ಬಳ್ಳಾರಿ: ನಗರದ ಹೃದಯ ಭಾಗದಲ್ಲಿರುವ ಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಸಿಡಿಬಂಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮಂಗಳವಾರ ನಡೆಯಿತು. ಜಿಲ್ಲೆಯೂ ಒಳಗೊಂಡಂತೆ ರಾಜ್ಯ ಹಾಗೂ ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಬಂದಿದ್ದ ದೇವಿಯ ಆರಾಧಕರ ಹರ್ಷೋದ್ಗಾರ ಉತ್ಸವಕ್ಕೆ ಸಾಕ್ಷಿಯಾಯಿತು.
ಬೆಳಿಗ್ಗೆಯಿಂದಲೇ ನಗರದತ್ತ ಹರಿದು ಬರಲಾರಂಭಿಸಿದ ಭಕ್ತರು ಮುಸ್ಸಂಜೆ ವೇಳೆಗೆ ಸಾಗಿದ ಸಿಡಿಬಂಡಿಯನ್ನು ಕಂಡು ಕೃತಾರ್ಥರಾದರು. ಸಂಪ್ರದಾಯದಂತೆ ಗಾಣಿಗ ಸಮುದಾ ಯದವರು ಮೆರವಣಿಗೆ ಮೂಲಕ ಕರೆತಂದ ಆರು ಜೊತೆ ಎತ್ತುಗಳ ಸಾರಥ್ಯದಲ್ಲಿ ದೇವಸ್ಥಾನವನ್ನು ಮೂರು ಸುತ್ತು ಹಾಕಿದ ಸಿಡಿಬಂಡಿಯನ್ನು ಕಂಡ ಜನರ ಘೋಷಣೆ ಮುಗಿಲು ಮುಟ್ಟಿತು. ಮಹಿಳೆಯರು, ಮಕ್ಕಳು ದೇವಸ್ಥಾನದತ್ತ ಧಾವಿಸಿ, ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು, ಹಣ್ಣು-–ಕಾಯಿ ಅರ್ಪಿಸಿ, ದೇವಿಯ ದರ್ಶನ ಪಡೆದರು.
ಸಿಡಿಬಂಡಿ ಉತ್ಸವದ ವೀಕ್ಷಣೆಗಾಗಿ ಮಧ್ಯಾಹ್ನ 3ರಿಂದಲೇ ದೇವಸ್ಥಾನದ ಸುತ್ತಮುತ್ತಲಿನ ಕಟ್ಟಡಗಳ ಮೇಲೆ ಹಾಗೂ ಅಲ್ಲಲ್ಲಿ ಭಕ್ತರು ಬಿಡಾರ ಹೂಡಿದ್ದರಿಂದ ಎಲ್ಲಿ ನೋಡಿದರಲ್ಲಿ ಜನಸಾಗರವೇ ಕಂಡುಬರುತ್ತಿತ್ತು. ಕೆಲವರು ಮರಗಳನ್ನು ಏರಿ ಸಿಡಿಬಂಡಿ ವೀಕ್ಷಿಸಿದರು.
ಅಲ್ಲದೆ, ಭಕ್ತರ ದಂಡು ಬೃಹದಾಕಾರದ ಹೂವಿನ ಮಾಲೆಗಳನ್ನು ಬಂಡಿಗಳಲ್ಲಿ ಇರಿಸಿಕೊಂಡು ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ತಂದು ದೇವಿಗೆ ಹಾಗೂ ಸಿಡಿಬಂಡಿಗೆ ಒಪ್ಪಿಸಿ ಹರಕೆ ತೀರಿಸಿತು.
ಉತ್ಸವದ ಅಂಗವಾಗಿ ಕನಕ ದುರ್ಗಮ್ಮ ದೇವಿ ಮೂರ್ತಿಗೆ ವಿಶೇಷ ಅಭಿಷೇಕ ನೆರವೇರಿಸಿ, ಚಿನ್ನಾಭರಣಗಳ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ನಡೆದ ಮಹಿಳೆಯರ ಪೂರ್ಣಕುಂಭ ಮೆರವಣಿಗೆ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿತು.