ಕರ್ನಾಟಕ

6 ಮಂದಿ ಆತ್ಮಹತ್ಯೆ; ತಂದೆ-ತಾಯಿ ಜೊತೆಗೆ ಮೂವರು ಸಹೋದರಿಯರಿಗೆ ಊಟದಲ್ಲಿ ವಿಷ ಹಾಕಿ ತಾನೂ ನೇಣು ಬಿಗಿದುಕೊಂಡ ಯತೀಶ್

Pinterest LinkedIn Tumblr

Police-visit

ಬೆಂಗಳೂರು, ಮಾ. ೧೨- ಅಕ್ಕನ ಮದುವೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ನೊಂದ ಯುವಕನೋರ್ವ ತನ್ನ ಮೂವರು ಸಹೋದರಿಯರ ಜೊತೆಗೆ ತಂದೆ-ತಾಯಿಗೆ ಊಟದಲ್ಲಿ ವಿಷ ಬೆರೆಸಿ ತಿನ್ನಿಸಿ ತಾನೂ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಜ್ಞಾನಭಾರತಿಯ ಎಪಿಎಂ ಲೇಔಟ್‌ನಲ್ಲಿ ನಡೆದಿದೆ.

ಬಿಎಸ್‌ಎನ್‌ಎಲ್ ಉದ್ಯೋಗಿಯಾಗಿದ್ದ ಗಂಗ ಹನುಮಯ್ಯ (57), ಜಯಮ್ಮ (55) ದಂಪತಿಯ ಮೂವರು ಹೆಣ್ಣು ಮಕ್ಕಳಾದ ನೇತ್ರಾವತಿ (29), ವಿಮಲಾ (28) ಹಾಗೂ ಹೇಮಲತಾ (26) ಅವರಿಗೆ ಊಟದಲ್ಲಿ ವಿಷ ಹಾಕಿ ತಿನ್ನಿಸಿದ ಮಗ ಯತೀಶ್ (27) ಅವರೆಲ್ಲರೂ ಸಾವಿಗೆ ಶರಣಾದ ನಂತರ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೂವರು ಸಹೋದರಿಯರಲ್ಲಿ ಇನ್ನೂ ಯಾರಿಗೂ ವಿವಾಹವಾಗದ ಹಿನ್ನೆಲೆಯಲ್ಲಿ ಯತೀಶ್ ನೊಂದಿದ್ದ. ಇದರ ಜೊತೆಗೆ ಅಕ್ಕ ನೇತ್ರಾವತಿಗೆ ಇತ್ತೀಚೆಗಷ್ಟೇ ನಿಶ್ಚಯವಾಗಿದ್ದ ವಿವಾಹ ಮುರಿದು ಬಿದ್ದಿತ್ತು.

ತಂದೆಯ ಸಂಬಳದಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಇದೆಲ್ಲ ಕಷ್ಟಗಳಿಂದ ನೊಂದ ಯತೀಶ್ ಎಲ್ಲರೊಂದಿಗೆ ಸಾಯಲು ನಿರ್ಧರಿಸಿ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮೊನ್ನೆ ರಾತ್ರಿಯೇ ಮನೆಯಲ್ಲಿನ ಐವರಿಗೂ ಊಟದಲ್ಲಿ ವಿಷ ಬೆರೆಸಿದ ಯತೀಶ್, ಅದನ್ನು ತಿಂದು ಅವರೆಲ್ಲರೂ ಸತ್ತಿರುವುದನ್ನು ಖಚಿತಪಡಿಸಿಕೊಂಡು ತಾನೂ ನೇಣು ಬಿಗಿದುಕೊಂಡಿದ್ದಾನೆ.

ಮನೆಯ ಬಾಗಿಲು ಹಾಕಿದ್ದರಿಂದ ಕುಟುಂಬದವರೆಲ್ಲ ಬೇರೆಲ್ಲೋ ಹೋಗಿರಬಹುದೆಂದು ಅಕ್ಕಪಕ್ಕದವರು ಸುಮ್ಮನಾಗಿದ್ದಾರೆ. ಸಂಬಂಧಿಕರು ಕೂಡ ಫೋನ್ ಮಾಡಿದಾಗ ಯಾರೂ ಕರೆ ಸ್ವೀಕರಿಸಿಲ್ಲ.

ಆತಂಕಗೊಂಡು ಇಂದು ಬೆಳಿಗ್ಗೆ ಮನೆ ಬಳಿ ಬರುತ್ತಲೇ ಮನೆಯಿಂದ ವಾಸನೆ ಬರುತ್ತಿದ್ದು, ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಜ್ಞಾನಭಾರತಿ ಪೊಲೀಸರು ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಎಲ್ಲರೂ ಸಾವಿಗೆ ಶರಣಾಗಿದ್ದು, ದೇಹವೆಲ್ಲಾ ಹಸಿರು ಬಣ್ಣಕ್ಕೆ ತಿರುಗಿತ್ತು.

ಸ್ಥಳಕ್ಕೆ ಡಿಸಿಪಿ ಲಾಬೂರಾಮ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯಲ್ಲಿ ಉಳಿದಿದ್ದ ಆಹಾರ ಪದಾರ್ಥಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಜ್ಞಾನಭಾರತಿ ಪೊಲೀಸ್ ಇನ್ಸ್‌ಪೆಕ್ಟರ್ ರವೀಶ್ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಖಿನ್ನತೆಯಿಂದ ಕೃತ್ಯ

ಬಿಎಸ್‌ಎನ್‌ಎಲ್‌ನ ಉದ್ಯೋಗಿ ಗಂಗಹನುಮಯ್ಯ ಅವರ ಮುದ್ದಿನ ಮಗನಾಗಿದ್ದ ಯತೀಶ್ ಇತ್ತೀಚೆಗೆ ಖಿನ್ನತೆಗೊಳಗಾಗಿದ್ದ. ಯಾರೊಂದಿಗೂ ಹೆಚ್ಚು ಮಾತನಾಡದೆ ಮನೆಯ ಮೇಲೆ ಚಿಂತಾಕ್ರಾಂತನಾಗಿ ಕುಳಿತುಕೊಳ್ಳುತ್ತಿದ್ದ. ಮಾನಸಿಕ ಖಿನ್ನತೆಯಿಂದಾಗಿ ಯತೀಶ್ ಈ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Write A Comment