ಬೆಂಗಳೂರು: ಮೊನ್ನೆ ರಾತ್ರಿ ಅಂಟೆಂಡರ್ ನ ಗುಂಡೇಟಿಗೆ ಬಲಿಯಾದ ಪಿಯು ವಿದ್ಯಾರ್ಥಿನಿ ಗೌತಮಿ ಹತ್ಯೆ ಪ್ರಕರಣಕ್ಕೆ ಸಂಬಂಧ ಪ್ರಗತಿ ಕಾಲೇಜಿನ ಪ್ರಿನ್ಸಿಪಾಲ್ ಪ್ರಶಾಂತ್ ಅವರನ್ನು ಕಾಡುಗೋಡಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಗೌತಮಿ ಹತ್ಯೆ ಪ್ರಕರಣದಲ್ಲಿ ನಿರ್ಲಕ್ಷ್ಯವಹಿಸಿದ್ದ ಹಿನ್ನೆಲೆಯಲ್ಲಿ ಪ್ರಶಾಂತ್ ಅವರನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತಂತೆ ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಬುಧವಾರ ರಾತ್ರಿಯೇ ಪ್ರಗತಿ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಸೋಮ್ ಸಿಂಗ್ ಅವರನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದರು. ಅಲ್ಲದೇ, ಗೌತಮಿಗೆ ಗುಂಡಿಟ್ಟು ಕೊಂದ ಹಂತಕ ಮಹೇಶ್ ನನ್ನು ಮನೆ ಮಾಲೀಕರೇ ಪೊಲೀಸರಿಗೆ ಹಿಡಿದುಕೊಟ್ಟಿದ್ದರು.
ನಿನ್ನೆ ಮಧ್ಯಾಹ್ನ ಕಾಡುಗೋಡಿ ಪೊಲೀಸರು ಮಹೇಶ್ ನನ್ನು ಬಂಧಿಸಿದ್ದು, ಇಂದು ಆತನನ್ನು ಕೋರ್ಟ್ ಗೆ ಹಾಜರು ಪಡಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಶೂಟೌಟ್ ಪ್ರಕರಣ : ಹಂತಕ ಮಹೇಶನ ತೀವ್ರ ವಿಚಾರಣೆ
ಬೆಂಗಳೂರು: ಹಾಸ್ಟೆಲ್‌ಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದ ಹಂತಕ ಮಹೇಶ್‌ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಆತ ಬಳಸಿದ್ದ ನಾಡಪಿಸ್ತೂಲು ಎಲ್ಲಿಂದ ತಂದಿದ್ದು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಒಮ್ಮೆ ಶಿವಮೊಗ್ಗ, ಮತ್ತೊಮ್ಮೆ ಕೆ.ಆರ್.ಪುರಂನಲ್ಲಿ ಖರೀದಿಸಿದೆ ಎಂದು ಆರೋಪಿ ಉತ್ತರಿಸುತ್ತಿದ್ದಾನೆ. ಆದರೆ ಈತ ಚಾಲಾಕಿಯಾಗಿದ್ದು, ಸಾಕಷ್ಟು ಪುಂಡಾಟದಲ್ಲಿ ಈತ ತೊಡಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇಂದು ಮಧ್ಯಾಹ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದಿದ್ದು, ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಈ ಹಿಂದೆ ಆತ ಕೆಲಸ ಮಾಡುತ್ತಿದ್ದ ಸ್ಥಳಗಳಲ್ಲಿ ಈತನ ನಡವಳಿಕೆ ಮತ್ತು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಕಡೆಗೆ ಹೆಚ್ಚಾಗಿ ಹೋಗುತ್ತಿದ್ದರ ಬಗ್ಗೆಯೂ ಹಲವು ಗುಮಾನಿಗಳು ಮೂಡಿವೆ.
ಇದರ ನಡುವೆಯೇ ನಾಡಪಿಸ್ತೂಲು ಉತ್ತರ ಭಾರತದಲ್ಲಿ ತಯಾರಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಬಿಹಾರ, ಉತ್ತರ ಪ್ರದೇಶದಿಂದ ಬರುವವರು ಪಿಸ್ತೂಲು ಸೇರಿದಂತೆ ಕೆಲವು ಸ್ಫೋಟಕಗಳನ್ನು ಕೂಡ ತರುತ್ತಾರೆ. ಅದನ್ನು ಮಾರಾಟ ಮಾಡಿ ಪುನಃ ಸ್ವಂತ ಊರಿಗೆ ವಾಪಸ್ಸಾಗುತ್ತಾರೆ. ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಾಂಶುಪಾಲನ ಬಂಧನ: ಗೌತಮಿ ಹತ್ಯೆ ಪ್ರಕರಣದಲ್ಲಿ ನಿರ್ಲಕ್ಷ್ಯ ಹಾಗೂ ನಿಯಮ ಪಾಲಿಸದ ಆರೋಪದಡಿ ಪ್ರಗತಿ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಅವರನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.