ಕರ್ನಾಟಕ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೂ ಸಿಸಿಟಿವಿ ಕಣ್ಗಾವಲು

Pinterest LinkedIn Tumblr

CCTV_Exam

ಬೆಂಗಳೂರು, ಮಾ.25: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನಕಲು ಮತ್ತಿತರ ಪರೀಕ್ಷಾ ಅವ್ಯವಹಾರಗಳು ನಡೆಯದಂತೆ ನಿಗಾ ವಹಿಸಲು ಅತಿಸೂಕ್ಷ್ಮ ಹಾಗೂ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿ ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವಿಧಾನಸಭೆಗೆ ತಿಳಿಸಿದರು.

ಶೂನ್ಯವೇಳೆಯಲ್ಲಿ ಜೆಡಿಎಸ್‌ನ ವೈಎಸ್‌ವಿ ದತ್ತಾ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಪರೀಕ್ಷೆ ಸಂದರ್ಭದಲ್ಲಿ ನಕಲು ತಡೆಯಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹಣದ ಲಭ್ಯತೆ ಇರುವ ಕಡೆ ಶಾಲೆಗಳಿಗೆ ಸಿಸಿಟಿವಿ ಅಳವಡಿಸಲು ಜಿಲ್ಲಾಧಿಕಾರಿಗಳು ಹಾಗೂ ಡಿಡಿಪಿಐಗಳಿಗೆ ಸೂಚಿಸಲಾಗಿದೆ ಎಂದರು.

ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪರಿಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸುವ ಮೂಲಕ ಪರೀಕ್ಷಾ ಅಕ್ರಮ ಅವಕಾಶವಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ಇದಕ್ಕೂ ಮುನ್ನ ದತ್ತಾ ಮಾತನಾಡಿ, ಪರೀಕ್ಷೆ ಪ್ರಾರಂಭವಾಗಲು ಮೂರು ನಾಲ್ಕು ದಿನವಿದ್ದು, ತರಾತುರಿಯಲ್ಲಿ ಸಿಸಿಟಿವಿ ಅಳವಡಿಕೆ ಮಾಡುವುದು ಬೇಡ ಎಂಬ ಸಲಹೆ ಮಾಡಿದರು. ಇದಕ್ಕೆ ಒಪ್ಪದ ಸಚಿವರು ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.

ನಾಳೆ ಸಭೆ:
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗೆಹರಿಸಲು ನಾಳೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಜೆಡಿಎಸ್‌ನ ಶಾರದಪೂರ್ಯ ನಾಯಕ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದರು. ಆರ್‌ಟಿಇ ಕಾಯ್ದೆಯಡಿ ಪ್ರವೇಶ ನೀಡಲು ಎದುರಾಗಿರುವ ಸಮಸ್ಯೆಗಳ ಪಟ್ಟಿಯೊಂದಿಗೆ ಸಭೆಗೆ ಬರುವಂತೆ ಎಲ್ಲ ೨೦೪ ಬಿಇಓಗಳಿಗೆ ಸೂಚಿಸಲಾಗಿದೆ. ಪ್ರವೇಶಕ್ಕೆ ನೀಡಿದ್ದ ಗಡುವನ್ನು ಮಾ.೨೦ರಿಂದ ೩೦ರವರೆಗೆ ವಿಸ್ತರಿಸಲಾಗಿದೆ ಎಂದರು. ಇದಕ್ಕೂ ಮುನ್ನ ಮಾತನಾಡಿದ ಶಾರದ ಕಂದಾಯ ಗ್ರಾಮದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ವಿರೋಧ ಶಾಲೆಗಳಿಂದಾಗುತ್ತಿದ್ದು, ಸರಿಪಡಿಸುವಂತೆ ಮನವಿ ಮಾಡಿದರು. ಶಾಸಕರ ಕಾಳಜಿಗೆ ಸ್ಪಂಧಿಸಿದ ಕಿಮ್ಮನೆ ಅವರು, ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಭೆ ಕರೆಯಲಾಗಿದೆ ಎಂದರು.

Write A Comment