ಮಹಾನಗರದ ಮನೆಯಂಗಳದ ಇಕ್ಕಟ್ಟು ಜಾಗದಲ್ಲಿಯೇ ದಾಸವಾಳ ಬೆಳೆಯಲು ತೊಡಗಿದವರು ಪುಷ್ಪಾ ಮತ್ತು ಶ್ಯಾಮಲಾ. ಪ್ರೀತಿ ಮತ್ತು ಶ್ರದ್ಧೆಯಿಂದ ದಾಸವಾಳ ತಳಿ ಪ್ರಯೋಗವನ್ನು ಧ್ಯಾನದಂತೇ ನಡೆಸಿಕೊಂಡು ಬರುತ್ತಿರುವ ಇವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿದ್ದಾರೆ. ಈ ಇಬ್ಬರು ಮಹಿಳೆಯರ ಕುಸುಮಪ್ರೇಮದ ಜಗತ್ತನ್ನು ಪರಿಚಯಿಸುವ ಪ್ರಯತ್ನ ಪದ್ಮನಾಭ ಭಟ್ ಅವರ ಈ ಬರಹದಲ್ಲಿದೆ.
ಕಡುಗಪ್ಪು ಬಣ್ಣದ ಗೇಟನ್ನು ಸರಿಸಿ ಕಾಂಪೌಂಡ್ ಒಳಗೆ ಅಡಿಯಿಡುತ್ತಿದ್ದಂತೆಯೇ ಗೇಟಿನ ಪಕ್ಕವೇ ನಿಂತಿದ್ದ ಕ್ಲಾಸಿಕಲ್ ಡಾನ್ಸರ್ ನಾಟ್ಯಭಂಗಿಯಲ್ಲಿಯೇ ತಲೆಯಲ್ಲಾಡಿಸಿ ಬರಮಾಡಿಕೊಂಡಳು. ಅವಳೆದುರೇ ಶಾಂತವಾಗಿ ನಿಂತಿದ್ದ ಸಿಂಪಲ್ ಪ್ಲೆಜರ್ ಮುಖದ ತುಂಬ ಸಂತಸದ ನಗುತುಂಬಿಕೊಂಡು ಸನ್ನೆಯಲ್ಲಿಯೇ ಬಳಿಗೆ ಕರೆದಳು. ಅದರಾಚೆಯ ಅರ್ಲಿ ಬರ್ಡ್ ಯಾಕೋ ಕೊಂಚ ಮುನಿಸಿಕೊಂಡಂತೆ ಅತ್ತ ಮುಖ ತಿರುವಿಕೊಂಡು ನಿಂತಿದ್ದಳು..
ಶಿವಾ, ವಿಂಗ್ಸ್ ಆಫ್ ಫೈರ್, ಡಿವೈನ್ ಗ್ರೇಸ್, ಬಾಬ್ ಕ್ಯಾರನ್ ಹೀಗೆ ಸಾಲಾಗಿ ನಿಂತಿದ್ದ ಒಬ್ಬೊಬ್ಬರನ್ನೂ ಮೈದಡವಿ, ಮುಖ ತಿರುವಿ ಅಕ್ಕರೆಯಿಂದ ಪರಿಚಯಿಸುತ್ತಾ ಹೋದರು ಪುಷ್ಪಾ ಸುರೇಶ್.
ಈ ಚಿತ್ರ ವಿಚಿತ್ರ ಹೆಸರಿನ ಅವರೇನೂ ಪುಷ್ಪಾ ಸುರೇಶ್ ಸಂಬಂಧಿಗಳಲ್ಲ. ಆದರೆ ಅದಕ್ಕಿಂತ ಹೆಚ್ಚಿನ ಆತ್ಮಬಂಧುತ್ವ ಅವರಲ್ಲಿ ಎದ್ದು ಕಾಣುತ್ತಿತ್ತು. ಅಂದಹಾಗೆ ಆ ವಿಚಿತ್ರ ಹೆಸರುಗಳನ್ನು ಹೊತ್ತು ಪುಷ್ಪಾ ಸುರೇಶ್ ಮನೆಯಂಗಳದಲ್ಲಿ ಸಾಲಾಗಿ ನಿಂತಿರುವುದು ದಾಸವಾಳ ಗಿಡಗಳು!
ನಗರದ ತಲಘಟ್ಟಪುರದಲ್ಲಿನ ಪುಷ್ಪಾ ಸುರೇಶ್ ಮನೆಗೆ ಭೇಟಿ ನೀಡಿದರೆ ದಾಸವಾಳ ಜಗತ್ತೇ ತೆರೆದುಕೊಳ್ಳುತ್ತದೆ. ಮನೆಯ ಸುತ್ತಲು, ಮಹಡಿಯ ಟೆರೇಸಿನ ಮೇಲೆ ಎಲ್ಲೆಂದರಲ್ಲಿ ವಿವಿಧ ಆಕಾರದ ಎತ್ತರದ ವೈವಿಧ್ಯಮಯ ದಾಸವಾಳಗಳು ವಿಶಿಷ್ಟ ವರ್ಣವಿನ್ಯಾಸದ ಹೂಗಳನ್ನು ಮೈಯಲ್ಲಿ ಅರಳಿಸಿಕೊಂಡು ನಿಂತಿರುವುದು ಕಾಣುತ್ತೇವೆ. ಇವೆಲ್ಲವೂ ಹೈಬ್ರಿಡ್ ತಳಿಯ ದಾಸವಾಳಗಳು.
ಪುಷ್ಪಾ ಅವರ ಮನೆಯಿಂದ ಕೂಗಳತೆ ದೂರದಲ್ಲಿರುವ ಶ್ಯಾಮಲಾ ಅವರ ಮನೆಯಂಗಳದಲ್ಲಿಯೂ ಇಂಥದ್ದೇ ಒಂದು ದಾಸವಾಳ ಲೋಕ ಮೈದಳೆದು ನಿಂತಿದೆ. ಈ ಇಬ್ಬರು ಮಹಿಳೆಯರ ದಾಸವಾಳ ವ್ಯಾಮೋಹದ ಹಿಂದೆ ಅಪಾರ ಶ್ರದ್ಧೆ ಮತ್ತು ಸಹನೆಯ ಕಥನವಿದೆ.
ಪುಷ್ಪಾ ಸುರೇಶ್ ಸಾಗರದವರು. ಬಾಲ್ಯದಲ್ಲಿಯೇ ಮಲೆನಾಡಿಗೆ ಸಹಜವಾದ ಹೂವಿನ ಪ್ರೀತಿಯನ್ನು ಬೆಳೆಸಿಕೊಂಡ ಪುಷ್ಪಾ, ಮದುವೆಯಾಗಿ ಕಾಂಕ್ರೀಟ್ ಉದ್ಯಾನ ನಗರಿಗೆ ಬಂದರೂ ಅವರೊಳಗಿನ ಪುಷ್ಟವ್ಯಾಮೋಹ ಮಾತ್ರ ಕೊಂಚವೂ ಇಂಗಿರಲಿಲ್ಲ.
‘ಮನೆಯಲ್ಲಿ ಖಾಲಿ ಕುಳಿತುಕೊಳ್ಳುವುದು ಬೇಸರವಾಗಿ ಹೂವಿನ ಗಿಡ ಬೆಳೆಸಲು ಆರಂಭಿಸಿದೆ. ನನಗೆ ದಾಸವಾಳ ಮೆಚ್ಚಿನ ಹೂವಾಗಿದ್ದರಿಂದ ಅದನ್ನೇ ಹೆಚ್ಚಾಗಿ ಬೆಳೆಸಿದೆ. ಹೀಗೆ ಸಮಯ ಕಳೆಯಲು ಆರಂಭಿಸಿದ ಕೆಲಸ ನೀಡುವ ಸಂತೋಷದ ಅರಿವಾದಾಗ ಅದು ಬದುಕಿನ ಭಾಗವಾಗಿ ಬದಲಾಯಿತು’ ಎಂದು ಎಂಟು ವರ್ಷದ ಹಿಂದೆ ತಾವು ದಾಸವಾಳ ಹೂವಿನ ಲೋಕದೊಳಗೆ ಅಡಿಯಿಟ್ಟಿದ್ದನ್ನು ನೆನಪಿಸಿಕೊಳ್ಳುತ್ತಾರೆ ಪುಷ್ಪಾ.
ತಮ್ಮ ಪ್ರೀತಿಯ ದಾಸವಾಳಗಳ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಹುಡುಕಹೊರಟಾಗ ಅವರ ಕಣ್ಣೆದುರು ದಾಸವಾಳ ಮಾಹಿತಿಯ ಮತ್ತೊಂದು ಲೋಕವೇ ತೆರೆದುಕೊಂಡಿತು. ದಾಸವಾಳ ಬೀಜ ಬಿಡುತ್ತದೆ ಎಂದು ಅವರಿಗೆ ಗೊತ್ತಾಗಿದ್ದೇ ಅಂತರ್ಜಾಲದಿಂದ. ಅಲ್ಲಿಂದಲೇ ಮಾಹಿತಿಗಳನ್ನು ತೆಗೆದುಕೊಂಡು ತಮ್ಮ ಮನೆಯಲ್ಲಿನ ದಾಸವಾಳದ ಪರಾಗಸ್ಪರ್ಶಕ್ಕೆ ತೊಡಗಿದರು.
ಪುಷ್ಪಾ ಪ್ರಯೋಗಗಳು ಫಲ ನೀಡಿ ಅವರ ಮನೆಯಂಗಳದ ದಾಸವಾಳ ಗಿಡಕ್ಕೂ ಬೀಜವಾಯ್ತು. ತಮ್ಮ ಆರಂಭಿಕ ಪ್ರಯೋಗ ಫಲ ನೀಡಿದ ಖುಷಿಯಲ್ಲಿಯೇ ದಾಸವಾಳ ಬೀಜಗಳನ್ನು ಬಿತ್ತಿದರು ಸಹ. ಆದರೆ ಚಿಕ್ಕ ಚಿಕ್ಕ ಪಾಟ್‌ಗಳಲ್ಲಿ ಬೀಜ ಬಿತ್ತಿ ಕಾದದ್ದೇ ಬಂತು. ವಾರ ಎರಡು ವಾರ ತಿಂಗಳುಗಳ ಕಾಲ ಜತನದಿಂದ ಕಾದದ್ದೇ ಬಂತು. ಬೀಜ ಮೊಳಕೆಯೊಡೆಯುವ ಯಾವ ಲಕ್ಷಣಗಳೂ ಕಾಣದಾಗ ನಿರಾಸೆಯಿಂದ ಅತ್ತ ಲಕ್ಷ್ಯ ಕೊಡುವುದನ್ನೇ ನಿಲ್ಲಿಸಿದರು. ಆದರೆ ಮೂರು ತಿಂಗಳ ನಂತರ ಆ ಪಾಟ್‌ನತ್ತ ಕಣ್ಣು ಹಾಯಿಸಿದಾಗ ಪುಷ್ಪಾ ಅವರಿಗೆ ಅಚ್ಚರಿಯೊಂದು ಕಾದಿತ್ತು. ಮೂರು ಪುಟ್ಟ ಪುಟ್ಟ ದಾಸವಾಳ ಸಸಿಗಳು ಮಣ್ಣಿನೊಡಲಿನಿಂದ ತಲೆಯೆತ್ತಿ ನಿಂತಿದ್ದವು.
‘ಮೂರು ತಿಂಗಳು ಕಳೆದ ಮೇಲೆ ಸಸಿ ಮೊಳಕೆಯೊಡೆದಿದ್ದನ್ನು ನೋಡಿ ಅದೆಷ್ಟು ರೋಮಾಂಚನವಾಯಿತೆಂದರೆ ಆ ಕ್ಷಣಗಳೂ ಇನ್ನೂ ಕಣ್ಣ ಮುಂದೆ ಹಾಗೇ ಇದೆ. ಅದೊಂದು ಅವಿಸ್ಮರಣೀಯ ಘಟನೆ’ ಎನ್ನುವಾಗ ಪುಷ್ಪಾ ಮುಖ ಪುಳಕದ ನೆನಪಿನಿಂದ ಅರಳುತ್ತದೆ.
ಹೀಗೆ ದಾಸವಾಳ ಬೀಜದಿಂದ ಸಸಿ ಮಾಡುವ ವಿದ್ಯೆ ಕರಗತವಾದ ಮೇಲೆ ಅದರಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡಲು ತೊಡಗಿದರು. ಇವರ ಮನೆಯ ಸಮೀಪದ ಶ್ಯಾಮಲಾ ಅವರಿಗೂ ಹೂವಿನ ಗಿಡ ಬೆಳೆಸುವಲ್ಲಿ ಆಸಕ್ತಿಯಿದ್ದುದರಿಂದ ಅವರೂ ಪುಷ್ಪಾ ಅವರ ಜತೆ ಸೇರಿಕೊಂಡರು. ಸಮಾನ ಆಸಕ್ತಿಯ ಜತೆ ಇವರಿಬ್ಬರಲ್ಲಿಯೂ ಉತ್ಸಾಹವನ್ನು ಹೆಚ್ಚಿಸಿತು. ಇದರ ಪರಿಣಾಮವಾಗಿ ಕಳೆದ ಎಂಟು ವರ್ಷಗಳಲ್ಲಿ ಪುಷ್ಪಾ ಮತ್ತು ಶ್ಯಾಮಲಾ ಸುಮಾರು 8000ಕ್ಕೂ ಅಧಿಕ ದಾಸವಾಳ ಅಭಿವೃದ್ಧಿಪಡಿಸಿದ್ದಾರೆ.
‘ಸುಮಾರು ನೂರು ಸಸಿ ಮಾಡಿದರೆ ಅವುಗಳಲ್ಲಿ ಎಂಟೋ ಹತ್ತೊ ಒಳ್ಳೆಯ ಗುಣಮಟ್ಟದ ಹೂಗಳನ್ನು ಬಿಡುತ್ತವೆ. ಅದಕ್ಕಾಗಿ ಆ ನೂರು ಹೂಗಳನ್ನು ಹೂ ಬಿಡುವವರೆಗೂ ಪಾಲನೆ ಪೋಷಣೆ ಮಾಡುತ್ತಾ ಕಾಯಬೇಕು’ ಎಂದು ದಾಸವಾಳ ನಿರ್ವಹಣೆಯ ಬಗ್ಗೆ ವಿವರಿಸುತ್ತಾರೆ ಪುಷ್ಪಾ.
ಜಾಗತಿಕ ದಾಸವಾಳ ಲೋಕದಲ್ಲಿ
ದಾಸವಾಳ ಹೂವಿನ ಬಗ್ಗೆ ಅಂತರ್ಜಾಲದ ಮೂಲಕ ಮಾಹಿತಿ ಪಡೆದುಕೊಳ್ಳುವ ಕುತೂಹಲ ಇವರಿಗೆ ‘ಇಂಟರ್‌ನ್ಯಾಷನಲ್ ಹೈಬಿಸ್ಕಸ್ ಸೊಸೈಟಿ’ (ಐಎಚ್‌ಎಸ್)ಯನ್ನೂ ಪರಿಚಯಿಸಿತು. ಐಎಚ್‌ಎಸ್ ಹೈಬ್ರಿಡ್ ತಳಿ ದಾಸವಾಳ ಹೂವಿನ ಬಗ್ಗೆಯೇ ಇರುವ ಅಂತರರಾಷ್ಟ್ರೀಯ ವೇದಿಕೆ. ಪುಷ್ಪಾ ಮತ್ತು ಶ್ಯಾಮಲಾ ಈ ಸೊಸೈಟಿ ಬಗ್ಗೆ ಮಾಹಿತಿ ತಿಳಿದದ್ದೇ ಅದರ ಸದಸ್ಯರಾಗಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡರು.
ಸದ್ಯಕ್ಕೆ ಪುಷ್ಪಾ ಅವರು ಅಂತರರಾಷ್ಟ್ರೀಯ ಹೈಬಿಸ್ಕಸ್ ಸೊಸೈಟಿಯ ಭಾರತದ ಪ್ರತಿನಿಧಿಯಾಗಿದ್ದಾರೆ.
ಐಎಚ್‌ಎಸ್ ನಡೆಸುವ ಅಂತರರಾಷ್ಟ್ರೀಯ ದಾಸವಾಳ ಪುಷ್ಪ ಸ್ಪರ್ಧೆಗಳಲ್ಲಿ ಶ್ಯಾಮಲಾ ಮತ್ತು ಪುಷ್ಪಾ ಅವರೂ ಭಾಗವಹಿಸುತ್ತಿದ್ದು, ಪುಷ್ಪಾ ಅವರ ‘ಬಾಬ್ ಕ್ಯಾರನ್’ ಎಂಬ ಹೆಸರಿನ ದಾಸವಾಳ ಹೂವಿಗೆ ಪ್ರಶಸ್ತಿಯ ಗರಿಮೆಯೂ ಸಂದಿದೆ.
‘ಬಾಬ್ ಕ್ಯಾರನ್’ ಅಮೆರಿಕದ ಫ್ಲೋರಿಡಾದಲ್ಲಿರುವ ನನ್ನ ಸ್ನೆಹಿತರಷ್ಟೇ ಅಲ್ಲ. ಗುರುಗಳೂ ಹೌದು. ಅವರಿಂದ ಸಾಕಷ್ಟು ಕಲಿತಿದ್ದೇನೆ. ಆದ್ದರಿಂದ ಪ್ರಶಸ್ತಿ ವಿಜೇತ ದಾಸವಾಳಕ್ಕೆ ಅವರ ಹೆಸರನ್ನೇ ಇಟ್ಟಿದ್ದೇನೆ’ ಎನ್ನುತ್ತಾರೆ ಪುಷ್ಪಾ.
ಐಎಚ್‌ಎಸ್ ಪ್ರಕಟಿಸುವ ತ್ರೈಮಾಸಿಕ ಪತ್ರಿಕೆಯಲ್ಲಿ ಪುಷ್ಪಾ ಮತ್ತು ಶ್ಯಾಮಲಾ ಅವರ ದಾಸವಾಳ ಪ್ರಯೋಗಗಳ ಬಗ್ಗೆ ಲೇಖನಗಳು ಪ್ರಕಟವಾಗಿರುವುದಲ್ಲದೇ, ಪತ್ರಿಕೆಯ ಮುಖಪುಟಕ್ಕೂ ಪುಷ್ಪಾ ಅಭಿವೃದ್ಧಿಪಡಿಸಿದ ದಾಸವಾಳ ಹೂವಿನ ಚಿತ್ರ ಆಯ್ಕೆಯಾಗಿದೆ.
ಅಂದಹಾಗೆ ಪುಷ್ಪಾ ಇದುವರೆಗೆ 39 ಮತ್ತು ಶ್ಯಾಮಲಾ 25 ಹೊಸ ಬಗೆಯ ದಾಸವಾಳಗಳನ್ನು ಐಎಚ್‌ಎಸ್‌ನಲ್ಲಿ ನೋಂದಣಿ ಮಾಡಿದ್ದಾರೆ. ‘ಸಾವಿರಾರು ತಳಿಯ ದಾಸವಾಳಗಳನ್ನು ಬೆಳೆಸಿದ್ದರೂ ಎಲ್ಲವನ್ನೂ ನೋಂದಣಿ ಮಾಡಿಲ್ಲ. ಅತ್ಯುತ್ತಮ ಅನಿಸಿದ ಹೂಗಳನ್ನಷ್ಟೇ ನೋಂದಣಿ ಮಾಡಿದ್ದೇವೆ’ ಎಂದು ಅವರು ವಿವರಿಸುತ್ತಾರೆ.
ದಾಸವಾಳ ಅಭಿರುಚಿ ಅವರಿಗೆ ಜಾಗತಿಕ ಮಟ್ಟದಲ್ಲಿ ಸ್ನೇಹವಲಯವನ್ನು ಗಳಿಸಿಕೊಟ್ಟಿದೆ. ಅಮೆರಿಕಾ, ಫ್ರಾನ್ಸ್, ಇಟಲಿ, ಬಲ್ಗೇರಿಯಾ, ಚೀನಾ ಹೀಗೆ ಅನೇಕ ದೇಶದ ಜನರು ದಾಸವಾಳದ ಮೇಲಿನ ಪ್ರೀತಿಯ ಕಾರಣದಿಂದಲೇ ಸ್ನೇಹಿತರಾಗಿದ್ದಾರೆ.
ಆದರೆ ವಿದೇಶಗಳಲ್ಲಿ ನಮ್ಮ ದಾಸವಾಳಗಳಿಗೆ ಇದ್ದಷ್ಟು ಮಹತ್ವ, ಆಸಕ್ತಿ ನಮ್ಮ ದೇಶದಲ್ಲಿ ಸಿಗುತ್ತಿಲ್ಲ ಎಂಬ ನೋವೂ ಅವರಿಗಿದೆ. ‘ಅಲ್ಲೆಲ್ಲೋ ಅಮೆರಿಕಾದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ನಮ್ಮ ಹೂವುಗಳು ಬಹುಮಾನ ಪಡೆಯುವುದಕ್ಕಿಂತ ನಮ್ಮ ದೇಶ, ನಮ್ಮ ನಗರದಲ್ಲಿಯೇ ಅಂತಹ ಸ್ಪರ್ಧೆ, ಷೋಗಳು ನಡೆಯುವಂತಾಗಬೇಕು’ ಎಂಬುದು ಅವರ ಅಭಿಲಾಷೆ.
ಇದೊಂದು ಸುಂದರ ಜಗತ್ತು
ನನಗೆ ದಾಸವಾಳ ಗಿಡಕ್ಕೆ ಬೀಜವಾಗುತ್ತದೆ ಎಂದು ತಿಳಿದಿದ್ದೇ ಪುಷ್ಪಾ ಅವರಿಂದ. ಅಲ್ಲಿಂದ ಆಸಕ್ತಿ ಬೆಳೆಸಿಕೊಂಡ ನಾನು ಖಾಲಿ ಇರುವಾಗ ಅದರ ಬಗೆಗೆ ಇನ್ನಷ್ಟು ಮಾಹಿತಿಗಳನ್ನು ಓದಿ ತಿಳಿದುಕೊಂಡೆ. ನಂತರ ನಾನೂ ದಾಸವಾಳ ಬೆಳೆಸುವ ಆಸೆಯಾಗಿ ಪುಷ್ಪಾ ಅವರ ಮನೆಗೆ ಹೋಗಿ ಮಾಹಿತಿ ಪಡೆದುಕೊಂಡು ಬೆಳೆಸಲು ಶುರುಮಾಡಿದೆ.
ಆಗಿನಿಂದ ನಾವಿಬ್ಬರೂ ಒಟ್ಟಿಗೇ ಕೆಲಸ ಮಾಡುತ್ತಿದ್ದೇವೆ. ಮಣ್ಣು, ಗೊಬ್ಬರದ ವೆಚ್ಚವನ್ನು ಸಮವಾಗಿ ಹಂಚಿಕೊಳ್ಳುತ್ತೇವೆ. ಪರಾಗ, ಕಸಿ, ಬೀಜ ನಿರ್ವಹಣೆ ಹೀಗೆ ಎಲ್ಲ ಕೆಲಸಗಳನ್ನೂ ಒಟ್ಟಿಗೇ ಮಾಡುತ್ತೇವೆ. ಗಂಟೆಗಟ್ಟಲೆ ಅವುಗಳ ಬಗ್ಗೆ ಚರ್ಚಿಸುತ್ತೇವೆ. ಇದೊಂದು ಅತ್ಯಂತ ಸುಂದರವಾದ ಸಂತೋಷ ಕೊಡುವ ಜಗತ್ತು ನಮಗೆ.
–ಶ್ಯಾಮಲಾ