ಬಾದಾಮಿ (ಬಾಗಲಕೋಟೆ ಜಿಲ್ಲೆ): ಬಾಗಲಕೋಟೆ ಜಿಲ್ಲೆಯ ಬಾದಾಮಿ ಸಮೀಪದ ಶಿವಯೋಗ ಮಂದಿರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಲಿಂಗೈಕ್ಯ ಹಾನಗಲ್ ಕುಮಾರ ಶಿವಯೋಗಿಗಳ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ನಾನಾ ಬಗೆಯ ಪುಷ್ಪಮಾಲೆಗಳಿಂದ ಶೃಂಗರಿಸಲಾಗಿದ್ದ ರಥದಲ್ಲಿ ಲಿಂ.ಕುಮಾರ ಶಿವಯೋಗಿಗಳ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಡಾ. ಸಂಗನಬಸವ ಶ್ರೀಗಳು ಮತ್ತು ಕೋಡಿ ಮಠದ ಶಿವಾನಂದ ಶ್ರೀಗಳು ಪೂಜೆ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಭಕ್ತರು ಕುಮಾರ ಶಿವಯೋಗಿಗಳಿಗೆ ಜಯಘೋಷ ಹಾಕುತ್ತ ರಥವನ್ನು ಭಕ್ತಿ ಭಾವದಿಂದ ಎಳೆದರು. ರಥಕ್ಕೆ ಪುಷ್ಪ ಮತ್ತು ಉತ್ತತ್ತಿ ಎಸೆದು ಭಕ್ತಿ ಸಲ್ಲಿಸಿದರು. ನಂತರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಶಿವಯೋಗ ಮಂದಿರದಲ್ಲಿ ಅಧ್ಯಯನ ನಡೆಸಿದ ವಿವಿಧ ಮಠಾಧೀಶರು, ಹರಗುರು ಚರಮೂರ್ತಿಗಳು ಮತ್ತು ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ಕುರುವತ್ತಿ ಜಾತ್ರೆ: ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿಯ ಮಹಾರಥೋತ್ಸವ ಲಕ್ಷಾಂತರ ಭಕ್ತರ ಜಯ-ಘೋಷ, ಹರ್ಷೋದ್ಗಾರದ ಮಧ್ಯೆ ಬುಧವಾರ ವಿಜೃಂಭಣೆಯಿಂದ ಜರುಗಿತು.
ಸಿದ್ಧಾರೂಢ ಜಾತ್ರೆ: ಉತ್ತರ ಕರ್ನಾಟಕ ಭಾಗದಲ್ಲಿಯೇ ಪ್ರಸಿದ್ಧವಾದ ಹುಬ್ಬಳ್ಳಿಯ ಸಿದ್ಧಾರೂಢರ ರಥೋತ್ಸವ ಬುಧವಾರ ಸಡಗರ, ಸಂಭ್ರಮದಿಂದ ನಡೆಯಿತು. ಎರಡು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.