ಬೆಂಗಳೂರು,ಏ.3- ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮುಂದಿನ 10ರಿಂದ 20 ವರ್ಷಗಳ ಕಾಲ ಅಧಿಕಾರ ನಡೆಸಲಿದ್ದು, ನಾವು ಎಲ್ಲೂ ಹೋಗುವುದಿಲ್ಲ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷವು ಅತಿಹೆಚ್ಚು ಸದಸ್ಯತ್ವ ಪಡೆದ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ನಿಟ್ಟಿನಲ್ಲಿ ಮನೆ ಮನೆಗೆ ತೆರಳಿ ಪಕ್ಷದ ಮಹತ್ವ ತಿಳಿಸುವ ಕಾರ್ಯಕ್ರಮ ನಡೆಸಲಿದ್ದೇವೆ. ಇದರೊಂದಿಗೆ 15 ಲಕ್ಷ ಸದಸ್ಯರಿಗೆ ಸೈದ್ಧಾಂತಿಕ ಬದ್ಧತೆಯಿಂದ ಸಕ್ರೀಯವಾಗಿ ಪಾಲ್ಗೊಳ್ಳುವಿಕೆ,
ರಾಜಕೀಯ ಮತ್ತು ರಾಜಕಿಯೇತರ ಚಟವಟಿಕೆಗಳ ಬಗ್ಗೆ ತಿಳುವಳಿಕೆ ನೀಡಲು ತರಬೇತಿ ನೀಡಲಿದ್ದೇವೆ ಎಂದು ಹೇಳಿದರು. ಬಿಜೆಪಿ 9.25 ಕೋಟಿ ಸದಸ್ಯರು ನೋಂದಣಿಯಾಗಿದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ನಿಟ್ಟಿನಲ್ಲಿ ಮನೆ ಮನೆಗೆ ತೆರಳಿ ಸಂಪರ್ಕ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ರಾಷ್ಟ್ರಾದ್ಯಂತ ಇರುವ 23 ಲಕ್ಷ ಪೌರಕಾರ್ಮಿಕರ ಕುಟುಂಬಗಳಿಗೆ ಪ್ಯಾಕೇಜ್ ನೀಡಲಾಗಿದೆ. ಈಗಾಗಲೇ ನಮ್ಮ ಸರ್ಕಾರ ಮೇಕ್ ಇನ್ ಇಂಡಿಯ, ಬೇಟಿ ಬಚಾವ್,ಬೇಟಿ ಪಡಾವೊ, ನಮಾಮಿ ಗಂಗೆ, ಜನದನ್, ಅಟಲ್ಜಿ ಪಿಂಚಣಿಯಂತಹ ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದು ದೇಶದ ಜನರ ಅಭಿವೃದ್ದಿಗೆ ಸದೃಢ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಮೋದಿ ಸರ್ಕಾರ ಮುಂದಿನ 20 ವರ್ಷಗಳು ಮುನ್ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ಸ್ವಾತಂತ್ರ್ಯ ನಂತರದ ಭಾರತದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೇಸ್ಸೇತರ ಸರ್ಕಾರವಾಗಿದೆ. 2014ನೇ ಇಸವಿ ಬಿಜೆಪಿಗೆ ವಿಜಯದ ವರ್ಷವಾಗಿತ್ತು. ಜಾರ್ಖಂಡ್, ಹರಿಯಾಣ, ಉತ್ತರ ಭಾರತದಲ್ಲೂ ಬಹಳಷ್ಟು ಮಂದಿ ಬಿಜೆಪಿಗೆ ಬೆಂಬಲಿಸಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ 17 ಕೋಟಿ ಮತದಾರರಲ್ಲಿ ಅತಿಹೆಚ್ಚು ಮತ ಪಡೆದು ಮುನ್ನಡೆಯಿತು.
ಇದೀಗ ನಡೆಯುತ್ತಿರುವ ಸದಸ್ಯತ್ವ ಅಭಿಯಾನಕ್ಕೆ ಕೇರಳ, ಅಸ್ಸಾಂ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲೂ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ನಮಾಮಿ ಗಂಗೆ ಎಂಬುದು ಜೀವಜಲದ ಶುದ್ಧೀಕರಣಕ್ಕೆ ನಡೆಸುತ್ತಿರುವ ಒಂದು ವಿನೂತನ ಕಾರ್ಯಕ್ರಮ ಎಂದು ಅಭಿಪ್ರಾಯಪಟ್ಟರು. ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವವಿದೆ. ಕಾರ್ಯಕರ್ತರನ್ನು ಗುರುತಿಸಿ ಪ್ರಮುಖ ಸ್ಥಾನ ನೀಡುವ ಪರಿಪಾಠವಿದೆ ಎಂದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರ ಬರೀ ಹಗರಣಗಳಲ್ಲೇ ಆರು ದಶಕಗಳನ್ನು ಕಳೆದಿದೆ. ಮುಂದಿನ ಬಿಹಾರ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಸ್ವತಂತ್ರವಾಗಿ ಮುನ್ನಡೆಯಲಿದೆ. ಕಳೆದ ಬಾರಿಯಂತೆ ಯಾವುದೇ ಪಕ್ಷದೊಂದಿಗೆ ಒಗ್ಗೂಡಿ ಚುನಾವಣೆ ಎದುರಿಸುವುದಿಲ್ಲ ಎಂದರು.
ಕಾರ್ಯಕಾರಣಿಯಲ್ಲಿ ಅಮಿತ್ ಷಾ ಭಾಷಣದ ವಿವರವನ್ನು ಸುದ್ದಿಗೋಷ್ಠಿಯಲ್ಲಿ ನಡೆಸಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಉಪಸ್ಥಿತರಿದ್ದರು. ರಾಷ್ಟ್ರೀಯ ಕಾರ್ಯಕಾರಣಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಪ್ರಧಾನಿ ಮೋದಿ, ಅಮಿತ್ ಷಾ, ಎಲ್.ಕೆ.ಅಡ್ವಾಣಿ, ಅರುಣ್ ಜೇಟ್ಲಿ ಅವರನ್ನು ಸ್ವಾಗತಿಸಿದರು. ಕಾರ್ಯಕಾರಣಿಯಲ್ಲಿ ಮಹಾರಾಷ್ಟ್ರ, ಗೋವಾ, ಹರಿಯಾಣ, ಜಮ್ಮುಕಾಶ್ಮೀರದ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.