ಬೆಂಗಳೂರು, ಫೆ.26: ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಮಂಡಿಸಿದ ಬಜೆಟ್‌ನಿಂದ ರಾಜ್ಯಕ್ಕೆ ಯಾವುದೇ ಲಾಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರೈಲ್ವೆ ಪ್ರಯಾಣ ದರ ಇಳಿಕೆ ಮಾಡದಿರುವ ಕುರಿತು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಿಂದ ರೈಲ್ವೆ ಇಲಾಖೆಗೆ ಸುಮಾರು 16 ಸಾವಿರ ಕೋಟಿ ರೂ.ಗಳಿಂತಲೂ ಹೆಚ್ಚಿನ ಉಳಿತಾಯವಾಗಿದೆ. ಇದರ ಲಾಭವನ್ನು ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ತಲುಪುವಂತೆ ಮಾಡಬೇಕಿತ್ತು.
ಆದರೆ ರೈಲ್ವೆ ಸಚಿವರು ರೈಲ್ವೆ ಇಲಾಖೆ ನಷ್ಟದಲ್ಲಿದೆ ಎಂದು ನೆಪ ಹೇಳಿ ಪ್ರಯಾಣ ದರ ಇಳಿಕೆ ಮಾಡದಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ರಾಜ್ಯದವರೆ ಆದ ಡಿ.ವಿ.ಸದಾನಂದಗೌಡ ಅವರು ಮಂಡಿಸಿದ್ದ ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ 8 ರೈಲುಗಳನ್ನು ಪ್ರಕಟಿಸಿದ್ದರು. ಬೆಂಗಳೂರು-ಮಂಗಳೂರು ಹಗಲು ರೈಲು, ರಾಮನಗರ-ಬೆಂಗಳೂರು ಮೆಮು ರೈಲು, ಧಾರವಾಡ-ದಾಂಡೇಲಿ ಪ್ಯಾಸೆಂಜರ್ ರೈಲು, ಬೆಂಗಳೂರು- ತಿರುವನಂತಪುರ ವಾರಕ್ಕೆ ಎರಡು ಬಾರಿ ವಿಶೇಷ ಪ್ರೀಮಿಯಂ ರೈಲು, ಸೆಂಟ್ರಲ್ ರೈಲ್ವೆಯಿಂದ ಮುಂಬೈ-ಬೀದರ್ (ವಾರದ ಎಕ್ಸ್‌ೞಪ್ರೆಸ್), ಹೈದ್ರಾಬಾದ್-ಕಲಬುರಗಿ ಇಂಟರ್‌ೞಸಿಟಿ ಹಾಗೂ ಸದರ್ನ್ ರೈಲ್ವೆಯಿಂದ ಕಾಸರಗೋಡು-ಕೊಲ್ಲೂರು (ವಯಾ ಮಂಗಳೂರು) ರೈಲುಗಳು ಇನ್ನೂ ಆರಂಭವಾಗಿಲ್ಲ. ಇಂದು ಮಂಡಿಸಲಾದ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಶೇ.50ರಷ್ಟು ಯೋಜನಾ ವೆಚ್ಚ ಭರಿಸುವ ನೀತಿಯನ್ನು ಬದಲಾವಣೆ ಮಾಡುವಂತೆಯೂ ಮನವಿ ಸಲ್ಲಿಸಲಾಗಿತ್ತು. ರಾಜ್ಯ ಸರ್ಕಾರ ಉಚಿತವಾಗಿ ಭೂಮಿ ನೀಡುತ್ತಿದ್ದು ಯೋಜನಾ ವೆಚ್ಚದಲ್ಲೂ ಶೇ.50ರಷ್ಟನ್ನು ಭರಿಸುವುದರಿಂದ ಹೊರೆಯಾಗುತ್ತದೆ ಎಂದು ಈ ಮೊದಲು ತಾವು ದೆಹಲಿಗೆ ತೆರಳಿ ಮನವಿ ಸಲ್ಲಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಯವರು ಈ ಬಗ್ಗೆಯೂ ಕೇಂದ್ರ ಸರ್ಕಾರ ಯಾವುದೇ ನಿಲುವು ವ್ಯಕ್ತ ಪಡಿಸಿಲ್ಲ ಎಂದು ಹೇಳಿದ್ದಾರೆ.
ವೇಗವರ್ಧಕ ಬಜೆಟ್: ಶೆಟ್ಟರ್ ಬಣ್ಣನೆ
ಬೆಂಗಳೂರು: ರೈಲ್ವೆ ಸಚಿವ ಸುರೇಶ್‌ಪ್ರಭು ಮಂಡಿಸಿದ ರೈಲ್ವೆ ಬಜೆಟ್ ಪ್ರಯಾಣಿಕ ಸ್ನೇಹಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಯಾಣಿಕರಿಗೆ ಹೊರೆಯಾಗದ ಸ್ವಚ್ಛತೆ, ಸುರಕ್ಷತೆ ಹಾಗೂ ವೇಗವರ್ಧಕ ಬಜೆಟ್ ಆಗಿದೆ ಎಂದು ಅವರು ಬಣ್ಣಿಸಿದರು. ರಾಷ್ಟ್ರೀಯ ರೈಲ್ವೆ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಪ್ರಸ್ತಾಪವಾಗಿದೆ. ಆನ್‌ಲೈನ್ ಬುಕ್ಕಿಂಗ್, ಸ್ವಚ್ಛತೆಗೆ ಆದ್ಯತೆ, ಎಸ್‌ಎಂಎಸ್ ಸಂದೇಶ ರವಾನೆ, ನಾಲ್ಕು ತಿಂಗಳ ಮುಂಗಡ ಬುಕ್ಕಿಂಗ್ ವ್ಯವಸ್ಥೆ, 247 ರಕ್ಷಣೆಗೆ ಆದ್ಯತೆ, ಮಹಿಳಾ ಸುರಕ್ಷತೆಗೆ ನಿರ್ಭಯ ನಿಧಿ ಸ್ಥಾಪಿಸುವ ಘೋಷಣೆಯೊಂದಿಗೆ ಪ್ರಯಾಣಿಕರ ಸ್ನೇಹಿತ ಬಜೆಟ್ ಮಂಡಿಸಲಾಗಿದೆ ಎಂದು ಶ್ಲಾಘಿಸಿದರು. ಐದು ವರ್ಷದಲ್ಲಿ ರೈಲ್ವೆ ಮಾರ್ಗಗಳ ವಿದ್ಯುದ್ಧೀಕರಣಗೊಳಿಸುವ ಗಡುವು ನಿಗದಿ ಪಡಿಸಿ 9ಸಾವಿರ ಕಿ.ಮೀ. ಉದ್ದದ 77 ಯೋಜನೆಗಳ ರೈಲ್ವೆ ಮಾರ್ಗ ಜೊಡಿ ಮಾರ್ಗವಾಗಿ ಪರಿವರ್ತಿಸಲು ಪ್ರಸ್ತಾಪಿಸಿರುವುದು ಸ್ವಾಗತಾರ್ಹ ಎಂದು ಬಣ್ಣಿಸಿದರು.