ಅಬ್ಬಾ..ಏನ್ ಬಿಸಿಲಪ್ಪಾ… ಎಷ್ಟು ನೀರ್ ಕುಡಿದ್ರೂ ಸಾಲಲ್ಲ ಅನ್ನೋ ಬೇಸಿಗೆಕಾಲದ ಆದಿಯಿದು. ಹೌದು, ಬೇಸಿಗೆ ಬಂದೊಡನೆ ನೀರಿನ ದಾಹವೂ ಹೆಚ್ಚಾಗುತ್ತೆ. ಸಾವಿರಾರು ರೂಪಾಯಿ ಕೊಟ್ಟು ತೆಗೆದುಕೊಂಡಿರುವ ‘ಫ್ರಿಡ್ಜ್ (ತಂಗಳು ಪೆಟ್ಟಿಗೆ)’ ಕೂಡ ಮಡಿಕೆಗಳ ಮುಂದೆ ಮಂಕಾಗುತ್ತೆ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆಯೇ ಮಡಿಕೆಯಲ್ಲಿಟ್ಟ ತಂಪು ನೀರು ಕುಡಿದರೆ ಸಮಾಧಾನ ಅನ್ನಿಸುತ್ತೆ. ನಗರದ ಸುಡುಬಿಸಿಲಿನಲ್ಲಿ ಮಡಿಕೆಗಳ ಮಾರಾಟವೂ ಸಹ ಅಷ್ಟೇ ಜೋರಾಗಿ ನಡೆಯುತ್ತಿದೆ.
ರಸ್ತೆ ಬದಿಯಲ್ಲಿ ಸಾಲಾಗಿ ಜೋಡಿಸಿರುವ ಮಡಿಕೆಗಳನ್ನು ಹೇಗೋ ಇಪ್ಪತ್ತು ಮೂವತ್ತು ರೂಪಾಯಿ ಚಾಕಾಸಿ ಮಾಡಿ ತಂದು ಮನೆಯಲ್ಲಿಟ್ಟ ಸಮಾಧಾನ ನಮ್ಮದಾದರೆ, ಆ ಮಡಿಕೆ ಮಾರಿದವನಿಗೆ ಮಾರಾಟ ಮಾಡಿದ ನಿಟ್ಟುಸಿರು. ಹಾಗಾದರೆ ಇವರಿಬ್ಬರ ನಡುವೆ ಇರುವ ಮಡಿಕೆ ತಯಾರಕರಾದ ‘ಕುಂಬಾರರು’ ಎಲ್ಲಿ ಕಳೆದುಹೋಗಿದ್ದಾರೆ? ಈ ಪ್ರಶ್ನೆಯ ಜಾಡು ಹಿಡಿದು ಹೊರಟಾಗ ತಲುಪಿದ್ದು ಶಿವಾಜಿನಗರದ ಹತ್ತಿರವೇ ಇರುವ ‘ನ್ಯೂ ಪಾಟರಿ ಟೌನ್’ಗೆ. ಇಲ್ಲಿಂದಲೇ ನಗರದ ಎಲ್ಲಾ ಕಡೆಗೂ ಮಡಿಕೆಗಳು ಹಾಗೂ ಮಣ್ಣಿನ ಇತರ ಉತ್ಪನ್ನಗಳು ಸರಬರಾಜಾಗುತ್ತದೆ.
ಪಾಟರಿ ಟೌನ್ ಹಿನ್ನೆಲೆ
ಬೆಂಗಳೂರಿನಲ್ಲಿ ಮಡಿಕೆ ತಯಾರಿಸಲು ಸರ್ಕಾರದ ವತಿಯಿಂದ ಅನುದಾನವಾಗಿ ನೀಡಿರುವ ಏಕೈಕ ಸ್ಥಳ ‘ಪಾಟರಿ ಟೌನ್’. 42 ಕುಂಬಾರ ಕುಟುಂಬಗಳಿಗೆ ಮಡಿಕೆ ತಯಾರಿಸಲು ಇಲ್ಲಿ ಷೆಡ್ ಕಲ್ಪಿಸಿಕೊಡಲಾಗಿದೆ. ಆದರೆ ಇದಕ್ಕೆ ಇಲ್ಲಿನ ಕುಟುಂಬಗಳು ವರ್ಷಕ್ಕೊಮ್ಮೆ ಭೋಗ್ಯದ ರೀತಿ ಹಣ ತೆರಬೇಕಾಗುತ್ತದೆ. ಮೊದಲು ಮಾರುಕಟ್ಟೆಯ ಹತ್ತಿರ ಕುಂಬಾರ ಪೇಟೆಯಲ್ಲಿ ಕುಂಬಾರರಿಗೆ ಜಾಗ ನೀಡಲಾಗಿತ್ತು. ನಗರ ಬೆಳವಣಿಗೆ ಹಂತ ಮುಟ್ಟುತ್ತಿದ್ದಂತೆಯೇ ಕುಂಬಾರ ಪೇಟೆಯನ್ನು ಶೂಲೆ ಸರ್ಕಲ್‌ಗೆ ಸ್ಥಳಾಂತರಿಸಲಾಯಿತು (‘ಶೂಲೆ’ ಅಂದರೆ ತಮಿಳಿನಲ್ಲಿ ಭಟ್ಟಿ ಇಳಿಸುವುದು ಎಂದರ್ಥ).
ಇದಾದ ನಂತರ ನಗರದ ರೈಲ್ವೆ ನಿಲ್ದಾಣದ ಬಳಿ ಪಾಟರಿ ಟೌನ್‌ಗೆ ಸ್ಥಳಾಂತರ. ನಗರೀಕರಣದ ಉದ್ದೇಶದಿಂದ ಅಲ್ಲಿಂದಲೂ ಎತ್ತಂಗಡಿ. ಈಗ ಸುಮಾರು ತೊಂಬತ್ತು ವರ್ಷಗಳಿಂದ ‘ನ್ಯೂ ಪಾಟರಿ ಟೌನ್’ನಲ್ಲಿ ಕುಲಕಸುಬಾದ ಕುಂಬಾರಿಕೆಯನ್ನು ಮುಂದುವರಿಸಿಕೊಂಡು ಅದನ್ನೇ ಉದ್ಯಮವಾಗಿಸಿಕೊಂಡು ಕುಂಬಾರ ಕುಟುಂಬಗಳು ನೆಲೆಯೂರಿವೆ. ಕರ್ನಾಟಕ ಖಾದಿ ಹಾಗೂ ಗ್ರಾಮೋದ್ಯೋಗ ಮಂಡಳಿಯಿಂದ ಮಾನ್ಯತೆ ಪಡೆದಿರುವ ‘ಕುಂಬಾರ ಕರಕುಶಲ ಕೈಗಾರಿಕಾ ಸಹಕಾರ ಸಂಘ ನಿಯಮಿತ’ ಎಂಬ ಸಂಘ ಕುಂಬಾರರ ಕುಟುಂಬಗಳಿಗೆ ಬೆನ್ನುಲುಬಾಗಿ ಕಾರ್ಯನಿರ್ವಹಿಸುತ್ತಿದೆ.
ನಗರದಲ್ಲಿ ಕುಂಬಾರಿಕೆ
‘ನಾಲ್ಕು ತಲೆಮಾರಿನಿಂದಲೂ ನಮ್ಮ ಕುಟುಂಬ ಇದೇ ಕಸುಬಿನಿಂದ ಬದುಕಿದೆ. ನಾನು ಎಂಟು ವರ್ಷದವನಿದ್ದಾಗಲೇ ನನ್ನ ತಂದೆ ಕುಂಬಾರಿಕೆಯನ್ನು ಕಲಿಸಿಕೊಡಲು ಆರಂಭಿಸಿದ್ದರು. ನನ್ನ ತಂದೆಯೇ ನನ್ನ ಗುರು. ಸುಮಾರು 40ವರ್ಷಗಳಿಂದಲೂ ನಾನು ಕುಂಬಾರಿಕೆಯಲ್ಲಿ ತೊಡಗಿಕೊಂಡಿದ್ದೇನೆ’ ಎನ್ನುತ್ತಾ ಮಾತು ಆರಂಭಿಸಿದರು ಮಡಿಕೆ ತಯಾರಕ ರಾಜಶೇಖರ್. ‘ಮಡಿಕೆಗಳಿಗೆ ಬೇಡಿಕೆ ಹೆಚ್ಚು. ಆದರೆ ನಮ್ಮ ಕಸುಬಿಗೆ “ಸರಿಯಾದ ಪ್ರೋತ್ಸಾಹ ಇಲ್ಲ’ ಎನ್ನುವ ರಾಜಶೇಖರ್ ತಾವೇ ಗ್ರಾಹಕರಿಗೆ ಮಡಿಕೆಗಳನ್ನು ಮಾಡಿಕೊಡುತ್ತಾರೆ.
‘ಕೆಲಸಗಾರರನ್ನು ಸೇರಿಸಿಕೊಂಡರೆ ಅವರಿಗೆ ಸಂಬಳ ಕೊಡುವುದರಲ್ಲೇ ನಮ್ಮ ಲಾಭಾಂಶ ಹೋಗಿ ಬಿಡುತ್ತದೆ. ಹಾಗಾಗಿ ನನ್ನ ಹೆಂಡತಿ ಹಾಗೂ ಇಬ್ಬರು ಹೆಣ್ಣು ಮಕ್ಕಳೂ ನನ್ನ ಈ ಕಸುಬಿಗೆ ಬೆಂಬಲವಾಗಿ ನಿಂತು ಅವರೂ ಮಡಿಕೆ ಮಾಡಲು ಸಹಾಯ ಮಾಡುತ್ತಾರೆ’ಎಂದು ಸಂತಸದಿಂದ ಹೇಳುತ್ತಾರೆ ರಾಜಶೇಖರ್.
ಮಡಿಕೆ ಮಾಡುವ ವಿಧಾನ
‘ಜೇಡಿಮಣ್ಣು ಮಡಿಕೆಗೆ ಬೇಕಾದ ಪ್ರಮುಖ ಸಲಕರಣೆ. ಇದನ್ನು ಮೊದಲು ಶೋಧಿಸಿಕೊಳ್ಳಬೇಕು. ನಂತರ ಅದು ಹಳೆ ಮಣ್ಣಾಗುವವರೆಗೆ ಎಂಟತ್ತು ದಿನಗಳು ಇಡುತ್ತೇವೆ. ಈ ಪ್ರಕ್ರಿಯೆಗೆ ಏಜಿಂಗ್ ಎನ್ನಲಾಗುತ್ತದೆ. ಇದರ ನಂತರ ನೀರು ಹಾಗೂ ಜೇಡಿಮಣ್ಣನ್ನು ಮಿಶ್ರಣ ಮಾಡಿ ಕಾಲಿನಲ್ಲಿ ಚೆನ್ನಾಗಿ ತುಳಿದು ಹದ ಮಾಡಿಕೊಳ್ಳಲಾಗುತ್ತದೆ. ಮಣ್ಣನ್ನು ಕಾಲಿನಿಂದ ತುಳಿಯುವುದರಿಂದ ಮಣ್ಣು ಮೃದುಗೊಂಡು ನಮಗೆ ಬೇಕಾದ ಆಕಾರ ಪಡೆದುಕೊಳ್ಳುವಲ್ಲಿ ಸಹಾಯವಾಗುತ್ತದೆ.
ಮಣ್ಣನ್ನು ಮೃದುಗೊಳಿಸಿದ ಕ್ರಿಯೆ ಮುಗಿದ ಮೇಲೆ ಎಲೆಕ್ಟ್ರಿಕ್ ವೀಲ್ ಬಳಸಿ ಮಣ್ಣಿಗೆ ಮಡಿಕೆಯ ಆಕಾರ ನೀಡಿ ಮನೆಯಲ್ಲಿ ಒಂದೆರೆಡು ದಿನ ಒಣಗಿಸಿ ನಂತರ ಮೂರ್ನಾಲ್ಕು ದಿನ ಬಿಸಿಲಿನಲ್ಲಿ ಒಣಗಿಸಿದರೆ ಮಡಿಕೆ ಮಾರಲು ಸಿದ್ಧ. ಮಡಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಏಳರಿಂದ ಎಂಟು ದಿನಗಳು ಬೇಕು’ ಎಂದು ರಾಜಶೇಖರ್ ಹೇಳಿದರು.
ಮಡಿಕೆ– ತೊಡಕು
ನಗರದಲ್ಲಿ ಮುಖ್ಯವಾಗಿ ಮಡಿಕೆ ತಯಾರಿಕೆಗೆ ಬೇಕಾದ ಜಾಗದ ಸಮಸ್ಯೆ ಇದೆ. ಮಡಿಕೆ ಸುಡುವುದು, ಒಣಗಿಸುವುದು ಇದೆಲ್ಲದಕ್ಕೂ ಸ್ಥಳಾವಕಾಶ ಮುಖ್ಯ. ಮಡಿಕೆ ನಿರ್ಮಾಣ ನಗರದಲ್ಲಿ ಇಳಿಕೆಯಾಗಿರುವುದಕ್ಕೆ ಸ್ಥಳಾವಕಾಶ ಇಲ್ಲದಿರುವುದೂ ಒಂದು ಪ್ರಮುಖ ಕಾರಣ ಎನ್ನಬಹುದು.
ಇದನ್ನು ಬಿಟ್ಟರೆ ಬೆಂಗಳೂರಿನಲ್ಲಿ ಮಡಿಕೆ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು ಸಿಗುವುದು ಬಹಳ ಕಷ್ಟ. ‘ಜೇಡಿಮಣ್ಣನ್ನು ದುಡ್ಡು ಕೊಟ್ಟು ಕೊಳ್ಳಬೇಕು… ನೀರಿಗೂ ಇದೇ ಹಣೆಬರಹ. ಇಲ್ಲಿರುವ ಕುಟುಂಬಗಳ ಮನೆಗೆ ವಾಣಿಜ್ಯ ಉದ್ದೇಶದಿಂದ ವಿದ್ಯುತ್ ಹಾಗೂ ನೀರಿಗೆ ತೆರಿಗೆ ಹಾಕಲಾಗುತ್ತದೆ. ಮಡಿಕೆ ಸುಡಲು ಬೇಕಾದ ಸೌದೆಗೂ ಕೂಡ ದುಡ್ಡು ಕೊಡಬೇಕು’ ಎನ್ನುವುದು ಇಲ್ಲಿನ ಸಮುದಾಯದವರ ಅಳಲು.
ಗ್ರಾಹಕ ವಲಯ
ಮಣ್ಣಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚು. ಕೇವಲ ಬೇಸಿಗೆಯಲ್ಲಷ್ಟೇ ಅಲ್ಲದೆ ಇತರ ಸಮಯದಲ್ಲೂ ಸಹ ಈ ಉತ್ಪನ್ನಗಳಿಗೆ ಬೇಡಿಕೆ ಇರುತ್ತದೆ. ಸರ್ಕಾರ ಆಯೋಜಿಸುವ ಖಾದಿ ಉತ್ಸವಗಳಲ್ಲಿಯೂ ಸ್ಟಾಲ್‌ಗಳನ್ನು ಹಾಕಿ ಮಣ್ಣಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ‘ಪಾಟರಿ ಟೌನ್‌ಗೆ ಹಲವಾರು ವರ್ಷದಿಂದ ಹುಡಕಿಕೊಂಡು ಬಂದು ಮಡಿಕೆಗಳು ಹಾಗೂ ಇತರ ಉತ್ಪನ್ನಗಳನ್ನು ಕೊಂಡುಕೊಳ್ಳುವವರಿದ್ದಾರೆ. ಎಲ್ಲಾ ವರ್ಗದವರೂ ಬಂದು ಮಡಿಕೆ ಕೊಂಡುಕೊಳ್ಳುತ್ತಾರೆ. ಅದರಲ್ಲಿ ಕಾರಿನಲ್ಲಿ ಬರುವವರೇ ಹೆಚ್ಚು’ ಎಂದು ರಾಜಶೇಖರ್ ಹೇಳುತ್ತಾರೆ.
ನಾವು ಒಡೆಯರ್ ಕುಟುಂಬ ವರ್ಗದವರು. ಸುಮಾರು ಮುನ್ನೂರು ಮುನ್ನೂರೈವತ್ತು ವರ್ಷಗಳ ಹಿಂದೆ ಆರ್ಕಾಟ್ ನವಾಬರು ನಮ್ಮ ಹಿರಿಕರನ್ನು ತಮಿಳುನಾಡಿನಿಂದ ಮಡಿಕೆ ತಯಾರಿಸಲು ಇಲ್ಲಿಗೆ ಕರೆದುಕೊಂಡು ಬಂದರಂತೆ. ಮಣ್ಣಿನ ಮಡಿಕೆ, ಹೂಜಿಗಳು, ದೀಪಾವಳಿ ಸಮಯಲ್ಲಿ ತರಹೇವಾರಿ ದೀಪಗಳು, ಗಣೇಶನ ಹಬ್ಬದ ಸಂದರ್ಭದಲ್ಲಿ ಗೌರಿ ಗಣೇಶನ ವಿಗ್ರಹಗಳು ಹೀಗೆ ಮುತ್ತಾತ, ತಾತ, ಅಪ್ಪ ಎಲ್ಲರೂ ಕುಂಬಾರಿಕೆಯನ್ನು ನಂಬಿ ಬದುಕಿದವರೇ. ಈಗ ನನ್ನ ಸರದಿ.
ಸ್ಥಳಾವಕಾಶ ಇಲ್ಲದಿರುವುದರಿಂದ ನಾವು ಮಡಿಕೆ ತಯಾರಿಸುವುದಿಲ್ಲ. ಆದರೆ ತಮಿಳುನಾಡಿನಿಂದ ಆಮದು ಮಾಡಿಕೊಳ್ಳುತ್ತೇವೆ. ಆಮದು ಮಾಡಿಕೊಳ್ಳುವಾಗ ಹಲವಾರು ಮಡಿಕೆಗಳು ಒಡೆದುಹೋಗಿರುತ್ತದೆ. ಇದಕ್ಕೆ ಸರಕುಸಾಗಣೆ ವೆಚ್ಚ ಬೇರೆ. ಇದೆಲ್ಲಾ ಕೊಟ್ಟು ನಾವು ಹೆಚ್ಚು ಲಾಭ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಇಲ್ಲಿ ದೀಪಗಳು, ಕುಲ್ಫಿ ಕಪ್‌ಗಳು, ಚಿಕ್ಕ ಪುಟ್ಟ ಮಣ್ಣಿನ ಬಟ್ಟಲುಗಳನ್ನು ತಯಾರಿಸುತ್ತೇವೆ. ಈ ಪುಟ್ಟ ಬಟ್ಟಲುಗಳನ್ನು ಸುಮಾರು ವರ್ಷದಿಂದ ಐಟಿಸಿ ವಿಂಡ್ಸರ್ ಮ್ಯಾನರ್ ಹೋಟೆಲ್‌ಗೆ ಗುತ್ತಿಗೆಯಾಗಿ ನೀಡುತ್ತೇವೆ’
ಚರಣ್. (ನ್ಯೂ ಪಾಟರಿ ಟೌನ್ ಕುಂಬಾರ)
ಕರ್ನಾಟಕ