-ಶಶಿಧರ್ ಭಾರಿಘಾಟ್
ನೃತ್ಯ ಕ್ಷೇತ್ರದಲ್ಲಿ ರುಕ್ಮಿಣಿದೇವಿ ಅರುಂಡೇಲ್ ಅವರ ಹೆಸರು ಚಿರಪರಿಚಿತ ಮತ್ತು ಚಿರಸ್ಥಾಯಿ. ಅವರ ಶಿಷ್ಯರಲ್ಲಿ ಒಬ್ಬರಾಗಿದ್ದ ಪ್ರೊ. ಎಂ.ಆರ್. ಕೃಷ್ಣಮೂರ್ತಿ ತಮ್ಮ ಗುರುವಿನ ಸವಿನೆನಪಿಗಾಗಿ ‘ರುಕ್ಮಿಣಿ ಕಲ್ಯಾಣ’ ಎಂಬ ನೃತ್ಯರೂಪಕವನ್ನು ಆಯೋಜಿಸಿದ್ದಾರೆ.
ತಮ್ಮ ಹದಿನೈದನೇ ವಯಸ್ಸಿನಲ್ಲಿಯೇ ಕಲಾಕ್ಷೇತ್ರದ ಮೆಟ್ಟಿಲು ಹತ್ತಿದವರು ಕೃಷ್ಣಮೂರ್ತಿ. ಈಗ ಕಲಾಕ್ಷೇತ್ರದ ಪರಂಪರೆಯನ್ನು ಬೆಂಗಳೂರಿನಲ್ಲಿ ಕಲಾಕ್ಷಿತಿಯ ಮೂಲಕ ಮುಂದುವರೆಸುತ್ತಿದ್ದಾರೆ.
ರುಕ್ಮಿಣಿದೇವಿ ಅವರಿಗೆ ಕಲೆ ದೈವದತ್ತವಾಗಿ ಒಲಿದಿತ್ತು. ಅವರಲ್ಲಿ ಸೇವಾ ಮನೋಭಾವ ಇತ್ತು. ತಾವು ಗಳಿಸಿಕೊಂಡ ಕಲೆಯನ್ನು ನಿಸ್ವಾರ್ಥತೆಯಿಂದ ಶಿಷ್ಯರಿಗೆ ಧಾರೆ ಎರೆದರು. ಇದನ್ನು ಮುಂದಿನ ಪೀಳಿಗೆ ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ ಕೃಷ್ಣಮೂರ್ತಿ ಅವರು ಪ್ರತಿವರ್ಷ ರುಕ್ಮಿಣಿ ಅರುಂಡೇಲ್ ಅವರ ಸ್ಮರಣಾರ್ಥ ನೃತ್ಯ ಕಾರ್ಯಕ್ರಮ ನಡೆಸುತ್ತಾರೆ.
ಈ ಬಾರಿ ಕಲಾಕ್ಷಿತಿ ಸಂಸ್ಥೆಯ ಬೆಳ್ಳಿ ಹಬ್ಬವೂ ಸೇರಿ ಇದೇ 20ರಿಂದ 22ರವರೆಗೆ ಮೂರು ದಿನಗಳ ಕಾಲ ವಿಶೇಷ ನೃತ್ಯಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರುಕ್ಮಿಣಿದೇವಿ ಅವರು ಸಂಯೋಜಿಸಿದ ಪ್ರತಿಯೊಂದು ನೃತ್ಯ, ನೃತ್ಯನಾಟಕ, ನೃತ್ಯರೂಪಕಗಳು ಅದ್ಭುತ ಕಲಾಕೃತಿಗಳು. ಅವರ ಸಂಯೋಜನೆಗಳೆಲ್ಲವೂ ಅರ್ಥಪೂರ್ಣ ಹಾಗೂ ಪರಿಪೂರ್ಣ, ಪಾತ್ರಾಭಿನಯಕ್ಕೆ ಪ್ರಾಧಾನ್ಯ. ಒಂದು ವಿಸ್ತಾರವಾದ ಅನುಭವವನ್ನು ಸಹೃದಯ ಪ್ರೇಕ್ಷಕರಿಗೆ ನೀಡಲು ಸಜ್ಜಾಗಿದ್ದಾರೆ ಕೃಷ್ಣಮೂರ್ತಿ.
ರುಕ್ಮಿಣಿದೇವಿ ಅವರ ಬಗ್ಗೆ: ಭರತನಾಟ್ಯ ಒಂದು ದೈವಿಕ ಕಲೆ ಎಂದೇ ನಂಬಿದ್ದವರು ರುಕ್ಮಿಣಿದೇವಿ ಅರುಂಡೇಲ್. ಪರಂಪರಾಗತವಾಗಿ ಬೆಳೆದು ಬಂದ ಈ ಅಪೂರ್ವ ಕಲೆಗೆ ಸಾಮಾಜಿಕ ಮಾನ್ಯತೆಯನ್ನು ತಂದುಕೊಟ್ಟು, ಆಗಿನ ಮದ್ರಾಸಿನಲ್ಲಿ ಕಲಾಕ್ಷೇತ್ರ ಸಂಸ್ಥೆಯನ್ನು ಸ್ಥಾಪಿಸಿ, ಅದುವರೆಗೂ ನಿರ್ದಿಷ್ಟ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಭರತನಾಟ್ಯವನ್ನು ಸಮಾಜದ ಎಲ್ಲಾ ವರ್ಗ ಹಾಗೂ ಸಮುದಾಯಗಳಿಗೂ ತಲುಪಿಸುವಂತಹ ಮಹತ್ಕಾರ್ಯವನ್ನು ಮಾಡಿದರು.
ಆ ಕಲೆಗೆ ಒಂದು ಸಾರ್ವತ್ರಿಕ ಮಾನ್ಯತೆಯನ್ನು ತಂದು ಕೊಡುವ ಮೂಲಕ ಸಾಂಸ್ಕೃತಿಕ ಕ್ರಾಂತಿಯನ್ನೇ ಹುಟ್ಟುಹಾಕಿದರು. ಭರತನಾಟ್ಯವನ್ನು ಭಕ್ತಿಪರಂಪರೆಯ ಮುಂದುವರಿಕೆಯಾಗಿ ಬೆಳೆಸಿ ಒಂದು ಪ್ರತಿಷ್ಠಿತ ಕಲೆಯ ಸ್ಥಾನಮಾನವನ್ನು ಕಲ್ಪಿಸಿಕೊಟ್ಟರು ರುಕ್ಮಿಣಿದೇವಿ ಅರುಂಡೇಲ್.