬೆಂಕಿಯನ್ನು ನಂದಿಸಿದರು. ಆದರೆ, ಮಕ್ಕಳಿಬ್ಬರು ಮಲಗಿದ್ದ ಸ್ಥಳದಲ್ಲೇ ಸುಟ್ಟು ಹೋಗಿದ್ದರು.
‘ಹೆಚ್ಚು ಕಾಲ ನೀರು ಕಾದಿದ್ದರಿಂದ ಬಕೆಟ್ ಜಿನುಗಿ ಬೆಂಕಿ ಹೊತ್ತಿಕೊಂಡಿದೆ. ಬೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಅವರು ಸಲ್ಲಿಸುವ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಸದ್ಯ ಆಡುಗೋಡಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
ಎರಡು ವರ್ಷಗಳ ಹಿಂದೆ ಈ ವಸತಿ ಸಮುಚ್ಚಯ ನಿರ್ಮಾಣವಾಗಿದೆ. ಸರಕು ಸಾಗಣೆ ವಾಹನ ಚಾಲಕರಾದ ಮಂಜುನಾಥ್, ಘಟನೆ ವೇಳೆ ಕೆಲಸಕ್ಕೆ ಹೋಗಿದ್ದರು. ಮೃತ ನವೀನ್, ಸಮೀಪದ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದ.