ಚಾಮರಾಜನಗರ: ಮೈಸೂರು ದಸರಾದ ಪಟ್ಟದ ಆನೆ ‘ಗಜೇಂದ್ರ’ನನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ.
ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ಕೆ. ಗುಡಿ ಆನೆ ಶಿಬಿರದಲ್ಲಿ ಮದವೇರಿದ ‘ಗಜೇಂದ್ರ’ನ ದಾಂದಲೆಗೆ ‘ಶ್ರೀರಾಮ’ ಆನೆ ಹಾಗೂ ಒಬ್ಬ ಕಾವಾಡಿಗ ಬಲಿಯಾಗಿದ್ದರು. ಭಾನುವಾರದಿಂದ ಆನೆಯ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಮಂಗಳವಾರ ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವೈದ್ಯರು ಮತ್ತೆ ಕಾರ್ಯಾಚರಣೆ ಆರಂಭಿಸಿದರು. ‘ಗಜೇಂದ್ರ’ ಮೂರ್ನಾಲ್ಕು ಕಡೆಯಲ್ಲಿ ಲದ್ದಿ ಹಾಕಿತ್ತು. ಈ ಲದ್ದಿಯಲ್ಲಿ ಹುರುಳಿ ಅಂಶವಿರುವುದು ಪತ್ತೆಯಾಯಿತು. ಆ ಮಾರ್ಗವಾಗಿ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಯಿತು.
ಸತತ ಹುಡುಕಾಟ ನಡೆಸುತ್ತಿದ್ದ ಸಿಬ್ಬಂದಿಗೆ ಬಿಳಿಗಿರಿರಂಗನ ಬೆಟ್ಟದ ಮುತ್ತುಗದಗದ್ದೆ ಪೋಡಿಗೆ ಸಮೀಪ ಇರುವ ಹೆಬ್ಬಾವರೆ ಅರಣ್ಯ ಪ್ರದೇಶದಲ್ಲಿ ಮಧ್ಯಾಹ್ನದ ವೇಳೆಗೆ ‘ಗಜೇಂದ್ರ’ ಕಾಣಿಸಿದ. ಕೆಲ ಹೊತ್ತು ಚಲನವಲನ ವೀಕ್ಷಿಸಿದ ವೈದ್ಯರ ತಂಡ ಬಂದೂಕಿನಿಂದ ಅರಿವಳಿಕೆ ಮದ್ದು ಹೊಡೆದರು. 10 ನಿಮಿಷದವರೆಗೆ ‘ಗಜೇಂದ್ರ’ ಮಿಸುಕಾಡದೆ ನಿಂತುಕೊಂಡ.
ಬಳಿಕ ಮಾವುತ ಕೃಷ್ಣಪ್ಪ ಆನೆ ಬಳಿಗೆ ತೆರಳಿ ಕಾಲಿಗೆ ಸರಪಳಿ ಬಿಗಿದು ಅದರ ಮೇಲೆ ಕುಳಿತುಕೊಂಡರು. ಅಲ್ಲಿಂದ 2 ಕಿ.ಮೀ. ದೂರದಲ್ಲಿದ್ದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಆವರಣಕ್ಕೆ ಕರೆತರುವಾಗ ‘ಗಜೇಂದ್ರ’ನಿಂದ ಕೊಂಚ ಪ್ರತಿರೋಧ ಕಂಡು ಬಂತು.
ವಿಜಿಕೆಕೆ ಆವರಣದಿಂದ ಆತನನ್ನು ಲಾರಿಗೆ ಹತ್ತಿಸಿ ನೇರವಾಗಿ ಕೆ. ಗುಡಿ ಆನೆ ಶಿಬಿರಕ್ಕೆ ತರಲು ಸಿಬ್ಬಂದಿ ಮುಂದಾದರು. ಈ ವೇಳೆ ದಾರಿ ಮಧ್ಯದಲ್ಲಿ ಆನೆಗಳ ಹಿಂಡು ಎದುರಾಯಿತು. ಪಟಾಕಿ ಸಿಡಿಸಿ ಅವುಗಳನ್ನು ಕಾಡಿನೊಳಕ್ಕೆ ಓಡಿಸಲಾಯಿತು. ಶಿಬಿರಕ್ಕೆ ಗಜೇಂದ್ರನನ್ನು ಕರೆತಂದು ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಲಾಗಿದೆ.
ಮದವೇರಿದ್ದ ‘ಗಜೇಂದ್ರ’ ಅಂಡಲೆಯುತ್ತಿದ್ದ ಪರಿಣಾಮ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿ ದ್ವಿಚಕ್ರವಾಹನಗಳು ಹಾಗೂ ಪ್ರವಾಸಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ರಕ್ಷಿತಾರಣ್ಯದಲ್ಲಿ ಸೋಲಿಗರ 22 ಪೋಡುಗಳಿವೆ. 1,500 ಕುಟುಂಬಗಳು ನೆಲೆ ನಿಂತಿವೆ. ಸೋಲಿಗರಿಗೂ ಮುನ್ಸೂಚನೆ ನೀಡಲಾಗಿತ್ತು. ಈಗ ‘ಗಜೇಂದ್ರ’ನನ್ನು ಸೆರೆ ಹಿಡಿದಿರುವುದರಿಂದ ಗಿರಿಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ಲಿಂಗರಾಜ, ವೈದ್ಯರಾದ ಡಾ.ಪ್ರಯಾಗ್, ಡಾ.ನಾಗರಾಜ್, ಡಾ.ಉಮಾಶಂಕರ್ ಹಾಗೂ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮುಖ್ಯಾಂಶಗಳು
* ‘ಗಜೇಂದ್ರ’ನ ದಾಂದಲೆಗೆ ‘ಶ್ರೀರಾಮ’ ಆನೆ, ಒಬ್ಬ ಕಾವಾಡಿಗ ಬಲಿಯಾಗಿದ್ದರು
* ಬಂದೂಕು ಮೂಲಕ ಅರಿವಳಿಕೆ ಮದ್ದು ನೀಡಿದ್ದ ವೈದ್ಯರ ತಂಡ