ತುಮಕೂರು, ಏ.1- ಕಲ್ಪತರು ನಾಡಿನಲ್ಲಿ ಇಂದಿನ ಸೂರ್ಯೋದಯ ಎಂದಿನಂತಿರದೆ ವಿಶಿಷ್ಟವಾಗಿತ್ತು. ಇಡೀ ತುಮಕೂರು ಧನ್ಯತಾಭಾವದ ಹರ್ಷದಲ್ಲಿ ಮಿಂದೆದ್ದಿತ್ತು. ಎಳೆಯ ರವಿ ರಶ್ಮಿಗಳು ನಳನಳಿಸುತ್ತಿದ್ದ ತೆಂಗು ಗರಿಗಳ ನಡುವಿನಿಂದ ಶ್ರೀಮಠದ ಆವರಣದ ತುಂಬೆಲ್ಲ ಚಿನ್ನದ ಹೊಂಬಣ್ಣ ಲೇಪಿಸಿದ್ದವು. ಇದಕ್ಕೆಲ್ಲ ಕಾರಣ 108 ವಸಂತಗಳನ್ನು ಕಂಡ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಅಲ್ಲಿ ಚಿರ ಯುವಕರಂತೆ ಶಿವಪೂಜಾ ಕಾರ್ಯದಲ್ಲಿ ನಿರತರಾಗಿದ್ದರು. ಆ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಮತ್ತು ಆ ನಡೆದಾಡುವ ದೇವರ ಕೃಪೆಗೆ ಪಾತ್ರರಾಗಲು ಸಾವಿರಾರು ಸಂಖ್ಯೆಯ ಭಕ್ತರು ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಿದ್ದರು. ಎಲ್ಲೆಲ್ಲೂ ವೇದಗಳ ಘೋಷ, ಹೂವುಗಳ ಸುವಾಸನೆಯ ಪರಿಮಳ, ಆ ಪ್ರಶಾಂತತೆಗಳು ಭಕ್ತ ಸಾಗರದ ಮೇಲೆ ಮೋಡಿ ಮಾಡಿದ್ದವು.
108ರ ಹರೆಯದ ಶ್ರೀ ಸಿದ್ಧಗಂಗಾ ಕ್ಷೇತ್ರದ ಡಾ.ಶ್ರೀಗಳು ಪೂಜೆ ಮುಗಿಸಿ ಹೊರಬರುತ್ತಿದ್ದಂತೆ ಹುಣ್ಣಿಮೆ ಚಂದ್ರಮನ ಕಂಡ ಸಾಗರದಂತೆ ಇಡೀ ಭಕ್ತ ಸಮೂಹ ಅಲೆಅಲೆಯಾಗಿ ತಮ್ಮ ನೆಚ್ಚಿನ ದೇವರ ಪಾದಸ್ಪರ್ಶಕ್ಕೆ ಹಾತೊರೆಯುತ್ತಿದ್ದರು. ಇದಾವುದರ ಪರಿವೆಯೂ ಇಲ್ಲದೆ 108 ವಸಂತಗಳ ಆ ಮಾಗಿದ ಜೀವ ಎಂದಿನಂತೆ ತನ್ನ ಪೂಜಾದಿ ಕೈಂಕರ್ಯಗಳ ನಿತ್ಯಕಾಯಕದಲ್ಲಿ ತೊಡಗಿಕೊಂಡಿತ್ತು. ಕೊನೆಗೆ ಸೂರ್ಯೋದಯಾನಂತರ ನಿತ್ಯಕರ್ಮಗಳನ್ನು ಮುಗಿಸಿ ಹೊರಬಂದ ಸ್ವಾಮೀಜಿ ತಮ್ಮ ಪ್ರಿಯಭಕ್ತರಿಗೆ ದಿವ್ಯದರ್ಶನ ನೀಡಿದಾಗ ಭಕ್ತರ ಹರ್ಷೋದ್ಗಾರಗಳು ಮುಗಿಲು ಮುಟ್ಟಿತ್ತು. ಶ್ರೀಮಠದ ಆವರಣವೇ ಭಕ್ತರ ಜಯಘೋಷಗಳನ್ನು ಮಾರ್ದನಿಸುತ್ತಿತ್ತು. ಅವರ ನಿರ್ಮಲ ಮನಸ್ಸಿಗೆ ಕನ್ನಡಿಯಂತಿದ್ದ ಅಪಾರ ಲೋಕಾನುಭವದಿಂದ ತುಂಬಿ ತುಳುಕುವ ಮುಖಭಾವ, ಪರಿಶುದ್ಧ ಅಂತಃಕರಣವನ್ನು ಬಿಂಬಿಸುವ ಹೊಳೆಯುವ ಕಣ್ಣುಗಳು, ಆ ಕಣ್ಣುಗಳ ತುಂಬೆಲ್ಲ ಸೂಸುತ್ತಿದ್ದುದು ಪ್ರೀತಿ, ಕರುಣೆಗಳೇ. ಅವರನ್ನು ಕಾಣುತ್ತಿದ್ದಂತೆ ಸಹಸ್ರಾರು ತಲೆಗಳು ತಮಗೆ ತಾವೇ ಅವರ ಚರಣಗಳ ಅಡಿಯಲ್ಲಿ ಬಾಗಿ ಒಂದು ಕ್ಷಣ ಸಾರ್ಥಕ ಭಾವ ಮೆರೆದವು.
ಮಂತ್ರಘೋಷಗಳು, ಸುಶ್ರಾವ್ಯ ಗಾಯನ, ಕಳಸ-ಕನ್ನಡಿ ಹಿಡಿದ ನಾರಿಯರು, ಪೂರ್ಣಕುಂಭಗಳನ್ನು ಹೊತ್ತ ನೀರೆಯರು ನಡೆದಾಡುವ ದೇವರ ಮುಂದೆ ನಡೆದು ಜನ್ಮ ಸಾರ್ಥಕಪಡಿಸಿಕೊಂಡರು. ತ್ರಿವಿಧ ದಾಸೋಹಿ ದಿನನಿತ್ಯ ನಡೆದಾಡುವ ಪುಣ್ಯದ ಠಾವು ತುಮಕೂರಿನ ಸಿದ್ಧಗಂಗಾ ಪುಣ್ಯಕ್ಷೇತ್ರವಾದರೂ, ಇಡೀ ಕನ್ನಡ ನಾಡೇ ಇಂದಿನ ಈ ಅಮೃತ ಘಳಿಗೆಯಲ್ಲಿ ಪುಳಕಗೊಂಡಿತ್ತು. ನಾಡಿನ ಸಮಸ್ತ ಜನತೆಯ ಹಾರೈಕೆ ಒಂದೇ ಆಗಿತ್ತು. 108 ವರ್ಷ ತುಂಬಿದ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕ ನಿರತ ಕರ್ಮಯೋಗಿ ಶ್ರೀ ಸಿದ್ಧಗಂಗಾ ಶ್ರೀಗಳು ಇನ್ನೂ ನೂರೆಂಟು ಕಾಲ ಬಾಳಲಿ, ಇನ್ನೂ ಲಕ್ಷ ಲಕ್ಷ ಬಡವರ ಮನೆ-ಮನಗಳನ್ನು ಬೆಳಗಲಿ ಎಂಬುದು. ಇಂದಿನ ಈ ಪರಮ ಪಾವನ ಮುಹೂರ್ತಕ್ಕೆ ಹಲವಾರು ಗಣ್ಯರು, ಅಧಿಕಾರಿಗಳು, ಸಾರ್ವಜನಿಕರು, ಭಕ್ತರು, ನೂರಾರು ಮಂದಿ ವಿವಿಧ ಮಠಾಧೀಶರು, ಸಾವಿರಾರು ವಿದ್ಯಾರ್ಥಿಗಳು, ಸಿಬ್ಬಂದಿ ಸಾಕ್ಷಿಯಾದರು.
* ಸಿದ್ಧಗಂಗಾ ಶ್ರೀಗಳಿಗೆ ಸಿಎಂ ಶುಭಾಶಯ
ತುಮಕೂರು, ಏ.1- ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗುತ್ತಿರುವುದಕ್ಕೆ ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಶತಾಯುಷಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಂತಹ ಆಶೀರ್ವಾದವೇ ಎಂದರೆ ತಪ್ಪಾಗಲಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 108ನೆ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ದೂರವಾಣಿ ಮುಖಾಂತರ ಶುಭ ಕೋರಿದರು. ಸಚಿವ ಸಂಪುಟ ಸಭೆ ಇರುವುದರಿಂದ ಇಂದು ಶ್ರೀಗಳ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಮತ್ತೊಂದು ದಿನ ಶ್ರೀಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯುತ್ತೇನೆ. ಲಕ್ಷಾಂತರ ಮಂದಿಗೆ ಅನ್ನದಾನ, ವಿದ್ಯಾದಾನ ಮಾಡುತ್ತಿರುವ ಶ್ರೀಗಳ ಸೇವೆ ನಿಜಕ್ಕೂ ಅನನ್ಯ. ಇಂತಹ ಕಾಯಕ ಯೋಗಿಗೆ ದೇವರು ಮತ್ತಷ್ಟು ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು.
fShare
inShare
225K+