ಕರ್ನಾಟಕ

ರವಿ ಸಾವು: ಸಿಐಡಿ ತನಿಖೆಗೆ

Pinterest LinkedIn Tumblr

NEWS

ಬೆಂಗಳೂರು: ‘ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರ ಅಸಹಜ ಸಾವಿನ ಪ್ರಕರಣ ವನ್ನು ಸಿಐಡಿ ತನಿಖೆಗೆ  ಒಪ್ಪಿಸಲಾಗು ವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ  ಪ್ರಕಟಿಸಿದರು.

ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು, ‘ಪ್ರಕರಣದ ಕುರಿತು ಸಿಬಿಐ ತನಿಖೆಯನ್ನೇ ನಡೆಸಬೇಕು’ ಎಂದು ಒತ್ತಾಯಿಸಿ ಧರಣಿ ನಡೆಸಿದರು.

‘ದಕ್ಷ ಅಧಿಕಾರಿಯಾಗಿದ್ದ ರವಿ ಅವರ ಅಸಹಜ ಸಾವು ದಿಗ್ಭ್ರಾಂತಿ ಉಂಟು ಮಾಡಿದೆ. ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರಬರಬೇಕು ಎನ್ನುವುದು ನಮ್ಮ ಅಪೇಕ್ಷೆಯಾಗಿದೆ. ಹೀಗಾಗಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲು ನಿರ್ಧರಿಸಿದ್ದೇವೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ಘಟನೆ ವರದಿಯಾದ ತಕ್ಷಣವೇ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಬೆರಳಚ್ಚು ವಿಭಾಗದ ತಜ್ಞರು ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದು, ಮಾಹಿತಿ ಕಲೆ ಹಾಕಿದ್ದಾರೆ. ತನಿಖೆಗೆ ತಕ್ಷಣ ವಿಶೇಷ ತಂಡ ರಚಿಸಲಾಗಿದೆ. ಇದುವರೆಗೆ ತನಿಖಾಧಿಕಾರಿಗಳು ಸಂಗ್ರಹಿಸಿದ ಎಲ್ಲ ವಿವರವನ್ನು ಸದ್ಯ ಬಹಿರಂಗಪಡಿಸಲು ಆಗುವುದಿಲ್ಲ’ ಎಂದು ತಿಳಿಸಿದರು.

ಪ್ರಕರಣ ಕುರಿತಂತೆ ಗೃಹ ಸಚಿವ ಕೆ.ಜೆ. ಜಾರ್ಜ್‌ ಸಹ ಸದನದಲ್ಲಿ ಲಿಖಿತ ಹೇಳಿಕೆ ನೀಡಿದರು. ‘ಘಟನಾ ಸ್ಥಳದಲ್ಲಿ ಮೂರು ಮೊಬೈಲ್‌, ಒಂದು ಐ ಪಾಡ್‌ ಹಾಗೂ ಪರ್ಸ್‌ ಸಿಕ್ಕಿವೆ. ತನಿಖಾ ವಿಧಿಗಳನ್ನು ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಲಾಗಿದೆ’ ಎಂದು ಅವರು ಹೇಳಿದರು.

ಮಧ್ಯಾಂತರ ವರದಿ:‘ಅಧಿವೇಶನ ಮುಗಿಯುವ ಮುನ್ನವೇ ತನಿಖಾ ತಂಡದಿಂದ ಮಧ್ಯಾಂತರ ವರದಿ ಪಡೆದು ಸದನದ ಮಂದಿಡಲಾಗುವುದು. ಸಿಐಡಿ ತನಿಖಾ ಪ್ರಕ್ರಿಯೆಯು ಒಂದುವೇಳೆ ಸದಸ್ಯರಿಗೆ ಸಮಾಧಾನ ಉಂಟು ಮಾಡದಿದ್ದರೆ ಸಿಬಿಐ ತನಿಖೆ ನಡೆಸುವ ಕುರಿತು ಚಿಂತಿಸಲಾಗುವುದು’ ಎಂದು ತಿಳಿಸಿದರು.

ಬೆಳಿಗ್ಗೆ ಸದನ ಸೇರುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರು, ‘ದಕ್ಷ ಅಧಿಕಾರಿಯಾಗಿದ್ದ ರವಿ ಅವರ ಸಾವು ಗಂಭೀರ ಪ್ರಕರಣ ಆಗಿದ್ದರಿಂದ ತಕ್ಷಣ ಚರ್ಚೆಗೆ ಅವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿ ದರು. ಅದಕ್ಕೆ ಸಮ್ಮತಿ ವ್ಯಕ್ತಪಡಿಸಿದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಪ್ರಶ್ನೋತ್ತರ ಅವಧಿಯನ್ನು ಮುಂದೆ ಹಾಕಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲ 18  ಶಾಸಕರು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಅದಕ್ಕೆ ಒಪ್ಪದಿದ್ದಾಗ ವಿರೋಧ ಪಕ್ಷದ ಸದಸ್ಯರು ಧರಣಿ ಆರಂಭಿಸಿದರು.

***
ರವಿ ಅವರ ಮಾವ ಹನುಮಂತರಾಯಪ್ಪ ನಮ್ಮ (ಕಾಂಗ್ರೆಸ್‌) ಪಕ್ಷದ ಮುಖಂಡರು. ಅಳಿಯನನ್ನು ಕೋಲಾರದಿಂದ ವರ್ಗ ಮಾಡಬೇಕು ಎನ್ನುವ ಬೇಡಿಕೆ ಇಟ್ಟಿದ್ದರಿಂದ ಆಗ ಖಾಲಿಯಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಹುದ್ದೆಗೆ ನಾನೇ ವರ್ಗಾವಣೆ ಮಾಡಿದ್ದೆ .

-ಸಿದ್ದರಾಮಯ್ಯ, ಮುಖ್ಯಮಂತ್ರಿ

***
ವೈಯಕ್ತಿಕ ಕಾರಣಗಳಿಂದ ಈ ಆತ್ಮಹತ್ಯೆ ನಡೆದಿದೆ ಎನ್ನುವುದು ಇದುವರೆಗಿನ ತನಿಖೆಯಿಂದ ಗೊತ್ತಾಗಿದೆ.

-ಕೆ.ಜೆ. ಜಾರ್ಜ್‌, ಗೃಹ ಸಚಿವ

Write A Comment