ಕರ್ನಾಟಕ

ಓಂಪ್ರಕಾಶ್‌ ರಾಜ್ಯದ ನೂತನ ಡಿಜಿಪಿ

Pinterest LinkedIn Tumblr

pvec01marchDGP07

ಬೆಂಗಳೂರು: ರಾಜ್ಯದ ನೂತನ ಪೊಲೀಸ್‌ ಮಹಾ­ನಿರ್ದೇಶಕರಾಗಿ (ಡಿಜಿ ಮತ್ತು  ಐಜಿಪಿ) ಹಿರಿಯ ಐಪಿಎಸ್‌ ಅಧಿಕಾರಿ ಓಂಪ್ರಕಾಶ್‌ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು. ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ನಿರ್ಗಮಿತ ಪೊಲೀಸ್‌ ಮಹಾನಿರ್ದೇಶಕ ಲಾಲ್‌ ರೋಕುಮ ಪಚಾವೊ ಅವರು ಬೇಟನ್‌ ನೀಡುವ ಮೂಲಕ ಓಂಪ್ರಕಾಶ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ನಂತರ ಮಾತನಾಡಿದ ಓಂಪ್ರಕಾಶ್‌, ‘ರಾಜ್ಯದಲ್ಲಿ 1 ಲಕ್ಷ ಪೊಲೀಸ­­ರಿ­ದ್ದಾರೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿ­ದರೆ ಕರ್ನಾಟಕದಲ್ಲಿ ಉತ್ತಮ ಪೊಲೀಸ್‌ ಪಡೆ ಇದೆ. ಒಬ್ಬರೇ ಇಲಾಖೆ­ಯನ್ನು ಮುನ್ನಡೆಸಲು ಸಾಧ್ಯವಿಲ್ಲ. ಇಲಾಖೆಯನ್ನು ಬಲಪಡಿಸಲು ಸಿಬ್ಬಂದಿ ಸಹಕಾರ ಅಗತ್ಯ’ ಎಂದರು.

ಪೊಲೀಸ್‌ ಕೆಲಸ ತುಂಬಾ ಕಠಿಣವಾದದ್ದು. ಆದರೆ, ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ. ಅಪರಾಧ ನಿಯಂತ್ರಣ, ತನಿಖೆ, ಆರೋಪಿಗಳ ಪತ್ತೆ ಹಾಗೂ ಆರೋಪಪಟ್ಟಿ ಸಲ್ಲಿಕೆ ವಿಷಯದಲ್ಲಿ ಸಿಬ್ಬಂದಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಜತೆಗೆ ಸಾರ್ವಜನಿಕ­ರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.

ಕಾನೂನು ಪಾಲನೆ, ಭಯೋತ್ಪಾ­ದನಾ ಚಟುವಟಿಕೆಗಳ ನಿಗ್ರಹ, ಸಂಚಾರ, ಸಿಬ್ಬಂದಿ ಕಲ್ಯಾಣ, ತನಿಖಾ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಗುಪ್ತಚರ ದಳದ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು. ಆಡಳಿತ ವಿಭಾಗದ ಎಡಿಜಿಪಿ ಅಲೋಕ್‌ ಮೋಹನ್‌, ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು, ಓಂಪ್ರಕಾಶ್‌ ಅವರ ಪತ್ನಿ ಪಲ್ಲವಿ, ಪುತ್ರ ಕಾರ್ತಿಕೇಶ್‌, ಪುತ್ರಿ ಕೃತಿ ಹಾಗೂ ಕುಟುಂಬ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಮಹಾಪಾತ್ರ ಅಸಮಾಧಾನ
ಬೆಂಗಳೂರು: ರಾಜ್ಯದ ನೂತನ ಪೊಲೀಸ್‌ ಮಹಾ­ನಿರ್ದೇಶಕರ ನೇಮ­ಕದ ಬಗ್ಗೆ ಅಸಮಾಧಾನ ಗೊಂಡಿರುವ ಡಿಜಿಪಿ  ಸುಶಾಂತ್‌ ಮಹಾಪಾತ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಮಹಾಪಾತ್ರ ಅವರು, ‘ಸೇವಾ ಜೇಷ್ಠತೆ­­ಯಲ್ಲಿ ನಾನು ಓಂಪ್ರಕಾಶ್‌ ಅವರಿ­ಗಿಂತಲೂ ಹಿರಿಯವನು. ಆದರೆ, ಸೇವಾ ಹಿರಿತನವನ್ನು ಕಡೆಗಣಿಸಿ ಓಂಪ್ರಕಾಶ್‌ ಅವರನ್ನು ಆ ಹುದ್ದೆಗೆ ನೇಮಿ­ಸಲಾಗಿದೆ. ನನಗೆ ಹುದ್ದೆ ಕೈತಪ್ಪಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಅವರೇ ಮುಖ್ಯ ಕಾರಣ’ ಎಂದು ನೇರ ಆರೋಪ ಮಾಡಿದರು.

ಪೊಲೀಸ್‌ ಮಹಾನಿರ್ದೇಶಕರ ಹುದ್ದೆಗೆ ನಿಗದಿಯಾಗಿರುವ 11 ಅರ್ಹತೆಗಳಲ್ಲಿ ದೈಹಿಕ ಸಾಮರ್ಥ್ಯವೂ ಒಂದು. ಆದರೆ, ಓಂಪ್ರಕಾಶ್‌ ಅವರಿಗೆ ತೆರೆದ ಹೃದಯದ ಚಿಕಿತ್ಸೆ ಆಗಿದೆ. ಹೀಗಾಗಿ ಅವರು ಆ ಹುದ್ದೆಗೆ ಅರ್ಹ­ರಲ್ಲ.  ಪೊಲೀಸ್‌ ಮಹಾ ನಿರ್ದೇಶಕರ ಆಯ್ಕೆ ಸಮಿತಿಯಲ್ಲಿದ್ದ ಕೌಶಿಕ್‌ ಮುಖರ್ಜಿ ಅವರು ಈ ಸಂಗತಿಯನ್ನು ಮರೆ­ಮಾಚಿ, ಮುಖ್ಯಮಂತ್ರಿಗಳಿಗೆ ಸುಳ್ಳು ವರದಿ ಕೊಟ್ಟಿದ್ದಾರೆ ಎಂದರು.

‘ಮುಖರ್ಜಿ ಅವರು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿರುವ ವಾರ್ಷಿಕ ಗುಪ್ತ ವರದಿಯಲ್ಲಿ (ಎಸಿಆರ್‌) ಹತ್ತು ಅಂಕ­ಗಳಲ್ಲಿ ನನಗೆ ಏಳು ಅಂಕ ಕೊಟ್ಟಿದ್ದಾರೆ. ಆದರೆ, ಓಂಪ್ರಕಾಶ್ ಅವರಿಗೆ ಎಂಟು ಅಂಕ ಕೊಟ್ಟಿದ್ದಾರೆ. ವರದಿಗೆ ಪೂರಕ­ವಾಗಿ ಕೆಲ ಸುಳ್ಳು ದಾಖಲೆಪತ್ರಗಳನ್ನು ಸೃಷ್ಟಿಸಿ ಕೊಟ್ಟಿ­ದ್ದಾರೆ’ ಎಂದು ಆರೋಪಿ­ಸಿದ್ದಾರೆ.

ಪೊಲೀಸ್‌ ಮಹಾನಿರ್ದೇಶಕರ ಹುದ್ದೆಗೆ ಪೈಪೋಟಿಯಲ್ಲಿದ್ದ ರೂಪಕ್‌­ಕುಮಾರ್‌ ದತ್ತ, ಓಂಪ್ರಕಾಶ್‌ ಹಾಗೂ ಬಿಪಿನ್‌ ಗೋಪಾಲಕೃಷ್ಣ ಅವರು ನನಗೆ ಒಳ್ಳೆಯ ಸ್ನೇಹಿತರು. ಆದರೆ, ಕೌಶಿಕ್‌ ಮುಖರ್ಜಿ ಅವರಿಂದ ನನಗೆ ಅನ್ಯಾಯ­ವಾಗಿದೆ. ಈ ಸಂಬಂಧ ವಕೀಲರ ಹಾಗೂ ಆಪ್ತರ ಸಲಹೆ ಪಡೆದು ಕಾನೂನು ಹೋರಾಟ ನಡೆಸುತ್ತೇನೆ ಎಂದು ತಿಳಿಸಿದರು. 1979ನೇ ಸಾಲಿನ ಐಪಿಎಸ್‌ ಅಧಿಕಾರಿಯಾದ ಮಹಾಪಾತ್ರ ಅವರು ಪೊಲೀಸ್‌ ಗೃಹ ಮಂಡಳಿಯ ಡಿಜಿಪಿ ಆಗಿದ್ದಾರೆ. ಓಂಪ್ರಕಾಶ್‌ ಅವರು 1981ನೇ ಸಾಲಿನ ಐಪಿಎಸ್‌ ಅಧಿಕಾರಿ.

ಪ್ರತಿಕ್ರಿಯಿಸುವುದಿಲ್ಲ
ಮಹಾಪಾತ್ರ ಅವರು ಮುಖ್ಯ­ಮಂತ್ರಿಗಳಿಗೆ ಪತ್ರ ಬರೆದಿರುವ ಸಂಬಂಧ ಪ್ರತಿಕ್ರಿಯೆ ನೀಡುವುದಿಲ್ಲ. ಅಲ್ಲದೇ, ಆ ಬಗ್ಗೆ ಪ್ರತಿಕ್ರಿಯೆ ನೀಡುವ ಅರ್ಹತೆಯೂ ನನಗೆ ಇಲ್ಲ. ರಾಜಕೀಯ ಮುಖಂಡರು ನನ್ನ ಪರ­ವಾಗಿ ಲಾಬಿ ಮಾಡಿಲ್ಲ. ಕೇಂದ್ರದ ಮಾಜಿ ಸಚಿವ ರೊಬ್ಬರ ಪುತ್ರನ ಜತೆ ನನ್ನ ಮಗ ವ್ಯವ ಹಾರದಲ್ಲಿ ಪಾಲು ದಾರನಾಗಿದ್ದಾನೆ ಎಂಬ ಆರೋಪ ಸುಳ್ಳು. ತನಿಖೆ ನಡೆಸಬಹುದು.
–ಓಂಪ್ರಕಾಶ್‌

ಮಗನ ಹೆಸರಿನಲ್ಲಿ ಕಲ್ಲುಗಣಿ: ಡಿಜಿಪಿ ವಿರುದ್ಧ ದೂರು
ಬೆಂಗಳೂರು: ರಾಜ್ಯ ಪೊಲೀಸ್‌ ಮಹಾ­ನಿರ್ದೇಶಕರಾಗಿ ಆಯ್ಕೆಯಾಗಿರುವ ಹಿರಿಯ ಐಪಿಎಸ್‌ ಅಧಿಕಾರಿ ಓಂಪ್ರ­ಕಾಶ್‌ ಅವರು ಮಗನ ಹೆಸರಿನಲ್ಲಿ ಮಾಗಡಿ ತಾಲ್ಲೂಕಿನ ಹಂಚಿಕುಪ್ಪೆ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಸು­ತ್ತಿದ್ದು, ಅಧಿಕಾರ ದುರ್ಬಳಕೆ ಮಾಡಿ­ಕೊಂಡು ಸ್ಥಳೀಯರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಲೋಕಸತ್ತಾ ಪಕ್ಷ ಆರೋಪಿಸಿದೆ.

ಪಕ್ಷದ ರಾಜ್ಯ ಘಟಕದ ಕಾರ್ಯ­ದರ್ಶಿ ಸಿ.ಎನ್‌.ದೀಪಕ್‌ ಅವರು ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಶನಿವಾರ ದೂರು ನೀಡಿದ್ದಾರೆ. ಓಂಪ್ರಕಾಶ್‌ ವಿರುದ್ಧದ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಓಂಪ್ರಕಾಶ್‌ ಅವರು ತಮ್ಮ ಮಗ ಕಾರ್ತಿಕೇಶ್‌ ಓಂಪ್ರಕಾಶ್‌ ಹೆಸರಿನಲ್ಲಿ ‘ಮಾಗಡಿ ಕ್ವಾರಿ ಅಂಡ್‌ ಕ್ರಷರ್‌’ ಎಂಬ ಸಂಸ್ಥೆ ಆರಂಭಿಸಿದ್ದಾರೆ.

ಇದೇ ಕಂಪೆನಿಯ ಹೆಸರಿನಲ್ಲಿ ಕಾರ್ತಿಕೇಶ್‌ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಓಂಪ್ರಕಾಶ್‌ ಅವರೇ ಮಗನ ಹೆಸರಿನಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ದೀಪಕ್‌ ದೂರಿದ್ದಾರೆ. ಮಾಗಡಿ ತಾಲ್ಲೂಕಿನ ಮಾಡ ಬಾಳ್‌ ಹೋಬಳಿಯ ಹಂಚಿಕುಪ್ಪೆ ಗ್ರಾಮದ 9 ಎಕರೆ 16 ಗುಂಟೆ ಜಮೀ ನನ್ನು ಕಲ್ಲು ಗಣಿಗಾರಿಕೆ ಸುರಕ್ಷಿತ ವಲಯವೆಂದು ಘೋಷಿಸುವ ತೀರ್ಮಾನವನ್ನು 2013ರ ಮಾರ್ಚ್‌ 13ರಂದು ರಾಮನಗರ ಜಿಲ್ಲಾಧಿಕಾರಿ ಪ್ರಕಟಿಸಿದ್ದರು. ಅದೇ ದಿನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಈ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ ಎಂದರು.

Write A Comment