-ಅನಿತಾ ಎಚ್
ಇದುವರೆಗೆ ಕೈಮಗ್ಗ, ಖಾದಿ ಮತ್ತು ಗ್ರಾಮೋದ್ಯೋಗ ಹಾಗೂ ಕರಕುಶಲ ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ‘ಗ್ರಾಮೀಣ ಅಂಗಡಿ’ ಶೀಘ್ರದಲ್ಲಿಯೇ ಸಾವಯವ ತರಕಾರಿ ಮತ್ತು ಎಲ್ಲ ಬಗೆಯ ಧಾನ್ಯಗಳ ಮಳಿಗೆಯನ್ನು ಆರಂಭಿಸಲಿದೆ.
ಕರಕುಶಲ ಕರ್ಮಿ ಸಮುದಾಯಗಳಿಗೆ ಆಸರೆಯಾಗಿರುವ ಜಯನಗರದಲ್ಲಿರುವ ‘ಗ್ರಾಮೀಣ ಅಂಗಡಿ’ ಮಾರ್ಚ್ 16ರಿಂದ ಏಪ್ರಿಲ್ 30ರವರೆಗೆ ‘ಕೈಮಗ್ಗ ಉತ್ಪನ್ನ ಖರೀದಿಸಿ–ನೇಕಾರರನ್ನು ಸಂರಕ್ಷಿಸಿ’ ಅಭಿಯಾನ ಹಮ್ಮಿಕೊಂಡಿದೆ.
ಯುಗಾದಿ ಹಬ್ಬದ ಪ್ರಯುಕ್ತ ಈ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ರಾಜ್ಯದ ವಿವಿಧ ಜಿಲ್ಲೆಗಳ ಕೈಮಗ್ಗ, ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ತಯಾರಕರನ್ನು ಸಂಪರ್ಕಿಸಿ ಒಂದೆಡೆ ಸೇರಲು ಅವಕಾಶ ಒದಗಿಸಿದೆ.
‘ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು, ಪಾರಂಪರಿಕವಾದ ದೇಸೀಯ ಉತ್ಪನ್ನಗಳನ್ನು ತಯಾರಿಸುವ ಗ್ರಾಮೀಣ ಕರಕುಶಲ ಕರ್ಮಿಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ನಮ್ಮ ಉದ್ದೇಶ. ನೂರೈವತ್ತಕ್ಕೂ ಹೆಚ್ಚು ಗ್ರಾಮೀಣ ಕರಕುಶಲ ಕರ್ಮಿಗಳು ನಮ್ಮೊಂದಿಗೆ ನೇರ ಸಂಪರ್ಕದಲ್ಲಿ ಇದ್ದು, ಇನ್ನೂ ಹಲವರನ್ನು ಒಳಗೊಳ್ಳಬೇಕಿದೆ. ಇದಕ್ಕೆ ಜಾಗೃತಿ ಮೂಡಿಸಲು ಪ್ರಸ್ತುತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ‘ಗ್ರಾಮೀಣ ಅಂಗಡಿ’ ವ್ಯವಸ್ಥಾಪಕ ಬಿ. ಗಂಗಾಧರಮೂರ್ತಿ.
‘ಅಭಿಯಾನ ಹಮ್ಮಿಕೊಳ್ಳುವುದಕ್ಕೂ ಮುನ್ನ ಉಡುಪಿ, ಕೊಪ್ಪಳ, ಬಾಗಲಕೋಟೆ, ಇಳಕಲ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ, ಕೈಮಗ್ಗ ಕೆಲಸದಲ್ಲಿ ತೊಡಗಿಕೊಂಡವರ ಸ್ಥಿತಿಗತಿ, ಯಾವ ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ, ಮಾರುಕಟ್ಟೆ ಸೌಲಭ್ಯ ಮುಂತಾದ ವಿಷಯಗಳ ಬಗ್ಗೆ ಅಧ್ಯಯನ ನಡೆಸಿದೆವು. ಉಡುಪಿಯ ಪ್ರಾಥಮಿಕ ಸಹಕಾರ ಸಂಘ ಕಳೆದ ಮೂವತ್ತಾರು ವರ್ಷಗಳಿಂದ ಕೈಮಗ್ಗ ಕೆಲಸ ನಡೆಸಿಕೊಂಡು ಬರುತ್ತಿದೆ. ಆದರೆ ಅವರು ತಯಾರಿಸುವ ಉತ್ಪನ್ನಗಳಿಗೆ ಪ್ರಚಾರವೇ ಇಲ್ಲದಾಗಿದೆ.
ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕದ ಕಾರಣ, ಜೀವನ ನಿರ್ವಹಣೆಗಾಗಿ ಕೆಲವರು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ವೃದ್ಧರೇ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. 180 ಇದ್ದ ಕೈಮಗ್ಗಗಳೀಗ 18ಕ್ಕೆ ಕುಸಿದಿವೆ’ ಎಂದು ವಿವರಿಸುತ್ತಾರೆ ಅವರು.
‘ಕೊಪ್ಪಳ ಭಾಗದಲ್ಲಿ ವಿದ್ಯುತ್, ಕೈಮಗ್ಗಗಳೆರಡೂ ಇವೆ. ಆದರೆ ಹಳೆಯ ತಲೆಮಾರಿನವರು ಇಂದಿಗೂ ಕೈಮಗ್ಗಗಳನ್ನೇ ಆಶ್ರಯಿಸಿದ್ದಾರೆ. ಆದರೆ ತಯಾರಿಸಿದ ಸೀರೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಅಲ್ಲಿನ ಸ್ವ–ಸಹಾಯ ಸಂಘ ನಡೆಸುವ ಕೈಮಗ್ಗಗಳಲ್ಲಿ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ರಾಸಾಯನಿಕ ರಹಿತ ಸೀರೆಗಳ ತಯಾರಿಕೆ ಇವರ ವಿಶೇಷ. ಇವರೆಲ್ಲರೂ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಉಡುಪಿ, ಕೊಪ್ಪಳ ಮಾತ್ರವಲ್ಲದೇ ಹುಬ್ಬಳ್ಳಿ–ಧಾರವಾಡ, ಇಳಕಲ್, ಗುಳೇದ ಗುಡ್ಡ, ಗದಗ, ಬಾಗಲಕೋಟೆ ಮುಂತಾದ ಭಾಗಗಳ ಕೈಮಗ್ಗ ಉತ್ಪನ್ನಗಳೂ ಪ್ರದರ್ಶನದಲ್ಲಿ ಇರಲಿವೆ. ಪ್ರತಿ ಊರಿನ ನೇಕಾರರಿಗೂ ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗವುದು. ಹಬ್ಬದ ಅಂಗವಾಗಿ ಪ್ರತಿ ಉತ್ಪನ್ನದ ಮೇಲೆ ವಿಶೇಷ ರಿಯಾಯಿತಿ ಇರಲಿದೆ’ ಎನ್ನುತ್ತಾರೆ ಗಂಗಾಧರಮೂರ್ತಿ.
ವಿಳಾಸ: ‘ಗ್ರಾಮೀಣ ಅಂಗಡಿ’, ನಂ.8, 11ನೇ ಮುಖ್ಯರಸ್ತೆ, 39ನೇ ‘ಎ’ ಕ್ರಾಸ್, 4ನೇ ‘ಟಿ’ ಬ್ಲಾಕ್, ಜಯನಗರ, ಬೆಂಗಳೂರು – 41, ಮಾಹಿತಿಗೆ: 9731105526, 9448324727