ಡಿಕೆ ರವಿ ಅವರ ಸಾವಿನ ಪ್ರಕರಣವನ್ನು ಸಿಬಿಐ ಗೆ ನೀಡಲು ಕಾಂಗ್ರೆಸ್ ಸರ್ಕಾರ ಮೀನಾಮೇಷ ಎಣಿಸುತ್ತಿರುವ ನಡುವೆಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ರವಿ ಅವರ ಪತ್ನಿ ಕುಸುಮಾ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು ತೀವೃ ಕುತೂಹಲ ಕೆರಳಿಸಿದೆ.
ರವಿ ಅವರ ಪತ್ನಿ ಕುಸುಮಾ ಅವರಿಗೆ ದೂರವಾಣಿ ಕರೆ ಮಾಡಿದ ಸೋನಿಯಾಅವರು ರವಿ ಅವರ ಸಾವಿನಿಂದ ದುಃಖದಲ್ಲಿರುವ ರವಿ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೇ ಪ್ರಕರಣದ ಸತ್ಯಾಸತ್ಯತೆಯನ್ನು ಬೆಳಕಿಗೆ ತರಲು ನಿಷ್ಪಕ್ಷಪಾತ ತನಿಖೆ ನಡೆಸುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ಈ ಸಮಯದಲ್ಲಿ ರವಿ ಅವರ ಮಾವ ಹನುಮಂತರಾಯಪ್ಪ ಅವರು ಈ ಪ್ರಕರಣದ ವಿಚಾರದಲ್ಲಿ ಸರ್ಕಾರ ವರ್ತಿಸುತ್ತಿರುವ ರೀತಿಯ ಬಗೆಗೆ ಗಮನ ಸೆಳೆದರು ಎನ್ನಲಾಗಿದ್ದು, ಇದಕ್ಕೆ ಸೋನಿಯಾ, ಸಿಬಿಐ ತನಿಖೆಗೆ ಒಪ್ಪಿಸುವಂತೆ ಸೂಚನೆ ನೀಡುತ್ತೇನೆ ಎಂದು ಪರೋಕ್ಷವಾಗಿ ತಿಳಿಸಿದರು ಎನ್ನಲಾಗಿದೆ.
ಈ ನಡುವೆ ರವಿ ಅವರ ಸಾವಿನಿಂದ ದಿಕ್ಕು ಕಾಣದಂತಾಗಿರುವ ರವಿ ಅವರ ತಂದೆ ತಾಯಿ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸದಿದ್ದ ಪಕ್ಷದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.